ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಬಜಾರ್', "ಬೈಟೂ ಲವ್', "ಕೈವ' ಬಳಿಕ ಧನ್ವೀರ್ ನಟಿಸಿರುವ ನಾಲ್ಕನೇ ಸಿನಿಮಾ "ವಾಮನ'. ಇಲ್ಲಿ ಅವರಿಗೆ "ಏಕ್ಲವ್ಯಾ', "ಯುಐ' ಖ್ಯಾತಿಯ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. "ವಾಮನ'ನಿಗೆ ಶಂಕರ್ ರಾಮನ್ ಆ್ಯಕ್ಷನ್-ಕಟ್ ಹೇಳಿದ್ದು, ಇತ್ತೀಚೆಗಷ್ಟೆ ಚಿತ್ರದ ನಾಲ್ಕನೇ ಸಾಂಗ್ ರಿಲೀಸ್ ಮಾಡಲಾಗಿದೆ. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಈ ಹಾಡನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಪ್ರಮೋದ್ ಮರವಂತೆ ಬರೆದಿರುವ ತಾಯಿ-ಮಗನ ಬಾಂಧವ್ಯದ ಕುರಿತ ಈ ಹಾಡಿಗೆ ಅಜನೀಷ್ ಲೋಕನಾಥ್ ಸಂಗೀತದಲ್ಲಿ ವೆಂಕಟೇಶ್ ಡಿ.ಸಿ. ಧ್ವನಿಯಾಗಿದ್ದಾರೆ. ನಾಯಕ ಧನ್ವೀರ್, "ಇದು ನನ್ನ ನಾಲ್ಕನೇ ಸಿನಿಮಾ. ಅಮ್ಮ-ಮಗನ ಬಾಂಧವ್ಯದ ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆಯಿದೆ' ಎಂದರು. ನಿರ್ದೇಶಕ ಶಂಕರ್ ರಾಮನ್, "ಈ ಹಾಡನ್ನು ವಿಶ್ವದ ಎಲ್ಲ ತಾಯಂದಿರಿಗೆ ಅರ್ಪಿಸುತ್ತೇನೆ. ನನಗೆ ಮದರ್ ಸೆಂಟಿಮೆಂಟ್ ಇರುವ "ಕೈ ತುತ್ತು ಕೊಟ್ಟವಳೆ ಐ ಲವ್ ಯೂ ಮದರ್ ಇಂಡಿಯಾ', "ಬೇಡುವೆನು ವರವನು ಕೊಡೆ ತಾಯಿ ಜನ್ಮವನು' ಹಾಡುಗಳು ತುಂಬ ಇಷ್ಟ. ಅದೇ ರೀತಿಯ ಹಾಡು ನಮ್ಮ "ವಾಮನ' ಚಿತ್ರಕ್ಕೂ ಬೇಕು ಅಂತ ಪ್ರಮೋದ್ ಮರವಂತೆ ಅವರನ್ನು ಕೇಳಿದ್ದೆ. ಅವರು ಈ ಸುಂದರ ಹಾಡನ್ನು ಬರೆದುಕೊಟ್ಟರು' ಎಂದು ಹೇಳಿಕೊಂಡರು.
ಧನ್ವೀರ್, ರೀಷ್ಮಾ ಜತೆ ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್.ಪೇಟೆ, ಕಾಕ್ರೋಚ್ ಸುಧೀ ಪ್ರಮುಖ ತಾರಾಗಣದಲ್ಲಿ ನಟಿಸಿರುವ "ವಾಮನ' ಇದೇ ಏ.10ರಂದು ತೆರೆಗೆ ಬರಲಿದೆ.