ನವದೆಹಲಿ: ದೆಹಲಿಯ ರೋಹಿಣಿ ಏರಿಯಾದಲ್ಲಿ ಕಿರುತೆರೆ ನಟಿ ಪ್ರಾಚಿ ತೆಹ್ಲಾನ್ ಕಾರು ಹಿಂಬಾಲಿಸಿ ಆಕೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಾಸ್ಕೆಟ್ ಬಾಲ್ ಆಟಗಾರ್ತಿ ಮತ್ತು ನಟಿಯಾಗಿರುವ ಪ್ರಾಚಿ, ಸೋಮವಾರ ಮಧ್ಯರಾತ್ರಿ ಗಂಡನೊಂದಿಗೆ ಮನೆಗೆ ಮರಳುವಾಗ ಅವರ ಕಾರನ್ನು ಹಿಂಬಾಲಿಸಿದ ನಾಲ್ವರು ದುಷ್ಕರ್ಮಿಗಳು ಕೂಗಾಡಿದ್ದಾರೆ.
ಇಷ್ಟೇ ಅಲ್ಲದೆ, ನಟಿ ಪ್ರಶಾಂತ್ ವಿಹಾರ್ನಲ್ಲಿರುವ ತಮ್ಮ ಮನೆಯನ್ನು ತಲುಪಿದಾಗ ದುಷ್ಕರ್ಮಿಗಳು ತಮ್ಮ ವಾಹನದಿಂದ ಕೆಳಗಿಳಿದು ಬಂದು ಪ್ರಾಚಿ ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಪ್ರಾಚಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲಿಸರು ನಾಲ್ವರನ್ನು ಬಂಧಿಸಿದ್ದು, ಘಟನೆ ನಡೆದ ಸಮಯದಲ್ಲಿ ಅವರು ಪಾನಮತ್ತರಾಗಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)