ಬೆಂಗಳೂರು: 'ಪೊಗರು' ಬಿಡುಗಡೆಯ ಹಂತಕ್ಕೆ ಬಂದಿದೆ. 'ದುಬಾರಿ' ಇನ್ನೇನು ಶುರುವಾಗುವುದರಲ್ಲಿದೆ. ಈ ಮಧ್ಯೆ, ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ.
ಎರಡು ವರ್ಷಗಳ ಹಿಂದೆಯೇ ಧ್ರುವ, ನಿರ್ಮಾಪಕರಾದ ಉದಯ್ ಮೆಹ್ತಾ ಮತ್ತು ರಾಘವೇಂದ್ರ ಹೆಗ್ಡೆ ಅವರಿಂದ ಅಡ್ವಾನ್ಸ್ ತೆಗೆದುಕೊಂಡಿದ್ದು, ಅವರಿಗಾಗಿ ಚಿತ್ರ ಮಾಡಿಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಅದರಂತೆ, ಈಗಾಗಲೇ ಉದಯ್ ಮೆಹ್ತಾ ನಿರ್ಮಾಣದ 'ದುಬಾರಿ' ಚಿತ್ರದಲ್ಲಿ ಧ್ರುವ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ, ರಾಘವೇಂದ್ರ ಹೆಗ್ಡೆ ಅವರೊಂದಿಗೆ ಇರುವ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ ಧ್ರುವ. ಈ ಮೂಲಕ ತಮ್ಮ ಮುಂದಿನ ಚಿತ್ರ ರಾಘವೇಂದ್ರ ಅವರಿಗೆ ಎಂಬ ಹಿಂಟ್ ಕೊಟ್ಟಿದ್ದಾರೆ.
ರಾಘವೇಂದ್ರ ಹೆಗ್ಡೆ ಜತೆಗೆ ಇರುವ ಒಂದು ಫೋಟೋವನ್ನು ಧ್ರುವ, ಬುಧವಾರ ಮಧ್ಯಾಹ್ನ ಶೇರ್ ಮಾಡಿಕೊಂಡಿದ್ದರು. 'ರಾಘವೇಂದ್ರ ಒಂದು ಕಥೆ ಹೇಳಿದರು. ಅದ್ಭುತವಾದ ಫಸ್ಟ್ ಹಾಫ್. ಕಥೆ ಕೇಳಿ ಮನಸ್ಸು ಫ್ರೆಶ್ ಆಯಿತು' ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರ ಯಾವಾಗ ಶುರುವಾಗಬಹುದು ಎಂದು ಈಗಲೇ ಹೇಳುವುದು ಕಷ್ಟ. 'ದುಬಾರಿ' ಮುಗಿಯುವುದಕ್ಕೆ ಇನ್ನೂ ಒಂದಿಷ್ಟು ಸಮಯ ಬೇಕು. ಬಹುಶಃ ಮುಂದಿನ ವರ್ಷದ ಕೊನೆಗೆ 'ದುಬಾರಿ' ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆ ನಂತರ ಈ ಚಿತ್ರ ಪ್ರಾರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: 2021ರ ಮೊದಲ ಚಿತ್ರವಾಗಿ ‘ರಾಜತಂತ್ರ’
ಅಂದಹಾಗೆ, ರಾಘವೇಂದ್ರ ಹೆಗ್ಡೆ ಇದಕ್ಕೂ ಮುನ್ನ ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರವನ್ನು ನಿರ್ದೇಶಿಸಿದ್ದರು. ಆ ನಂತರ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಇದೀಗ ಧ್ರುವ ಅಭಿನಯದ ಹೊಸ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದು, ಈ ಚಿತ್ರದ ಬಗ್ಗೆ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.