ಸಿನಿವಾಣಿ

ಹಂಪಿ ಎಕ್ಸ್​ಪ್ರೆಸ್​ ಏರಿದ ಧರ್ಮಣ್ಣ ; "ರಾಜಯೋಗ' ಯಶಸ್ಸಿನ ಬಳಿಕ ನಾಯಕನಾಗಿ ಎರಡನೇ ಚಿತ್ರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ರಾಮಾ ರಾಮಾ ರೇ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಧರ್ಮಣ್ಣ ಕಡೂರ್​ "ಸಖತ್​', "ಮದಗಜ', "ದಿಲ್​ಖುಷ್​', "ಉಪಾಧ್ಯಕ್ಷ' ಸೇರಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಹುತೇಕ ಹಾಸ್ಯನಟನಾಗಿ ಮಿಂಚಿದ್ದಾರೆ. ಕಳೆದ ವರ್ಷ "ರಾಜಯೋಗ' ಚಿತ್ರದ ಮೂಲಕ ನಾಯಕನಾದ ಅವರಿಗೆ, ಅದರ ಯಶಸ್ಸಿನ ಬಳಿಕ ಹೀರೋ ಆಗಿ ಎರಡನೇ ಚಿತ್ರ ಪ್ರಾರಂಭಿಸಿದ್ದಾರೆ. ಚಿತ್ರದ ಹೆಸರು "ಹಂಪಿ ಎಕ್ಸ್​ಪ್ರೆಸ್​'. ರಂಗಭೂಮಿ ಹಿನ್ನೆಲೆಯ ಪಾಟೀಲ್​ ಲಿಂಗನಗೌಡ ಹರಪನಹಳ್ಳಿ ಈ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನೆರವೇರಿಸಲಾಗಿದೆ.

"ಹಂಪಿ ಎಕ್ಸ್​ಪ್ರೆಸ್​'ನಲ್ಲಿ ಇಬ್ಬರು ನಾಯಕರಿದ್ದು, ರಾಮ್​ ನಾಡಗೌಡ ಮತ್ತು ಧರ್ಮಣ್ಣ ನಟಿಸುತ್ತಿದ್ದಾರೆ. "ನಾನಿಲ್ಲಿ ಫೋಟೋಗ್ರರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ತಿಂಗಳಂತ್ಯದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಆನೆಗುಂದಿ ಮತ್ತು ಹಂಪಿಯ ನಡುವೆ ನದಿಯಲ್ಲಿ ಓಡಾಡುವ ಲಾಂಚ್​ಗೆ ಹಂಪಿ ಎಕ್ಸ್​ಪ್ರೆಸ್​ ಎನ್ನುತ್ತಾರೆ. ಅಲ್ಲಿಯೇ ನಡೆದ ನೈಜ ಟನೆಯಾಧಾರಿತ ಚಿತ್ರವಾದ ಕಾರಣ ಆ ಟೈಟಲ್​ ಸೂಕ್ತ ಅಂತನ್ನಿಸಿತು' ಎಂದು ಮಾಹಿತಿ ನೀಡುತ್ತಾರೆ ಧರ್ಮಣ್ಣ ಕಡೂರ್​. "ರಾಜಯೋಗ' ಚಿತ್ರದ ಬಳಿಕ ಅವರಿಗೆ ನಾಯಕನಾಗಿ ಹಲವು ಅವಕಾಶಗಳು ಬಂದಿವೆಯಂತೆ. "ಆದರೆ, ಮಾಸ್​, ಲವ್​, ಫೈಟ್​ ಸಬ್ಜೆಕ್ಟ್​ಗಳು ನನಗೆ ಹೊಂದುವುದಿಲ್ಲ. ನೈಜತೆಗೆ ಹತ್ತಿರುವಿದ್ದರೆ ಚಂದ. ಅನಂತ್​ ನಾಗ್​, ಶಶಿಕುಮಾರ್​, ಕಾಶೀನಾಥ್​ ಅವರು ನಟಿಸುತ್ತಿದ್ದ ಕೌಟುಂಬಿಕ ಕಥೆಗಳು ನನಗೆ ಹೆಚ್ಚು ಸೂಟ್​ ಆಗುತ್ತವೆ. ಕೆಲ ತಿಂಗಳಿಂದ ಎಂಟು, ಒಂಭತ್ತು ಕಥೆಗಳನ್ನು ಕೇಳಿದ್ದೇನೆ. ಅವುಗಳಲ್ಲಿ ಎರಡು ಕಥೆ ಓಕೆ ಆಗಿದೆ. ಅದರಲ್ಲಿ ಒಂದು ಇದೀಗ ಸೆಟ್ಟೇರಿದೆ' ಎಂದು ಹೇಳಿಕೊಳ್ಳುತ್ತಾರೆ ಧರ್ಮಣ್ಣ ಕಡೂರ್​.

ಸದ್ಯ ಅವರು "ವಿದ್ಯಾಪತಿ', "ಜಾಗಟೆ ಜೆನ್​ಸೆಟ್ಸ್​', ಗುರುನಂದನ್​ ಹೊಸ ಪ್ರಾಜೆಕ್ಟ್​, "ಎಕ್ಸ್​ ಆ್ಯಂಡ್​ ವೈ' ಸೇರಿ ಕೆಲ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.