ಸಿನಿವಾಣಿ

20 ವರ್ಷದ ಹಿಂದಿನ ಫೋಟೋದಲ್ಲಿ ಆಮೀರ್​- ದೀಪಿಕಾ ಹೇಗಿದ್ರು?

ನೆನಪುಗಳು ಸದಾ ಹಸಿರು. ಅವುಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದೇ ಒಂದು ರೀತಿ ಖುಷಿಯ ಸಂಗತಿ. ಅಂತ ನೆನಪುಗಳು ಫೋಟೋ ಮೂಲಕ, ಸಣ್ಣ ಸಣ್ಣ ವಿಡಿಯೋ ತುಣುಕಿನ ಮೂಲಕ ಸಿಕ್ಕರೆ, ಒಂದಷ್ಟು ವಸ್ತುಗಳನ್ನು ನೋಡಿದರೂ ಅದರ ಹಿನ್ನೆಲೆಗೆ ಮನಸು ಜಾರುತ್ತದೆ. ಹಾಗೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 20 ವರ್ಷದ ಹಿಂದೆ ಜಾರಿದ್ದಾರೆ. ಆವತ್ತು ಅವರ ಮನೆಗೆ ಸ್ಟಾರ್ ನಟರೊಬ್ಬರು ಆಗಮಿಸಿದ್ದರು. ಅವರ ಜತೆ ಊಟವನ್ನೂ ಮಾಡಿ ಫೋಟೋಗೆ ಪೋಸ್​ ಕೊಟ್ಟಿದ್ದರು. ಅಂದಿನ ಆ ನೆನಪನ್ನು ಇಂದು ಜಾಲತಾಣದ ಗೋಡೆಗೆ ಅಂಟಿಸಿದ್ದಾರೆ.

ಹೌದು, 2000 ಇಸವಿಯ ಜನವರಿ 1ರಂದು ಬಾಲಿವುಡ್​ ನಟ ಆಮೀರ್​ ಖಾನ್​, ಪ್ರಕಾಶ್​ ಪಡುಕೋಣೆ ಅಂದರೆ ದೀಪಿಕಾ ಅವರ ತಂದೆಯ ಮನೆಗೆ ಆಗಮಿಸಿದ್ದರು. ಆಗ ಪ್ರಕಾಶ್ ಅವರ ಮನೆಯಲ್ಲೇ ಮೊಸರನ್ನ ಊಟ ಮಾಡಿದ್ದರು ಆಮೀರ್​. ಫೋಟೋದಲ್ಲಿ ಆಮೀರ್​ ಪಕ್ಕದಲ್ಲೇ ದೀಪಿಕಾ ಕುಳಿತಿದ್ದಾರೆ. ತಾಯಿ ಉಜ್ಜಲ ಪಡುಕೋಣೆ, ತಂಗಿ ಅನಿಷಾ ಪಡುಕೋಣೆ, ಪ್ರಕಾಶ್​ ಪಡುಕೋಣೆ ಟಿಪಿಕಲ್ ​ಗ್ರೂಪ್​ ಫೋಟೋಗೆ ಪೋಸ್​ ನೀಡಿದ್ದಾರೆ.

ಈ ಫೋಟೋ ತೆಗೆದ ಸಂದರ್ಭದಲ್ಲಿ ನನಗೆ ಕೇವಲ 13 ವರ್ಷ ಎಂದೂ ಹೇಳಿಕೊಂಡಿರುವ ದೀಪಿಕಾ, ಆ ಹೊತ್ತಲ್ಲಿ ತುಂಬ ಹೊಟ್ಟೆ ಹಸಿವಾಗಿತ್ತು ಎಂದೂ ಹೇಳಿದ್ದಾರೆ. ಈ ಫೋಟೋ ಹಾಕುತ್ತಿದ್ದಂತೆ ಬಗೆಬಗೆ ಕಮೆಂಟ್​ಗಳು ಸಂದಾಯವಾಗಿದ್ದು, ಒಂದು ಬಾರಿಯಾದರೂ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳಿ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ನಿಮ್ಮಿಬ್ಬರನ್ನು ಸಿನಿಮಾದಲ್ಲಿ ನೋಡಬೇಕು ಎಂಬ ಮೆಸೆಜ್​ಗಳನ್ನು ಸಂದಾಯ ಮಾಡುತ್ತಿದ್ದಾರೆ. (ಏಜೆನ್ಸೀಸ್​)