ಚೆನ್ನೈ: ನಿರ್ದೇಶಕ ಎ.ಎಲ್. ವಿಜಯ್ರೊಂದಿಗಿನ ವಿಚ್ಛೇದನ ವದಂತಿಗೆ ಕೊನೆಗೂ ಮೌನ ಮುರಿದಿರುವ ಬಹುಭಾಷ ನಟಿ ಅಮಲಾ ಪೌಲ್, ಯಾರೂ ಕೂಡ ನನ್ನ ವಿಚ್ಛೇದನಕ್ಕೆ ಜವಾಬ್ದಾರರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮುನ್ನ ಅಮಲಾ ಪೌಲ್ ವಿಚ್ಛೇದನ ಹಿಂದೆ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅವರ ಪಾತ್ರವಿದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ನಡೆದ ಸಂದರ್ಶನದಲ್ಲಿ ವದಂತಿಯನ್ನು ಅಮಲಾ ಪೌಲ್ ತಳ್ಳಿ ಹಾಕಿದ್ದಾರೆ.
ನನ್ನ ವಿಚ್ಛೇದನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಸ್ಟೋರಿಗಳು ಓಡಾಡುತ್ತಿವೆ. ಅನವಶ್ಯಕವಾಗಿ ವಿವಾದಗಳನ್ನು ಎಳೆದು ತರಲಾಗುತ್ತಿದೆ. ವೈಯಕ್ತಿಕ ಕಾರಣಗಳಿಂದ ವಿಜಯ್ ಅವರೊಂದಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿದೆ. ಇಂಡಸ್ಟ್ರಿಯ ಯಾರೊಬ್ಬರು ಇದರಲ್ಲಿ ಪಾತ್ರರಾಗಿಲ್ಲ. ಧನುಷ್ ನನ್ನ ಹಿತ ಬಯಸುವವರಲ್ಲಿ ಒಬ್ಬರು ಎಂದು ಅಮಲಾ ಪೌಲ್ ಹೇಳಿದ್ದಾರೆ. ಇದೇ ವೇಳೆ ಸದ್ಯಕ್ಕೆ ಯಾವುದೇ ಮದುವೆ ಆಲೋಚನೆ ಇಲ್ಲ. ನನ್ನ ಮುಂದಿನ ಚಿತ್ರಗಳು ಬಿಡುಗಡೆಗೊಂಡ ಬಳಿಕ ನಾನು ನನ್ನ ಮದುವೆ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನಿರ್ದೇಶಕ ವಿಜಯ್ ತಂದೆ ನಿರ್ಮಾಪಕ ಅಳಗಪ್ಪನ್ ಧನುಷ್ ಅವರೇ ಅಮಲಾ ಮತ್ತು ವಿಜಯ್ ನಡುವಿನ ವಿಚ್ಛೇದನಕ್ಕೆ ಕಾರಣ ಎಂದು ಆರೋಪಿಸಿದ್ದರು. ಮದುವೆ ನಂತರ ವಿಜಯ್ ಮತ್ತು ಅಮಲಾ ಇಂಡಸ್ಟ್ರಿಯನ್ನು ಬಿಡಬೇಕೆಂದಿದ್ದರು. ಆದರೆ, ಧನುಷ್ ನಿರ್ಮಾಣದ "ಅಮ್ಮಕನಕ್ಕು" ಗಾಗಿ ಅಮಲಾರನ್ನು ಧನುಷ್ ಸಂಪರ್ಕಿಸಿದ್ದರು. ಸಿನಿಮಾದಲ್ಲಿ ನಟಿಸುವಂತೆ ಬಲವಂತವಾಗಿ ಮನವೊಲಿಸಿದ್ದಾರೆ ಎಂದು ಹೇಳಿದ ಬಳಿಕ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಇದೀಗ ಅಮಲಾ ಅವರೇ ಇದಕ್ಕೆಲ್ಲ ಪೂರ್ಣ ವಿರಾಮ ಹಾಡಿದ್ದಾರೆ.
ಅಂದಹಾಗೆ ಸಿನಿಮಾ ವಿಚಾರಕ್ಕೆ ಬಂದರೆ ಅಮಲಾಅವರು ಕೆ.ಆರ್ ವಿನೋದ್ ನಿರ್ದೇಶನದ "ಅಧೋ ಅಂಥ ಪರವೈ ಪೊಲಾ" ಚಿತ್ರದಲ್ಲಿ ನಟಿಸಿದ್ದು, ಫೆ. 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್)