Sara Arjun : ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ, ಅಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಸಾರಾ ಅರ್ಜುನ್, ಪ್ರಸ್ತುತ ರಣವೀರ್ ಸಿಂಗ್ ಜೊತೆ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರ ತಿಳಿದು ಸಿನಿ ಪ್ರೇಮಿಗಳು ಹುಬ್ಬೇರಿಸುತ್ತಿದ್ದಾರೆ.
ಅಂದಹಾಗೆ, ಸಾರಾ ಅರ್ಜುನ್ 2011ರಲ್ಲಿ ಚಿಯಾನ್ ವಿಕ್ರಮ್ ಅಭಿನಯದ "ದೈವ ತಿರುಮಗಳ್" ಚಿತ್ರದಲ್ಲಿ ಬಾಲ ನಟಿಯಾಗಿದ್ದರು. ತಮ್ಮ ಮೊದಲ ಚಿತ್ರದಲ್ಲೇ ವಿಕ್ರಮ್ ಅವರ ಮಗಳಾಗಿ ನೀಲಾ ಪಾತ್ರದಲ್ಲಿ ತಮ್ಮ ಭಾವನಾತ್ಮಕ ಅಭಿನಯವನ್ನು ಪ್ರದರ್ಶಿಸುವ ಮೂಲಕ ತನ್ನದೇಯಾದ ಅಭಿಮಾನಿಗಳ ನೆಲೆಯನ್ನು ಸೃಷ್ಟಿಸಿಕೊಂಡರು ಸಾರಾ ಅರ್ಜುನ್.
ದೈವ ತಿರುಮಗಳ್ ಸಿನಿಮಾ ಯಶಸ್ಸಿನ ಬಳಿಕ ಸಾರಾ ಅರ್ಜುನ್ ಅವರನ್ನು ಬೇಬಿ ಸಾರಾ ಎಂದೇ ಖ್ಯಾತಿಯಾದರು. ತಮಿಳು ಚಿತ್ರರಂಗದಲ್ಲಿ ಸೈವಂ ಮತ್ತು ವಿಲಿತಿರು ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು. ಬಳಿಕ ಸಿನಿಮಾದಿಂದ ಒಂದು ನಿರ್ದಿಷ್ಟ ಗ್ಯಾಪ್ ಪಡೆದುಕೊಂಡ ನಂತರ, ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯಾ ರೈ ಅವರ ನಂದಿನಿ ಪಾತ್ರದ ಬಾಲ್ಯದ ಪಾತ್ರದಲ್ಲಿ ಸಾರಾ ನಟಿಸಿದರು. ಈ ಚಿತ್ರದಲ್ಲಿಯೂ ಸಾರಾ ಅವರ ಅಭಿನಯ ಗಮನ ಸೆಳೆಯಿತು. ಇದೀಗ, ಬಾಲಿವುಡ್ ನಟ ರಣವೀರ್ ಸಿಂಗ್ ಚಿತ್ರದಲ್ಲಿ ಸಾರಾ ಅರ್ಜುನ್ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ.
"ಧುರಾಂಧರ್" ಬಾಲಿವುಡ್ ಚಿತ್ರವಾಗಿದ್ದು, ರಣವೀರ್ ಸಿಂಗ್ ಈ ಸಿನಿಮಾದ ನಾಯಕ ನಟ. ಈ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಆರ್ ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಾರಾ ಅರ್ಜುನ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾರಾಗೆ ಕೇವಲ 20 ವರ್ಷ ಮತ್ತು ರಣವೀರ್ಗೆ 40 ವರ್ಷ ವಯಸ್ಸಾಗಿರುವುದರಿಂದ, ವಯಸ್ಸಿನ ವ್ಯತ್ಯಾಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಅನೇಕ ನೆಟ್ಟಿಗರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ, ಈ ರೀತಿ ಹೀರೋ-ಹೀರೋಯಿನ್ ನಡುವಿನ ಭಾರೀ ವಯಸ್ಸಿನ ವ್ಯತ್ಯಾಸ ಇದೇ ಮೊದಲೇನಲ್ಲ. ಈ ಹಿಂದೆ, ಸಿಕಂದರ್ ಸಿನಿಮಾ ಸಂದರ್ಭದಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣರ ವಯಸ್ಸಿನ ಅಂತರವೂ ಭಾರೀ ಚರ್ಚೆಯಾಗಿತ್ತು. (ಏಜೆನ್ಸೀಸ್)