ಸಿನಿವಾಣಿ

ಫ್ರೆಂಡ್ಸ್​ ಆಗಿದ್ದ ಧನುಷ್​-ನಯನತಾರಾ ಈಗ ಕಿತ್ತಾಡಿಕೊಳ್ಳುತ್ತಿರುವುದ್ದೇಕೆ? ಆ ಒಂದು ಸಿನಿಮಾನೇ ಇದಕ್ಕೆಲ್ಲ ಕಾರಣ | Nayanthara

ಚೆನ್ನೈ: ಸದ್ಯ ತಮಿಳುನಾಡು ಸಿನಿರಂಗದಲ್ಲಿ ಲೇಡಿ ಸೂಪರ್​​ಸ್ಟಾರ್​ ನಯನತಾರಾ ( Nayanthara ) ಮತ್ತು ಸ್ಟಾರ್​ ನಟ​ ಧನುಷ್ ಹೆಸರು ಬಹಳ ಚರ್ಚೆಯಲ್ಲಿದೆ.​ ಅದಕ್ಕೆ ಕಾರಣ ನಯನತಾರಾ ಅವರು ಬರೆದ ಸುದೀರ್ಘ ಪತ್ರ. ಆ ಪತ್ರದಲ್ಲಿ ಧನುಷ್​ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ. ಏಕೆಂದರೆ, ಓಟಿಟಿ ಫ್ಲಾಟ್​ಫಾರ್ಮ್​ ನೆಟ್‌ಫ್ಲಿಕ್ಸ್ ನಯನತಾರಾ ಅವರ ಜೀವನದ ಕುರಿತು ಸಾಕ್ಷ್ಯಚಿತ್ರವನ್ನು ಮಾಡಿದೆ. ಇದಕ್ಕೆ ಸಂಬಂಧಿಸಿದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅದರಲ್ಲಿ ನಾನುಮ್​ ರೌಡಿ ಥಾನ್ ಚಿತ್ರಕ್ಕೆ ಸಂಬಂಧಿಸಿದ ಕೆಲ ಶೂಟಿಂಗ್​ ವಿಡಿಯೋವನ್ನು ಬಳಸಲಾಗಿದೆ. ನಿರ್ಮಾಪಕ ಧನುಷ್ ಅವರ ಅನುಮತಿಯಿಲ್ಲದೆ ವಿಡಿಯೋ ಬಳಸಿದ್ದಕ್ಕೆ 10 ಕೋಟಿ ರೂ. ಪರಿಹಾರ ನೀಡುವಂತೆ ನಯನತಾರಾಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ ನಯನತಾರಾ ಸುದೀರ್ಘ ಪತ್ರ ಬರೆಯುವ ಮೂಲಕ ಧನುಷ್​ ಅವರ ಜನ್ಮವನ್ನು ಜಾಲಾಡಿದ್ದಾರೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಕೂಡ ಧನುಷ್ ಅವರನ್ನು ಟೀಕಿಸಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

ಸದ್ಯ ಧನುಷ್​ ಮತ್ತು ನಯನತಾರಾ ನಡುವಿನ ವಿವಾದ ತಮಿಳುನಾಡಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೆಲವರು ಧನುಷ್​ಗೆ ಬೆಂಬಲ ಸೂಚಿಸಿದರೆ, ಬಹುತೇಕರು ನಯನತಾರಾ ಪರವಾಗಿ ಬ್ಯಾಟ್​ ಬೀಸುತ್ತಿದ್ದಾರೆ. ಇದರ ನಡುವೆ ಧನುಷ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಯನತಾರಾ ವಿರುದ್ಧ ಸೈಬರ್​ ದಾಳಿ ಕೂಡ ನಡೆಸುತ್ತಿದ್ದಾರೆ. ಆದರೆ, ವಾಸ್ತವವಾಗಿ ನಯನತಾರಾ ಮತ್ತು ಧನುಷ್ ಒಂದು ಕಾಲದಲ್ಲಿ ಉತ್ತಮ ಸ್ನೇಹಿತರಾಗಿದ್ದರು. ಆದರೆ, ಈಗ ಇವರಿಬ್ಬರ ನಡುವಿನ ವೈಮನಸ್ಸಿಗೆ ಕಾರಣವೇನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಅಂದಹಾಗೆ ಧನುಷ್ ಮತ್ತು ನಯನತಾರಾ ಈ ಹಿಂದೆ ಯಾರಾಡಿ ನೀ ಮೋಹಿನಿ ಚಿತ್ರದಲ್ಲಿ ನಟಿಸಿದ್ದರು. ಆಗ ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಸಂದರ್ಶನಗಳಲ್ಲಿ ಮತ್ತು ಚಿತ್ರದ ಪ್ರಚಾರಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಧನುಷ್ ಅವರು ವಿಘ್ನೇಶ್ ಶಿವನ್ ನಿರ್ದೇಶನದ ಹಾಗೂ ನಯನತಾರಾ ಮತ್ತು ವಿಜಯ್ ಸೇತುಪತಿ ನಟನೆಯ ನಾನುಮ್ ರೌಡಿ ಥಾನ್ ಸಿನಿಮಾವನ್ನು ನಿರ್ಮಾಣ ಮಾಡಿದರು.

ಆರಂಭದಲ್ಲಿ ಈ ಚಿತ್ರದ ಬಜೆಟ್ 6 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ಕೊನೆಗೆ ಸುಮಾರು 16 ಕೋಟಿ ಖರ್ಚಾಯಿತು. ಅಲ್ಲದೇ ಈ ಸಿನಿಮಾದ ಶೂಟಿಂಗ್ ಕೂಡ ತುಂಬಾ ತಡವಾಯಿತು. ಈ ವಿಚಾರದಲ್ಲಿ ಧನುಷ್‌ಗೆ ನಿರಾಸೆಯಾಯಿತು. ಇನ್ನು ಈ ಸಿನಿಮಾ ಹಿಟ್ ಆಗಿದ್ದರೂ ಧನುಷ್ ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಬೆಲೆಗೆ ಸಿನಿಮಾ ಮಾರಾಟವಾಯಿತು. ಇದರಿಂದ ಧನುಷ್​ಗೆ ಹೆಚ್ಚಿನ ಲಾಭ ಸಿಗಲಿಲ್ಲ. ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಧನುಷ್​, ವಿಘ್ನೇಶ್​ಗೆ ಶಾಪ ಹಾಕಿದ್ದರು ಎಂಬ ಮಾತು ತಮಿಳು ಚಿತ್ರರಂಗದಲ್ಲಿ ಕೇಳಿ ಬಂದಿತ್ತು. ಇನ್ನು ಈ ಸಿನಿಮಾದಲ್ಲಿ ನಯನತಾರಾ ಅಭಿನಯ ಧನುಷ್‌ಗೆ ಇಷ್ಟವಾಗಲಿಲ್ಲ ಎನ್ನಲಾಗಿದೆ. ಈವೆಂಟ್‌ವೊಂದರಲ್ಲಿ ನಯನತಾರಾ, ಧನುಷ್‌ಗೆ ಈ ಚಿತ್ರದಲ್ಲಿ ನನ್ನ ಅಭಿನಯ ಇಷ್ಟವಾಗದಿದ್ದಕ್ಕೆ ಕ್ಷಮಿಸಿ ಎಂದು ಹೇಳಿದ್ದರು.

ಈ ಸಿನಿಮಾ ಹೆಚ್ಚಿನ ಹಣ ಮತ್ತು ಸಮಯ ತೆಗೆದುಕೊಂಡಿತು ಎಂಬ ಕಾರಣಕ್ಕೆ ಧನುಷ್​ ಅವರು ನಯನತಾರಾ ಮತ್ತು ವಿಘ್ನೇಶ್​ ಮೇಲೆ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಸೀಮಿತ ಬಜೆಟ್​ ಬಿಟ್ಟು ಹೆಚ್ಚಿನ ಬಜೆಟ್​ಗೆ ಒತ್ತಾಯಿಸಿದ್ದಕ್ಕೆ ಧನುಷ್​ಗೆ ವಿಘ್ನೇಶ್​ ಮೇಲೆ ಕೋಪವಿದೆ. ಇನ್ನು ಈ ಚಿತ್ರದ ಮೂಲಕ ನಯನತಾರಾ ಸ್ಟಾರ್ ಹೀರೋಯಿನ್ ಆಗಿದ್ದನ್ನು ಧನುಷ್​ಗೆ ಸಹಿಸಲಾಗಲಿಲ್ಲ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಹಾಗಾಗಿ ಈ ಒಂದು ಸಿನಿಮಾ ಧನುಷ್ ಮತ್ತು ನಯನತಾರಾ ನಡುವಿನ ಅಂತರವನ್ನು ಹೆಚ್ಚಿಸಿತು ಎಂದು ಕಾಲಿವುಡ್​ ಮೂಲಗಳು ತಿಳಿಸಿವೆ.

ಇದೆಲ್ಲ ಒಂದು ಕಡೆಯಾದರೆ, ಇದೇ ಸಿನಿಮಾದಿಂದ ವಿಘ್ನೇಶ್ ಮತ್ತು ನಯನತಾರಾ ಪ್ರೀತಿಯಲ್ಲಿ ಬಿದ್ದರು. ಈ ಸಿನಿಮಾ ತಮ್ಮ ವೃತ್ತಿ ಜೀವನದಲ್ಲಿಯೇ ದೊಡ್ಡ ಹಿಟ್ ಆಗಿದ್ದು, ಈ ಸಿನಿಮಾದಲ್ಲಿ ಉತ್ತಮ ಹಾಡುಗಳಿವೆ ಎಂದು ನಯನತಾರಾ ಹೇಳಿದ್ದಾರೆ. ಹಾಗಾಗಿಯೇ ಈ ಸಿನಿಮಾಗೆ ಸಂಬಂಧಿಸಿದ ಕಂಟೆಂಟ್ ಬಳಕೆಗೆ ಅನುಮತಿ ನೀಡದ ಧನುಷ್, ನಯನತಾರಾ ಟೀಕೆಗೆ ಗುರಿಯಾಗಿದ್ದಾರೆ. ಇವರ ನಡುವೆ ಜಗಳ ಮುಂದುವರಿಯುತ್ತೋ ಅಥವಾ ರಾಜಿಯಾಗುತ್ತಾರೋ ನೋಡಬೇಕಿದೆ.

ನಯನತಾರಾ ಪತ್ರದಲ್ಲೇನಿದೆ?

ತಪ್ಪುಗಳನ್ನು ತಿದ್ದಿಕೊಳ್ಳಲು ಇದೊಂದು ಮುಕ್ತ ಪತ್ರ. ನಿಮ್ಮಂತಹ ಒಳ್ಳೆಯ ನಟ ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಿನಿಮಾ ನನ್ನಂಥವರ ಬದುಕಿಗಾಗಿ ಹೋರಾಟ. ಸಿನಿಮಾಕ್ಕೆ ಸಂಬಂಧವೇ ಇಲ್ಲದ ಕುಟುಂಬದಿಂದ ಬಂದು ಸ್ವಯಂ ಹೋರಾಟದಿಂದ ಬದುಕು ಕಟ್ಟಿಕೊಂಡ ಮಹಿಳೆ. ನನ್ನ ಸಾಕ್ಷ್ಯಚಿತ್ರದ ಬಿಡುಗಡೆಯನ್ನು ನಾನು ಮಾತ್ರವಲ್ಲ, ನನ್ನ ಅಭಿಮಾನಿಗಳೂ ನಿರೀಕ್ಷಿಸಿದ್ದರು. ನನ್ನ ಮತ್ತು ನನ್ನ ಸಂಗಾತಿಯ ಮೇಲಿನ ನಿಮ್ಮ ಸೇಡು, ನಮಗೆ ಮಾತ್ರವಲ್ಲ, ಈ ಯೋಜನೆಯಲ್ಲಿ ಕೆಲಸ ಮಾಡಿದ ಜನರ ಮೇಲೂ ಪರಿಣಾಮ ಬೀರುತ್ತದೆ. ಸಾಕ್ಷ್ಯಚಿತ್ರವು ಚಲನಚಿತ್ರಗಳ ಸ್ಮರಣಿಕೆಗಳನ್ನು ಸಹ ಒಳಗೊಂಡಿದೆ, ಪ್ರಮುಖ ಚಲನಚಿತ್ರ ‘ನಾನುಮ್ ರೌಡಿ ಥಾನ್’ ಅನ್ನು ಒಳಗೊಂಡಿದೆ.

ನಿಮ್ಮ NOC ಪಡೆಯಲು ಎರಡು ವರ್ಷಗಳ ದೀರ್ಘ ಕಾದೆ. ಚಿತ್ರದ ಹಾಡುಗಳು ಅಥವಾ ಕೆಲ ದೃಶ್ಯಗಳನ್ನು ಬಳಸಲು ಬಹಳಷ್ಟು ವಿನಂತಿಗಳನ್ನು ಮಾಡಿಕೊಂಡಾಗ ಅನೇಕ ಬಾರಿ ನಿರಾಕರಿಸಲಾಯಿತು. ಇದರಿಂದ ನನಗೆ ತೀವ್ರ ನೋವಾಯಿತು. ನಮ್ಮ ಮೇಲಿನ ವೈಯಕ್ತಿಕ ದ್ವೇಷವನ್ನು ಈಡೇರಿಸಿಕೊಳ್ಳುವುದು ನೋವಿನ ಸಂಗತಿಯಾಗಿದೆ. ಸಾಕ್ಷ್ಯಚಿತ್ರದ ಟ್ರೇಲರ್ ಹೊರಬಂದ ನಂತರ ನಿಮ್ಮ ವಕೀಲರಿಂದ ನೋಟಿಸ್​ ನೋಡಿ ಆಘಾತಕ್ಕೊಳಗಾಗಿದ್ದೇನೆ. ಕೇವಲ ಮೂರು ಸೆಕೆಂಡ್​ ವಿಡಿಯೋಗೆ ಹತ್ತು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದೀರಿ. ಇದು ನಿಮ್ಮ ಗುಣವನ್ನು ತೋರಿಸುತ್ತದೆ. ನಿಮ್ಮ ಮುಗ್ಧ ಅಭಿಮಾನಿಗಳ ಮುಂದೆ ಆಡಿಯೋ ಲಾಂಚ್‌ಗಳ ವೇದಿಕೆಯಲ್ಲಿ ನೀವು ನಡೆದುಕೊಳ್ಳುವ ಅರ್ಧದಷ್ಟು ಒಳ್ಳೆಯ ವ್ಯಕ್ತಿಯಾಗಿರಲೆಂದು ನಾನು ಬಯಸುತ್ತೇನೆ. ಆದರೆ ನೀವು ಹೇಳುವುದು ಒಂದು ಮತ್ತು ನಡೆದುಕೊಳ್ಳುವ ರೀತಿ ಇನ್ನೊಂದು.

ಸಿನಿಮಾ ಸೆಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ನಿಯಂತ್ರಿಸುವ ನಿರ್ಮಾಪಕ ಸರ್ವಾಧಿಕಾರಿಯಾಗಬಹುದೇ? ನಿಮ್ಮ ನಿರಾಕರಣೆಯನ್ನು ನ್ಯಾಯಾಲಯದಲ್ಲಿ ನೀವು ಸಮರ್ಥಿಸಬಹುದು. ಅದರಲ್ಲಿ ನೈತಿಕ ಅಂಶವೂ ಇದೆ ಎಂದು ನನಗೆ ನೆನಪಿಸುತ್ತದೆ. ಆದರೆ, ದೇವರ ನ್ಯಾಯಾಲಯ ಒಂದಿದೆ. ಒಬ್ಬ ಮುಖವಾಡ ಧರಿಸಿ ಜಗತ್ತಿನ ಮುಂದೆ ನೀಚನಾಗೇ ಉಳಿಯುತ್ತಾನೆ. ಮುಂದಿನ ಆಡಿಯೋ ಲಾಂಚ್‌ಗೆ ಫೇಕ್ ಸ್ಟೋರಿಗಳನ್ನು ಕಟ್ಟಿ ಪಂಚ್ ಲೈನ್‌ಗಳನ್ನು ಸೇರಿಸಿ ಹೇಳುತ್ತೀರಿ. ದೇವರು ಎಲ್ಲವನ್ನು ನೋಡುತ್ತಾನೆ ಎಂಬುದನ್ನು ನೆನಪಿಡಿ ಎಂದು ನಯನತಾರಾ ಪತ್ರವೊಂದನ್ನು ಬರೆದುಕೊಂಡಿದ್ದು, ಇದೀಗ ಕಾಲಿವುಡ್​ನಲ್ಲಿ ಈ ವಿವಾದದ ಸದ್ದು ತುಂಬಾ ಜೋರಾಗಿದೆ. (ಏಜೆನ್ಸೀಸ್​)