ಸಿನಿವಾಣಿ

ಕನ್ವರ್‌ಲಾಲ್ ಅವತಾರದಲ್ಲಿ ಡೆವಿಲ್: ಮೊದಲ ಹಂತದ ಡಬ್ಬಿಂಗ್ ಮುಗಿಸಿ, ವಿದೇಶಕ್ಕೆ ಹಾರಲು ರೆಡಿಯಾದ ತಂಡ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ಇದೀಗ ಜಾಮೀನು ಪಡೆದು ನಿರಾಳರಾಗಿರುವ ನಟ ದರ್ಶನ್ ಸದ್ಯ ‘ಡೆವಿಲ್’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿತ್ತು. ಇದೇ ವೇಳೆ ದರ್ಶನ್‌ಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಸ್ವಲ್ಪ ದಿನ ವಿರಾಮ ಪಡೆದು, ಬಳಿಕ ಮಾರ್ಚ್‌ನಲ್ಲಿ ರಾಜಸ್ಥಾನದಲ್ಲಿ ಶೂಟಿಂಗ್ ನಡೆಸಲಾಯಿತು. ಇದೀಗ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ತಂಡ, ಅದರ ಬೆನ್ನಲ್ಲೇ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಡಬ್ಬಿಂಗ್ ಕಾರ್ಯಗಳನ್ನು ಶುರು ಮಾಡಿಕೊಂಡಿದ್ದು, ಪ್ರಾಥಮಿಕ ಹಂತದ ಡಬ್ಬಿಂಗ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ದರ್ಶನ್, ಕನ್ವರ್‌ಲಾಲ್ ಅವತಾರದಲ್ಲಿರುವ ಹೊಸ ಪೋಸ್ಟರ್ ಹಂಚಿಕೊಂಡು, ಡಬ್ಬಿಂಗ್ ಪೂರ್ಣಗೊಳಿಸಿರುವ ವಿಷಯ ಹಂಚಿಕೊಂಡಿದ್ದಾರೆ. ದರ್ಶನ್‌ರ ಕನ್ವರ್‌ಲಾಲ್ ಲುಕ್ ನಟ ಅಂಬರೀಷ್ ಅವರನ್ನು ನೆನಪಿಸುವಂತಿದೆ. ಅಂಬರೀಷ್ ಅವರ ಹುಟ್ಟುಹಬ್ಬದ (ಮೇ 29) ಬೆನ್ನಲ್ಲೇ ಅವರ ಕನ್ವರ್‌ಲಾಲ್ ಲುಕ್‌ನ ಕಾಪಿ ಮಾಡಿರುವ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವುದು ವಿಶೇಷ. ದರ್ಶನ್‌ರ ಈ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ‘ಮಿಲನ’ ಪ್ರಕಾಶ್ ವೀರ್ ‘ಡೆವಿಲ್’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ದರ್ಶನ್‌ಗೆ ರಚನಾ ರೈ ಜೋಡಿಯಾಗಿದ್ದಾರೆ. ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಕಲಾಬಳಗದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಸುಧಾಕರ್ ಎಸ್. ರಾಜ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನವಿರಲಿದೆ.

ವಿದೇಶಕ್ಕೆ ಹಾರಲಿದ್ದಾನೆ ‘ಡೆವಿಲ್’: ಸದ್ಯ ಜಾಮೀನು ಪಡೆದು ಹೊರಬಂದಿರುವ ದರ್ಶನ್, ಒಂದೊಂದೇ ಸಂಕಷ್ಟಗಳಿಂದ ದೂರವಾಗುತ್ತಿದ್ದಾರೆ. ಈ ಮೊದಲು ದೇಶ ಬಿಟ್ಟುಹೋಗದಂತೆ ಕೋರ್ಟ್ ನಿರ್ಬಂಧಿಸಿತ್ತು. ‘ಡೆವಿಲ್’ ಚಿತ್ರದ ಶೂಟಿಂಗ್ ವಿದೇಶದಲ್ಲಿ ಮಾಡಬೇಕಿದೆ. ಈ ಕಾರಣಕ್ಕಾಗಿ ಇತ್ತೀಚೆಗೆ ದರ್ಶನ್, ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಬೆಂಗಳೂರು ಸಿಸಿಎಚ್ 57ನೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಕೋರ್ಟ್ ವಿದೇಶಕ್ಕೆ ತೆರಳಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜುಲೈ ಮೊದಲ ವಾರದಲ್ಲಿ ‘ಡೆವಿಲ್’ ತಂಡವು ದುಬೈ ಹಾಗೂ ಯುರೋಪ್ ದೇಶಗಳಿಗೆ ಹಾರಲಿದ್ದು, ಜುಲೈ 27ರವರೆಗೆ ಅಲ್ಲಿ ಶೂಟಿಂಗ್ ನಡೆಸಲಿದೆ. ಅಂದುಕೊಂಡಂತಾದರೆ, ‘ದ ಡೆವಿಲ್’ ಈ ವರ್ಷಾಂತ್ಯಕ್ಕೆ ತೆರೆ ಮೇಲೆ ಬರಲಿದೆ.