ಕನ್ನಡ ಚಿತ್ರರಂಗದಲ್ಲಿ ಚಿತ್ರತಂಡಗಳು ಹೊಸ ಜಾನರ್ ಚಿತ್ರಗಳ ಮೂಲಕ ಜನರನ್ನು ರಂಜಿಸಲು ಪ್ರಯತ್ನಿಸುತ್ತಿರುತ್ತವೆ. ಆ ಸಾಲಿಗೆ ಹೊಸ ಸೇರ್ಪಡೆ ‘ಧ್ರುವ 369’. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿತು. ನಿರ್ದೇಶಕ ಎಸ್ಎಸ್ ಶಂಕರ್ನಾಗ್ ಅವರೇ ಚಿತ್ರಕ್ಕೆ ಕಥೆ ಬರೆದಿದ್ದು, ಅವರಿಗೆ ಪುರಾಣದ ಕಥೆಗಳೇ ಸ್ಪೂರ್ತಿಯಂತೆ.
‘ವಿಜ್ಞಾನ ಮತ್ತು ಪುರಾಣ ಮಿಶ್ರಣಗೊಂಡ ಅಂಶಗಳು ಇದರಲ್ಲಿರಲಿದೆ. ಚಿತ್ರವು ಫ್ಯಾಂಟಸಿಯಂತೆ ಸಾಗುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಸಂಸ್ಕೃತ ಶ್ಲೋಕಗಳನ್ನೂ ಬಳಸಿಕೊಂಡಿದ್ದೇವೆ. ಶೇಕಡಾ 40ರಷ್ಟು ಗ್ರಾಫಿಕ್ಸ್ ನಿಂದ ಕೂಡಿರಲಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಶಂಕರ್ನಾಗ್.
ಇದೇ ಮೊದಲ ಬಾರಿಗೆ ನಟ ರಾಘವೇಂದ್ರ ರಾಜ್ಕುಮಾರ್ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ಭಟ್, ಪ್ರತಿಭಾ, ಚಂದನಾ, ರಮ್ಯಾ, ಚಂದ್ರಿಕಾ ಪ್ರಮುಖ ತಾರಾಗಣದಲ್ಲಿದ್ದಾರೆ. ಸತೀಶ್ ಬಾಬು ಸಂಗೀತ, ಹರ್ಷ ಪದ್ಯಾಣ ಛಾಯಾಗ್ರಹಣವಿದ್ದು ಬೆಂಗಳೂರು, ಮಂಗಳೂರು, ಉಡುಪಿ, ಮುರುಡೇಶ್ವರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚಿತ್ರೀಕರಣ ನಡೆಯಲಿದೆ.