ಸಿನಿವಾಣಿ

ಅಭಿಮಾನ ಹೆಚ್ಚಾಗಿದ್ದೇ ಸಮಸ್ಯೆ ಆಯ್ತು!: ಫೇಕ್ ಅಭಿಮಾನಿಗಳಿಂದ ದೀಪಿಕಾ, ಪ್ರಿಯಾಂಕಾಗೆ ಸಂಕಷ್ಟ

ಸಿನಿಮಾ ತಾರೆಯರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ, ತಮಗೆ ಅಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ ಎಂದೆಲ್ಲ ಹೇಳಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಇದರಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ಅದೇ ಕಾರಣಕ್ಕೆ ಅವರಿಗೆ ಜಾಹೀರಾತು ಮತ್ತು ಸಿನಿಮಾಗಳಲ್ಲಿ ಬೇಡಿಕೆ ಸಹ ಹೆಚ್ಚುತ್ತದೆ ಎಂಬುದು ಗೊತ್ತಿರುವ ವಿಷಯವೇ. ಆದರೆ, ಅಂತಹ ಖಾತೆಗಳಲ್ಲಿ ಬಹಳಷ್ಟು ನಕಲಿಯಾಗಿರುತ್ತವೆ ಮತ್ತು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ, ಸ್ಟಾರ್ ನಟ-ನಟಿಯರೇ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ಮುಂಬೈ ಪೊಲೀಸರು ಕಂಡುಹಿಡಿದಿದ್ದಾರೆ.

ಇದೇ ವಿಷಯವಾಗಿ ದೀಪಿಕಾ ಮತ್ತು ಪ್ರಿಯಾಂಕಾ ಅವರ ವಿಚಾರಣೆ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಪೊಲೀಸರು ವಂಚನೆ ಕೇಸ್​ವೊಂದರಲ್ಲಿ ಒಬ್ಬನನ್ನು ಬಂಧಿಸಿದ ಸಂದರ್ಭದಲ್ಲಿ, ಆತ ಕೆಲವು ಬಾಲಿವುಡ್ ಸ್ಟಾರ್​ಗಳ ಸೋಷಿಯಲ್ ಮೀಡಿಯಾ ಅಭಿಮಾನಿಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತಾನೆ ಎಂಬ ವಿಷಯ ತಿಳಿದುಬಂದಿದೆ. ಹಲವು ನಕಲಿ ಖಾತೆಗಳನ್ನು ಸೃಷ್ಟಿಸಿ, ಅದರ ಮೂಲಕ ಸ್ಟಾರ್​ಗಳ ಅಭಿಮಾನಿ ಎಂದು ಹೇಳಿಕೊಂಡು, ಅವರ ಜನಪ್ರಿಯತೆಯನ್ನು ಹೆಚ್ಚಿಸುವುದು ಅವನ ಕೆಲಸ ಎಂದು ಗೊತ್ತಾಗಿದೆ.

ಬಾಲಿವುಡ್​ನಲ್ಲಿ ಇದೊಂದು ದೊಡ್ಡ ದಂಧೆಯಾಗಿದ್ದು, ಈ ತರಹ ನೂರಕ್ಕೂ ಹೆಚ್ಚು ಸಂಸ್ಥೆಗಳು ಫೇಕ್ ಅಭಿಮಾನಿ ಖಾತೆಗಳನ್ನು ಹುಟ್ಟುಹಾಕುವುದಕ್ಕೆಂದೇ ಇದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ 68 ಸಂಸ್ಥೆಗಳು ಫೇಕ್ ಅಭಿಮಾನಿಗಳನ್ನು ಹುಟ್ಟುಹಾಕುವುದರ ಜತೆಗೆ, ಸ್ಟಾರ್​ಗಳು ಹಾಕುವ ಪ್ರತಿಯೊಂದು ಪೋಸ್ಟ್​ಗೂ ಲೈಕ್ ಒತ್ತುವುದು, ಕಮೆಂಟ್ ಹಾಕುವುದು ಮತ್ತು ಅದನ್ನು ಇನ್ನೊಮ್ಮೆ ಪೋಸ್ಟ್ ಮಾಡುವುದಕ್ಕೆ ಸ್ಟಾರ್ ನಟ-ನಟಿಯರಿಂದ ಸಾಕಷ್ಟು ಹಣ ಪಡೆಯುತ್ತಿವೆ ಎಂದು ಪತ್ತೆಯಾಗಿದೆ. ಆ ತರಹ ನಕಲಿ ಹಿಂಬಾಲಕರಿರುವ ಟಾಪ್ 10 ಸೆಲೆಬ್ರಿಟಿಗಳ ಪೈಕಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಹೆಸರೂ ಇದೆಯಂತೆ. ಇದೇ ಕಾರಣಕ್ಕೆ, ಅವರಿಬ್ಬರನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆ ಪೊಲೀಸರು ಯೋಚಿಸುತ್ತಿದ್ದು, ಸದ್ಯದಲ್ಲೇ ಸಮನ್ಸ್ ಕಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. (-ಏಜನ್ಸೀಸ್)