Dhanush (ಚಿತ್ರ X) 
ಸಿನಿವಾಣಿ

‘ರಾಯನ್’ಗೆ ರಾಷ್ಟ್ರೀಯ ಪ್ರಶಸ್ತಿ: ಮೌನ ಮುರಿದು ನಟ ಧನುಷ್ ಹೇಳಿದ್ದೇನು? Dhanush

Dhanush: ಇತ್ತೀಚೆಗೆ ಘೋಷಣೆಯಾದ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗಳಲ್ಲಿ ನಟ ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರಕ್ಕೆ ನಟನೆಯ ವಿಭಾಗದಲ್ಲಿ 'ವಿಶೇಷ ಉಲ್ಲೇಖ' (Special Mention) ಪ್ರಶಸ್ತಿ ದೊರೆತಿದ್ದರೆ, ಅವರು ನಿರ್ದೇಶಿಸಿ ನಟಿಸಿದ ರಾಯನ್ ಚಿತ್ರಕ್ಕೆ ಅತ್ಯುತ್ತಮ ತಮಿಳು ಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಆದರೆ, ರಾಯನ್' ಸಿನಿಮಾಗೆ ಈ ಗೌರವ ಸಿಕ್ಕಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಇದೀಗ ಈ ಎಲ್ಲಾ ವಿವಾದಗಳಿಗೆ ನಟ ಧನುಷ್​ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಉತ್ತರಿಸಿದ್ದಾರೆ.

 ಪ್ರಶಸ್ತಿ ವಿವಾದಕ್ಕೆ ಧನುಷ್ ನೀಡಿದ ನೇರ ಪ್ರತಿಕ್ರಿಯೆ

ತಮ್ಮ ಚಿತ್ರದ ಮೇಲಿನ ಟೀಕೆಯನ್ನು ಕ್ರೀಡಾಮನೋಭಾವದಿಂದಲೇ ಸ್ವೀಕರಿಸಿದ ಧನುಷ್​, "ರಾಯನ್ ಚಿತ್ರಕ್ಕೆ ನನಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ ನಿಜ. ಆದರೆ, ಅದೇ ವರ್ಷ ಹಲವಾರು ಅತ್ಯುತ್ತಮ ತಮಿಳು ಸಿನಿಮಾಗಳಿದ್ದವು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆ ಸಿನಿಮಾಗಳ ಅಭಿಮಾನಿಗಳು ತಮ್ಮ ನೆಚ್ಚಿನ ಚಿತ್ರಗಳ ಪರವಾಗಿ ಧ್ವನಿ ಎತ್ತಿದ್ದಾರೆ.  ಅವರ ಪ್ರೀತಿ ಮತ್ತು ಭಾವನೆಗಳನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಎಂದು ಹೇಳಿದರು. 

ಕೈತಪ್ಪಿದ ಪ್ರಶಸ್ತಿಗಳ ನೆನಪು ಹಾಗೂ ಭಾವನಾತ್ಮಕ ಮಾತುಗಳು

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅತ್ಯುತ್ತಮ ಅಭಿನಯ ನೀಡಿದರೂ ಪ್ರಶಸ್ತಿ ಸಿಗದ ಕ್ಷಣಗಳನ್ನು ನೆನಪಿಸಿಕೊಂಡ ಧನುಷ್​,  "ನನ್ನ ವೃತ್ತಿಜೀವನದ ಆರಂಭದಲ್ಲಿ ತೆರೆಕಂಡ 'ಅದು ಒರು ಕನಾ ಕಾಲಮ್' ಚಿತ್ರಕ್ಕೆ ಖಂಡಿತ ಪ್ರಶಸ್ತಿ ಸಿಗುತ್ತದೆ ಎಂದು ಎಲ್ಲರೂ ಹೇಳಿದ್ದರು. ಆಗ ನಾನು ಬಹಳ ಸಣ್ಣವನಾಗಿದ್ದೆ, ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದೆ ಆದರೆ ಸಿಗಲಿಲ್ಲ. ತದನಂತರ ಪುದುಪೇಟೈ, ಮಾಯಕ್ಕಮ್ ಎನ್ನ, 3, ಮರ್ಯಾನ್, ರಾಂಜಣಾ, ವಡ ಚೆನ್ನೈ ಮತ್ತು ಕರ್ಣನ್ ನಂತಹ ಸಿನಿಮಾಗಳಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ಸಮಯದಲ್ಲಿ ನನಗೆ ಪ್ರಶಸ್ತಿಗಳು ಸಿಗಲಿಲ್ಲ ಎಂದು ಹೇಳಿದರು. 
ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲವು ವಿಷಯಗಳು ತಾನಾಗಿಯೇ ನಡೆದು ಹೋಗುತ್ತವೆ. ರಾಯನ್ ವಿಷಯದಲ್ಲೂ ಅದೇ ಆಗಿದೆ. ಸಿನಿಮಾ ಹೇಗೇ ಇರಲಿ, ಅದನ್ನು ಮಾಡಲು ನಾನು ಪಟ್ಟ ಶ್ರಮ ಮತ್ತು ಶ್ರದ್ಧೆ ಪ್ರಾಮಾಣಿಕವಾದದ್ದು. ಒಬ್ಬ ತಮಿಳನಾಗಿ ನನಗೆ ಮತ್ತೆರಡು ರಾಷ್ಟ್ರ ಪ್ರಶಸ್ತಿಗಳು ಬಂದಿವೆ. ಇದನ್ನು ಯಾರೂ ಕಡೆಗಣಿಸಬೇಡಿ, ಬದಲಾಗಿ ಸಂಭ್ರಮಿಸಿ ಎಂದು ವಿನಂತಿಸಿಕೊಂಡರು.

ಅಜಿತ್ ಕುಮಾರ್ ಮಾತು ಹಾಗೂ ಮಾಸ್ ಡೈಲಾಗ್

ತಮ್ಮ ಬೆಂಬಲಿಗೆ ನಿಂತ ಅಭಿಮಾನಿಗಳಲ್ಲಿ ಸದಾ ಸಕಾರಾತ್ಮಕ ಶಕ್ತಿ ತುಂಬಲು ಬಯಸಿದ ಧನುಷ್, ನಟ ಅಜಿತ್ ಕುಮಾರ್ ಅವರ ಪ್ರಸಿದ್ಧ ಸಾಲುಗಳನ್ನು ನೆನಪಿಸಿಕೊಂಡರು. "ನಮ್ಮ 'ತಲಾ' ಅಜಿತ್ ಸರ್ ಹೇಳಿದಂತೆ, ನೀವು ಸೋಲನ್ನು ಒಪ್ಪಿಕೊಳ್ಳುವವರೆಗೂ ನಿಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದರು. ಕೊನೆಯಲ್ಲಿ ತಮ್ಮದೇ ಶೈಲಿಯಲ್ಲಿ "ವಾಟ್ ಡು ಯೂ ಸೇ ಬೇಬಿ? ಇಫ್ ಯೂ ಆರ್ ಬ್ಯಾಡ್, ಐ ಯ್ಯಾಮ್​ ಯುವರ್ ಡ್ಯಾಡ್!" ಎಂಬ ಪವರ್‌ಫುಲ್ ಮಾಸ್ ಸಂಭಾಷಣೆ ಹೊಡೆಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ವಿವಾದಕ್ಕೆ ಕಾರಣವೇನು?

ವಿಜಯ್ ಸೇತುಪತಿ ಅಭಿನಯದ ಮಹಾರಾಜ ಹಾಗೂ ಕಾರ್ತಿ ಮತ್ತು ಅರವಿಂದ್ ಸ್ವಾಮಿ ನಟನೆಯ ಮೆಯ್ಯಳಗನ್ ನಂತಹ ಸಿನಿಮಾಗಳು ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿದ್ದವು. ಹೀಗಿರುವಾಗ, ವಿಮರ್ಶಾತ್ಮಕವಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ರಾಯನ್ ಚಿತ್ರಕ್ಕೆ ಅತ್ಯುತ್ತಮ ತಮಿಳು ಚಿತ್ರ ಪ್ರಶಸ್ತಿ ಒಲಿದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು (ಏಜೆನ್ಸೀಸ್​).