ಸಿನಿವಾಣಿ

ತಲ್ವಾರ್​​ ಹಿಡಿದು ಥಿಯೇಟರ್​ಗೆ ಎಂಟ್ರಿ ಕೊಡಲು ರೆಡಿಯಾದ ಧರ್ಮ ಕೀರ್ತಿರಾಜ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಬಿಗ್​ಬಾಸ್​ ಕನ್ನಡ ಸೀಸನ್​ 11 ಮುಗಿದ ಬೆನ್ನಲ್ಲೇ ನಟ ಧರ್ಮ ಕೀರ್ತಿರಾಜ್​ ತಲ್ವಾರ್​ ಹಿಡಿದಿದ್ದಾರೆ. ಹೌದು, ಅವರು ನಟಿಸಿರುವ ತಲ್ವಾರ್​ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ಮುಮ್ತಾಜ್​ ಚಿತ್ರದ ನಿರ್ದೇಶಕ ಮುರಳಿ ಆ್ಯಕ್ಷನ್​-ಕಟ್​ ಹೇಳಿದ್ದು ಇತ್ತೀಚೆಗಷ್ಟೆ ಟ್ರೇಲರ್​ ಮತ್ತು ಮದರ್​ ಸೆಂಟಿಮೆಂಟ್​ ಸಾಂಗ್​ ರಿಲೀಸ್​ ಮಾಡಲಾಯಿತು. ಈ ಬಾರಿಯ ಬಿಗ್​ಬಾಸ್​ ಸೀಸನ್​ನಲ್ಲಿ ಸ್ಪರ್ಧಿಗಳಾಗಿದ್ದ ಐಶ್ವರ್ಯಾ ಸಿಂಧೋಗಿ, ಅನುಷಾ ರೈ, ಶಿಶಿರ್​ ಶಾಸ್ತ್ರಿ, ಅವಿನಾಶ್​ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರದಲ್ಲಿ ಕೆಲಸ ಮಾಡಿರುವ ತಂತ್ರಜ್ಱರ ಅಮ್ಮಂದಿರೇ ಚಿತ್ರದ ಮದರ್​ ಸೆಂಟಿಮೆಂಟ್​ ಸಾಂಗ್​ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮುರಳಿ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮುಮ್ತಾಜ್​ ಚಿತ್ರದಲ್ಲಿ ಧರ್ಮ ಅವರಿಂದ ಕಣ್ಣೀರು ಹಾಕಿಸಿದ್ದೆ. ಹೀಗಾಗಿಯೇ ಈ ಚಿತ್ರದಲ್ಲಿ ಅವರ ಕೈಯಲ್ಲಿ ಲಾಂಗ್​ ಕೊಟ್ಟಿದ್ದೇನೆ. ಇದು ಬರೀ ರೌಡಿಸಂ ಕಥೆ ಮಾತ್ರವಲ್ಲ, ಸಂಬಂಧಗಳ ಸುತ್ತ ನಡೆಯುವ ಕಥೆ. ನಾನು ಹಾಸ್ಟೆಲ್​ನಲ್ಲಿದ್ದಾಗ ನಡೆದಿದ್ದ ನೈಜ ಘಟನೆಯಿಟ್ಟುಕೊಂಡು ಈ ಕಥೆ ಮಾಡಿಕೊಂಡಿದ್ದೇನೆ, ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ನಾಯಕ ಧರ್ಮ ಕೀರ್ತಿರಾಜ್​, ಇದೊಂದು ಆ್ಯಕ್ಷನ್​, ಮದರ್​ ಸೆಂಟಿಮೆಂಟ್​ ಕಥೆಯ ಸಿನಿಮಾ. ದುಡ್ಡಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರೋ ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಉದ್ದ ಕೂದಲು ಬಿಟ್ಟು ಹೊಸ ಲುಕ್​ನಲ್ಲಿ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ, ಎಂದರು. ನಾಯಕಿ ಅದಿತಿ ಎರಡು ಶೇಡ್​ಗಳಲ್ಲಿ ನಟಿಸಿದ ಅನುಭವ ಹಂಚಿಕೊಂಡರು.

ಧರ್ಮ, ಅದಿತಿ ಜತೆ ತಲ್ವಾರ್​ನಲ್ಲಿ ಜೆಕೆ, ಅವಿನಾಶ್​, ಶರತ್​ ಲೋಹಿತಾಶ್ವ, ಮಜಾಭಾರತ ಅವಿನಾಶ್​ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್​ ಕೆಬಿ ಸಂಗೀತವಿರಲಿದ್ದು, ಸಿನಿಮಾ ಇದೇ ಫೆ.7ರ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ.