ಸಿನಿವಾಣಿ

ಬಂಪರ್​​ನಲ್ಲಿ ಧನ್ವೀರ್​; ಶಿಷ್ಯನ ಚಿತ್ರಕ್ಕೆ ದರ್ಶನ್ ಸಾಥ್

ಬೆಂಗಳೂರು: ‘ಬಜಾರ್’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಯುವಪ್ರತಿಭೆ ಧನ್ವೀರ್, ಮೊದಲ ಚಿತ್ರದ ಮೂಲಕವೇ ಭರವಸೆಯ ನಟ ಎಂದು ಗುರುತಿಸಿಕೊಂಡವರು. ಇದೀಗ ‘ಬಂಪರ್’ ಆಫರ್ ಮೂಲಕ ಮತ್ತೆ ಬಂದಿದ್ದಾರೆ. ‘ಬಂಪರ್’ ಚಿತ್ರದಲ್ಲಿ ಧನ್ವೀರ್ ನಾಯಕನಾಗಿ ಅಭಿನಯಿಸುತ್ತಿದ್ದು, ನಗರದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತು. ನಟ ದರ್ಶನ್ ಈ ವೇಳೆ ಭಾಗಿಯಾಗಿ ಚಿತ್ರತಂಡಕ್ಕೆ ಶುಭಕೋರಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದಿನಿಂದಲೂ ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುತ್ತ ಬಂದವರು. ಅದರಲ್ಲೂ ದರ್ಶನ್ ಶಿಷ್ಯ ಅಂತಲೇ ಗುರುತಿಸಿಕೊಂಡಿರುವ ಧನ್ವೀರ್ ಚಿತ್ರದ ಪ್ರಮುಖ ಕಾರ್ಯಕ್ರಮಗಳಲ್ಲಿ ದರ್ಶನ್ ಇದ್ದೇ ಇರುತ್ತಾರೆ. ಧನ್ವೀರ್ ಅಭಿನಯದ ಮೊದಲ ಚಿತ್ರ ‘ಬಜಾರ್’ ಹಾಡೊಂದನ್ನು ಬಿಡುಗಡೆ ಮಾಡಿದ್ದ ದರ್ಶನ್, ಸಿನಿಮಾ ನೋಡಿ ಶಿಷ್ಯನ ಅಭಿನಯ ಮೆಚ್ಚಿದ್ದರು. ‘ಬಂಪರ್’ ಚಿತ್ರದ ಧನ್ವೀರ್ ಫಸ್ಟ್​ಲುಕ್ ಬಿಡುಗಡೆ ಮಾಡಿದ್ದು ಕೂಡ ದರ್ಶನ್. ಇದೀಗ ಶಿಷ್ಯನ ಚಿತ್ರದ ಮುಹೂರ್ತ ಸಂದರ್ಭದಲ್ಲೂ ಭಾಗಿಯಾಗಿ ಶುಭಕೋರಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಚಿತ್ರದಲ್ಲಿ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಧನ್ವೀರ್, ‘ಬಂಪರ್’ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ‘ಅಲೆಮಾರಿ’, ‘ಡಾರ್ಲಿಂಗ್’, ‘ಕಾಲೇಜ್​ಕುಮಾರ್’, ‘ವಿಕ್ಟರಿ 2’ ಚಿತ್ರಗಳನ್ನು ನಿರ್ದೇಶಿಸಿದ್ದ ಹರಿ ಸಂತೋಷ್ ಆಕ್ಷನ್-ಕಟ್ ಹೇಳಲಿದ್ದಾರೆ. ಮನರಂಜನೆ ಜತೆಗೆ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಚಿತ್ರದಲ್ಲಿ ಇರಲಿವೆಯಂತೆ. ‘ಬಂಪರ್’ ನಾಯಕಿ , ಉಳಿದ ತಾರಾಗಣದ ಬಗ್ಗೆ ನಿರ್ದೇಶಕರಿನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ.