ಬೆಂಗಳೂರು: ಯೂಟ್ಯೂಬ್ನಲ್ಲಿ ‘ಕೋಟಿಗೊಬ್ಬ 3’ ಟೀಸರ್ ನೋಡಬೇಕೆಂದು ಹೊರಟ ಸುದೀಪ್ ಅಭಿಮಾನಿಗಳಿಗೆ ಶನಿವಾರ ಶಾಕ್ ಆಗಿದೆ. ಕಾರಣ, ಯೂಟ್ಯೂಬ್ನಿಂದ ಟೀಸರ್ ನಿಗೂಢವಾಗಿ ಕಣ್ಮರೆಯಾಗಿದೆ.
ಈ ಕುರಿತು ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಆನಂದ್ ಆಡಿಯೋದವರು ಯೂಟ್ಯೂಬ್ಗೆ ದೂರು ಕೊಟ್ಟಿದ್ದಾರೆ. ದೂರು ಸ್ವೀಕರಿಸಿರುವ ಯೂಟ್ಯೂಬ್ನವರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮತ್ತೆ ಟೀಸರ್ ಅಪ್ಲೋಡ್ ಮಾಡುವ ಆಶ್ವಾಸನೆ ನೀಡಿದ್ದಾರೆ.
ಎಲ್ಲ ಅಂದುಕೊಂಡಂತೆ ಆದರೆ, ಇಂದು ಮಧ್ಯಾಹ್ನದಿಂದ ‘ಕೋಟಿಗೊಬ್ಬ 3’ ಟೀಸರ್ ಮತ್ತೆ ಯೂಟ್ಯೂಬ್ನಲ್ಲಿ ನೋಡಬಹುದಾಗಿದೆ. ಇಷ್ಟಕ್ಕೂ ಚಿತ್ರದ ಟೀಸರ್ ಹಾಗೆ ಡಿಲೀಟ್ ಆಗುವುದಕ್ಕೆ ಕಾರಣವೇನು? ಇದಕ್ಕೊಂದು ಹಿನ್ನೆಲೆ ಇದೆ. ಅಜಯ್ ಮತ್ತು ಸುನೀಲ್ ಎಂಬ ಕೋಆರ್ಡಿನೇಟರ್ಗಳು ಪೋಲ್ಯಾಂಡ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದ್ದು, ಆ ನಂತರ ಚಿತ್ರತಂಡದವರು 90 ಲಕ್ಷ ಬಾಕಿ ಹಣ ಕೊಟ್ಟಿಲ್ಲ ಎಂದು ದೂರಿದ್ದರು. ಈ ವಿಷಯವಾಗಿ ಕೆಲವು ತಿಂಗಳ ಹಿಂದೆ ನಿರ್ವಪಕ ಸೂರಪ್ಪ ಬಾಬು ಪತ್ರಿಕಾಗೋಷ್ಠಿ ಕರೆದು ಅಜಯ್ ಪಾಲ್ ಮತ್ತು ಸುನೀಲ್ ಪಾಲ್ ವಿರುದ್ಧ ಹರಿಹಾಯ್ದಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಜಯ್ ಮತ್ತು ಸುನೀಲ್, ಪೋಲ್ಯಾಂಡ್ನಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ತಮ್ಮ ಹೆಸರಿನಲ್ಲಿದೆ ಎಂದು, ಬಾಕಿ ಹಣ ಕೊಡುವವರೆಗೂ ಆ ದೃಶ್ಯಗಳನ್ನು ತೋರಿಸುವಂತಿಲ್ಲ ಎಂದು ಯೂಟ್ಯೂಬ್ಗೆ ದೂರು ನೀಡಿದ್ದಾರೆ.
ದೂರು ಬಂದ ಕಾರಣ, ಟೀಸರ್ ಡಿಲೀಟ್ ಮಾಡಲಾಗಿದೆ. ಈ ಕುರಿತು ಮಾತನಾಡುವ ನಿರ್ವಪಕ ಸೂರಪ್ಪ ಬಾಬು, ಇದೊಂದು ಬ್ಲಾಕ್ವೆುೕಲ್ ತಂತ್ರ ಎನ್ನುತ್ತಾರೆ. ‘ಅವರು ಡಿಮ್ಯಾಂಡ್ ಮಾಡಿದ ಹಣವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಇತ್ತೀಚೆಗೆ ‘ಲಿಂಗ’, ‘ಕೆಜಿಎಫ್’ ಮುಂತಾದ ಚಿತ್ರಗಳ ಬಿಡುಗಡೆ ಸಮಯದಲ್ಲಿ ಇದೇ ತರಹ ಮಾಡಲಾಗಿದೆ. ಕೊನೆಗೆ ಕಾನೂನಿನ ಮೊರೆ ಹೋದ ನಂತರ ಪ್ರಕರಣ ಇತ್ಯರ್ಥವಾಯಿತು. ಈಗ ನಮ್ಮ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿರುವಾಗ, ಅನವಶ್ಯಕವಾಗಿ ತೊಂದರೆ ಕೊಡಲಾಗುತ್ತಿದೆ. ಇದರ ವಿರುದ್ಧ, ನಾವು ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಅದಕ್ಕೂ ಮುನ್ನ ಪುನಃ ಟೀಸರ್ ಬಿಡುಗಡೆ ಮಾಡಿಸಬೇಕಾಗಿದೆ. ಈಗಾಗಲೇ ಆನಂದ್ ಆಡಿಯೋದವರು ದೂರು ಕೊಟ್ಟಿದ್ದು, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಪುನಃ ಟೀಸರ್ ಬಿಡುಗಡೆಯಾಗಲಿದೆ. ಆ ನಂತರ ಕಾನೂನು ಹೋರಾಟ ಮಾಡುತ್ತೇವೆ’ ಎನ್ನುತ್ತಾರೆ ಸೂರಪ್ಪ ಬಾಬು.
ಸದ್ಯ ಮನುಕುಲ ಎದುರಿಸುತ್ತಿರುವ ಸಮಸ್ಯೆಗಳ ಮುಂದೆ ಇದ್ಯಾವ ದೊಡ್ಡ ಸಮಸ್ಯೆಯೂ ಅಲ್ಲ. ಇದೊಂದು ರೀತಿಯ ಜೋಕ್ ಇದ್ದಂತೆ. ‘ಕೋಟಿಗೊಬ್ಬ 3’ ಚಿತ್ರದ ಟ್ರೇಲರ್ ಸೋಮವಾರ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಲಿದೆ. | ಸುದೀಪ್ ನಟ