ಚಿತ್ರ: ‘ದೇವರ-1’
ನಿರ್ದೇಶನ: ಕೊರಟಾಲ ಶಿವ
ನಿರ್ಮಾಣ: ಕಲ್ಯಾಣ ರಾಮ್, ಸುಧಾಕರ್
ತಾರಾಗಣ: ಜೂ. ಎನ್‌ಟಿಆರ್, ಜಾಹ್ನವಿ ಕಪೂರ್, ಸೈಫ್ ಅಲಿ ಖಾನ್, ಶ್ರೀಕಾಂತ್, ಪ್ರಕಾಶ್ ರಾಜ್, ಶ್ರುತಿ ಮರಾಠೆ ಮತ್ತಿತರರು.
ಶಿವ ಸ್ಥಾವರಮಠ
ತೆಲುಗು ಚಿತ್ರರಂಗದಲ್ಲಿ ರಕ್ತ ಚರಿತ್ರೆಯನ್ನಾಧರಿಸಿ ಕಥೆ ಹೇಳುವಲ್ಲಿ ನಿರ್ದೇಶಕ ಕೊರಟಾಲ ಶಿವ ನಿಸ್ಸೀಮರು. ಈ ಹಿಂದೆ ‘ಮಿರ್ಚಿ’, ‘ಜನತಾ ಗ್ಯಾರೇಜ್’ ಮೂಲಕ ಯಶಸ್ವಿಯಾಗಿದ್ದಾರೆ. ಇದೀಗ ಅಂತಹದ್ದೇ ಒಂದು ಸಮುದ್ರದ ರಕ್ತಚರಿತ್ರೆಯನ್ನು ‘ದೇವರ’ದಲ್ಲಿ ನಿರೂಪಿಸಿದ್ದಾರೆ.
ಅದೊಂದು ಸಮುದ್ರ. ಸುತ್ತಲಿನ ಬೆಟ್ಟದಲ್ಲಿರುವ ನಾಲ್ಕು ಊರು. ಒಂದೊಂದು ಊರಿಗೂ ಒಬ್ಬೊಬ್ಬರ ಮುಂದಾಳತ್ವ. ಆದರೆ, ಈ ನಾಲ್ಕು ಊರುಗಳ ಹಿಡಿತ ದೇವರ (ಜೂ.ಎನ್‌ಟಿಆರ್) ಕೈಯಲ್ಲಿ. ಭೈರವ (ಸೈಫ್), ರಾಯಪ್ಪ (ಶ್ರೀಕಾಂತ್) ಹಾಗೂ ಕುಂಜುರಾ (ಕಲೈರಸನ್) ದೇವರನ ಸಂಗಡಿಗರು. ಈ ನಾಲ್ವರನ್ನು ಬಳಸಿಕೊಂಡು ಮುರುಗ (ಮುರಳಿ ಶರ್ಮಾ) ಸಮುದ್ರದ ಕಳ್ಳ ಸಾಗಣಿಕೆ ದಂಧೆ ನಡೆಸುತ್ತಿರುತ್ತಾನೆ. ಆದರೆ, ಒಂದು ಬಾರಿ ಸಾಗಿಸುವ ಮಾರಕಾಸಗಳು ತಮ್ಮವರನ್ನೇ ಬಲಿ ಪಡೆಯುತ್ತವೆ. ಇದರಿಂದ ದೇವರ ಪಶ್ಚಾತ್ತಾಪಕ್ಕೆ ಒಳಗಾಗುತ್ತಾನೆ. ನಾವು ಇಂತಹ ದಂಧೆ ಮಾಡುವುದು ಎಷ್ಟು ಸರಿ ಎಂದು ಮರುಗುತ್ತಾನೆ. ಕೊನೆಗೆ ಬದಲಾವಣೆಗೆ ಮುಂದಾದಾಗ ‘ದೇವರ’ ಕಥೆ ತೆರೆದುಕೊಳ್ಳುತ್ತದೆ. ಹಾಗಾದರೆ, ದೇವರ ಅಂತಿಮವಾಗಿ ಕಳ್ಳ ಸಾಗಾಣಿಕೆಗೆ ಬ್ರೇಕ್ ಹಾಕುತ್ತಾನಾ? ಭೈರವ ಯಾಕೆ ದೇವರನಿಗೆ ವಿರೋಧಿಯಾಗುತ್ತಾನೆ? ಎಂಬುದನ್ನು ತಿಳಿಯಬೇಕಾದರೆ ಸಿನಿಮಾ ನೋಡಬೇಕು.
ಕೊರಟಾಲ ಶಿವ ಮೊದಲರ್ಧದಲ್ಲಿ ಸಾಗರದ ಆರ್ಭಟವನ್ನೇ ಸೃಷ್ಟಿಸಿದ್ದಾರೆ. ಮೈನವೇರಿಳಿಸುವ ಸಾಹಸ ದೃಶ್ಯಗಳು, ಅದಕ್ಕೆ ತಕ್ಕಂತ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದರೆ, ದ್ವಿತೀಯಾರ್ಧದಲ್ಲಿ ಸ್ವಲ್ಪ ನಿಧಾನ ಎನಿಸಿದರೂ ಕಥೆ ನೋಡಿಸಿಕೊಂಡು ಹೋಗುತ್ತದೆ. ನಿರ್ದೇಶಕರ ಹಿಂದಿನ ಚಿತ್ರಗಳ ಛಾಯೆಯನ್ನು ಇಲ್ಲೂ ಕಾಣಬಹುದು. ಇನ್ನು ಬಳಸಿರುವ ಆಯುಧಗಳ ವಿನ್ಯಾಸ, ಕಡಲಿನ ರುದ್ರನರ್ತನ, ಮಂದ ಬೆಳಕಿನ ವಾತಾವರಣ ಗಮನಸೆಳೆಯುತ್ತದೆ.
ಜೂ.ಎನ್‌ಟಿಆರ್, ತಂದೆ ಹಾಗೂ ಮಗ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಖಡಕ್ ಡೈಲಾಗ್, ಎಮೋಷನ್ಸ್ ಚಿತ್ರದ ಹೈಲೈಟ್. ಇನ್ನು, ಸೈಫ್ ಪಾತ್ರದಲ್ಲಿ ಜೀವಿಸಿದ್ದಾರೆ. ಜಾಹ್ನವಿ ಕಪೂರ್ ದ್ವಿತೀಯಾರ್ಧದಲ್ಲಿ ಒಂದು ಸಾಂಗ್ ಹಾಗೂ ಕೆಲ ದೃಶ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಪ್ರಕಾಶ್ ರಾಜ್ ಮೂಲಕ ಇಡೀ ‘ದೇವರ’ ಯಾತ್ರೆಯನ್ನು ನಿರೂಪಿಸಲಾಗಿದೆ. ಶ್ರೀಕಾಂತ್, ಶ್ರುತಿ ಮರಾಠೆ ಸೇರಿ ಹಲವು ಪಾತ್ರಗಳು ಸೃಷ್ಟಿಯಾಗಿದ್ದು, ಎಲ್ಲರೂ ನ್ಯಾಯ ಒದಗಿಸಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತ, ಆರ್.ರತ್ನವೇಲು ಛಾಯಾಗ್ರಹಣ ಚಿತ್ರವನ್ನು ನೋಡಿಸಿಕೊಳ್ಳುತ್ತದೆ. ಕೊರಟಾಲ ಶಿವ ಮುಂದಿನ ಭಾಗದಲ್ಲಿ ಉಳಿಸಿಕೊಂಡಿರುವುದು ಕಥೆಯನ್ನೇ ಹೊರತು ವ್ಯಕ್ತಿಯನ್ನಲ್ಲ. ಅದರಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂಬುದೇ ಸದ್ಯದ ಕುತೂಹಲ.