ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಚಿತ್ರ: ನೈಟ್ ರೋಡ್
ನಿರ್ದೇಶನ ಮತ್ತು ನಿರ್ಮಾಣ: ಗೋಪಾಲ್ ಹಳೇಪಾಳ್ಯ
ತಾರಾಗಣ: ಧರ್ಮ, ಜ್ಯೋತಿ ರೈ, ಗೋವಿಂದೇಗೌಡ, ಗಿರಿಜಾ ಲೋಕೇಶ್, ರೇಣು ಶಿಕಾರಿ, ರಂಗಾಯಣ ಮಂಜು, ಆರ್ಯನ್ ಶೆಟ್ಟಿ, ರವಿ ಕಿಶೋರ್ ಮುಂತಾದವರು
ಪಾಪಕ್ಕೆ ಪ್ರಾಯಶ್ಚಿತವಿದೆಯೇ? ಆಯಾ ಜನ್ಮದಲ್ಲಿ ಮಾಡಿದ ಕುಕರ್ಮಗಳಿಗೆ, ಆ ಜನ್ಮದಲ್ಲಿಯೇ ಶಿಕ್ಷೆ ಸಿಗುತ್ತದೆಯೇ? ಪ್ರಪಂಚದಲ್ಲಿ ನಮ್ಮಂತೆಯೇ ಏಳು ಜನ ಇರುತ್ತಾರಂತೆ. ಅಂಥವರು ನಮ್ಮ ಸುತ್ತಮುತ್ತಲೇ ಇದ್ದರೆ? ಹೀಗೆ ನಮ್ಮಂತೆ ಕಾಣುವವರಿಗೂ, ನಮಗೂ ಏನಾದರೂ ಲಿಂಕ್ ಇರುತ್ತಾ? ಇಂತಹ ಹಲವು ಪ್ರಶ್ನೆಗಳಿಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳೊಂದಿಗೆ ಆಧ್ಯಾತ್ಮದ ಮೂಲಕ ನೈಟ್ ರೋಡ್ ಚಿತ್ರದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಗೋಪಾಲ್ ಹಳೇಪಾಳ್ಯ.
ದಕ್ಷ (ಧರ್ಮ). ಹೆಸರಿಗೆ ತಕ್ಕಂತೆಯೇ ದಕ್ಷ ಪೊಲೀಸ್ ಅಧಿಕಾರಿ. ಆದರೆ, ಆತನ ಸಹೋದರ ಕಲ್ಯಾಣ್ ಒಬ್ಬ ಕ್ರಿಮಿನಲ್. ಯುವತಿಯೊಬ್ಬಳ ಕಿಡ್ನ್ಯಾಪ್ ಪ್ರಕರಣದ ಬೆನ್ನತ್ತುವ ದಕ್ಷನಿಗೆ, ತಮ್ಮ ಕಲ್ಯಾಣನೇ ಅಪಹರಣಕಾರ ಅಂತ ತಿಳಿಯುತ್ತದೆ. ಯುವತಿಯನ್ನು ರಕ್ಷಿಸಿದರೂ, ಕಲ್ಯಾಣ್ ದಕ್ಷನಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ, ನೈಟ್ ರೋಡಲ್ಲಿ ಹೋಗುವಾಗ ಕಲ್ಯಾಣ್ ಅಪಘಾತಕ್ಕೀಡಾಗಿ ಸಾಯುತ್ತಾನೆ. ಅದು ಕರಾಳ ಅಮವಾಸ್ಯೆಯಲ್ಲಿ ನಡೆದ ಅಪಘಾತ. ಅಂಥ ಅಮಾವಾಸ್ಯೆಯ ದಿನವೇ ಕೆಲ ಅಪಘಾತಗಳು ನಡೆದಿರುವ ಬಗ್ಗೆ ದಕ್ಷನಿಗೆ ತಿಳಿಯುತ್ತದೆ. ಆತ ಎಲ್ಲ ಕೇಸ್ಗಳ ಬೆನ್ನು ಬೀಳುತ್ತಾನೆ. ಒಂದೊಂದೇ ವಿಷಯ ಬಯಲಾಗುತ್ತಾ ಹೋಗುತ್ತದೆ. ಅದೇನು? ಕರಾಳ ಅಮಾವಾಸ್ಯೆಗೂ ಅಪಘಾತಕ್ಕೂ ಏನು ಸಂಬಂಧ? ನೈಟ್ ರೋಡ್ನ ನಿಗೂಢವಾದರೂ ಏನು? ಅಂತ ತಿಳಿಯಲು ಸಿನಿಮಾ ನೋಡಿ…
ಮನಸಿನ ಮಲಿನವ ತೊಳೆದುಕೋ, ದೇಹವು ತಾನಾಗಿ ತಾನೇ ಕಂಗೊಳಿಸುತ್ತದೆ.. ಎನ್ನುವ ಅವಧೂತ ವಿನೋದ್ ಗುರೂಜಿ ಆಗಾಗ ಬಂದು ಈ ನಿಗೂಢಗಳಿಗೆ ಆಧ್ಯಾತ್ಮದ, ಪಾಪ-ಪುಣ್ಯಗಳ ಬಗ್ಗೆ ಹೇಳುತ್ತಾ, ಕಥೆಗೆ ಮತ್ತೊಂದು ದಿಕ್ಕನ್ನೇ ನೀಡುತ್ತಾರೆ. ನಿರ್ದೇಶಕ ಗೋಪಾಲ್ ಹಳೇಪಾಳ್ಯ ಒಂದೊಳ್ಳೆ ಸಸ್ಪೆನ್ಸ್ ಮಿಸ್ಟರಿ ಥ್ರಿಲ್ಲರ್ ಹೇಳುವ ಪ್ರಯತ್ನ ಮಾಡಿದ್ದಾರೆ. ಒಂಚೂರು ಆಚೀಚೆಯಾದರೂ ಪ್ರೇಕ್ಷಕರು ಇಂಟರೆಸ್ಟ್ ಕಳೆದುಕೊಂಡುಬಿಡಬಹುದು ಎಂಬ ಅರಿವಿನಲ್ಲಿಯೇ, ಎಲ್ಲಿಯೂ ವಿನಾಕಾರಣ ಹಾಡು, ಫೈಟ್ ಅಥವಾ ಹಾಸ್ಯದ ಸನ್ನಿವೇಶಗಳನ್ನು ತುರುಕುವ ಸಾಹಸಕ್ಕೆ ಕೈಹಾಕಿಲ್ಲ. ನೇರ ನಿರೂಪಣೆ 122 ನಿಮಿಷಗಳ ನೈಟ್ ರೋಡ್ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ಆದರೂ ಕೆಲವೆಡೆ ಕತ್ತರಿ ಬಳಸುವ ಅವಕಾಶವಿತ್ತು ಅಂತನ್ನಿಸದೇ ಇರದು. ಪ್ರಕರಣ ಸಾಗಿದಂತೆ ಹೊಸ ಹೊಸ ಅಂಶಗಳು ಅನಾವರಣವಾಗುತ್ತಾ ಹೋಗುತ್ತವೆ. ಧರ್ಮ ಇನ್ಸ್ಪೆಕ್ಟರ್ ದಕ್ಷ ಪಾತ್ರವನ್ನು ಜೀವಿಸಿದ್ದಾರೆ. ಗೋವಿಂದೇಗೌಡ ಮತ್ತು ರಂಗಾಯಣ ಮಂಜು ನಗಿಸಲು ಯತ್ನಿಸಿದ್ದಾರೆ. ಉಳಿದಂತೆ ಜ್ಯೋತಿ ರೈ, ಗಿರಿಜಾ ಲೋಕೇಶ್, ರೇಣು, ಆರ್ಯನ್, ರವಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಸ್ಪೆನ್ಸ್, ಮಿಸ್ಟರಿ, ಥ್ರಿಲ್ಲರ್ ಅಂಶಗಳನ್ನು ಇಷ್ಟಪಡುವವರು ಒಮ್ಮೆ ನೈಟ್ ರೋಡ್ನಲ್ಲಿ ಜರ್ನಿ ಮಾಡಬಹುದು.