ಎಲ್ಲ ಹಬ್ಬಗಳಿಗಿಂತ ದೀಪಾವಳಿ ಎಂದರೆ ನನಗೆ ಅಚ್ಚುಮಚ್ಚು. ಏಕೆಂದರೆ, ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸುವ ಹಬ್ಬವಿದು. ಆದರೆ, ಪಟಾಕಿ ಅಂದ್ರೆ ಭಯ ಜಾಸ್ತಿ. ಸುರ್ಸುರ್ ಬತ್ತಿ, ಭೂಚಕ್ರ ಹೊಡೆಯುವುದಕ್ಕೂ ಭಯ ನನಗೆ. ಚಿಕ್ಕಂದಿನಿಂದಲೂ ಇದ್ದ ಭಯ ಈಗಲೂ ಹಾಗೇ ಮುಂದುವರಿದಿದೆ. ಹಾಗಾಗಿ ದೀಪಾವಳಿಯನ್ನು ನಾನು ದೀಪ ಹಚ್ಚುವ ಮೂಲಕ ಮತ್ತು ಪೂಜೆ ಪುನಸ್ಕಾರಗಳನ್ನು ಮಾಡುವುದರ ಜತೆಗೆ ಕಳೆಯುತ್ತೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಂಬಂಧಿಕರ ಮನೆಗೆ ಹೋಗುವುದು, ಬಗೆಬಗೆ ಹಬ್ಬದ ಊಟ ಸವಿಯುವುದು, ನಮ್ಮ ಮನೆಗೆ ಆಹ್ವಾನಿಸುವ ಪ್ರಕ್ರಿಯೆ ಇರುತ್ತದೆ. ಇನ್ನು ನಟಿಯಾಗಿರುವುದರಿಂದ ಪ್ರತಿ ಸಲದ ದೀಪಾವಳಿಯನ್ನು ಎಲ್ಲರೂ ಒಂದೊಂದು ಸಲ ಆಚರಿಸಿದರೆ, ನಾನು ಮಾತ್ರ ಎರಡೆರಡು ಸಲ ಆಚರಿಸುತ್ತೇನೆ. ಧಾರಾವಾಹಿ ಸೆಟ್ನಲ್ಲಿ ಒಂದು ಬಾರಿ ಹಬ್ಬದಾಚರಣೆ ಆದರೆ, ಮನೆಯಲ್ಲಿ ಮತ್ತೊಮ್ಮೆ ಹಬ್ಬವನ್ನು ಆಸ್ವಾದಿಸಲು ಸಮಯ ಸಿಗುತ್ತದೆ.
| ಪ್ರಿಯಾಂಕಾ ಶಿವಣ್ಣ
ಈ ಸಲದ ಹಬ್ಬ ನಮ್ಮ ಪಾಲಿಗೆ ಪ್ರತಿವರ್ಷಕ್ಕಿಂತ ತುಂಬ ಸರಳವಾಗಿರಲಿದೆ. ಅದಕ್ಕೆ ಕಾರಣ ಪುನೀತ್. ಅವರಿಲ್ಲ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಸರಳವಾಗಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಸಲದ ದೀಪಾವಳಿ ಕೇವಲ ಮನೆಗಷ್ಟೇ ಸೀಮಿತವಾಗಿರಲಿದೆ. ಎಂದಿನಂತೆ ಮನೆಯನ್ನು ಶುಚಿ ಮಾಡಿಕೊಂಡಿದ್ದೇವೆ. ಮನೆಯಲ್ಲಿನ ವಾಹನಗಳನ್ನು ತೊಳೆದು ಪೂಜೆ ಮಾಡಿದ್ದೇವೆ. ಮನೆಯಲ್ಲಿನ ಲಕ್ಷ್ಮೀದೇವಿಗೆ ಪೂಜೆ ನೆರವೇರಿಸಿ, ನೈವೇದ್ಯ ಅರ್ಪಿಸಿದರೆ ಈ ಸಲದ ದೀಪಾವಳಿ ಮುಗಿದಂತೆ. ಚಿಕ್ಕಂದಿನಲ್ಲಿ ದೀಪಾವಳಿ ಅಂದರೆ, ದೀಪಗಳಿಂದಲೇ ಮನೆಯನ್ನು ಅಲಂಕರಿಸುವುದಾಗಿತ್ತು. ಈಗಲೂ ಅದನ್ನೇ ಮುಂದುವರಿಸಿಕೊಂಡು ಬಂದಿದ್ದೇವೆ. ಪಟಾಕಿ ಸಿಡಿಸುವುದು ತುಂಬ ವಿರಳ.
| ರಚನಾ ಇಂದರ್
ನಾವು ಕ್ರಿಶ್ಚಿಯನ್ ಆಗಿರುವುದರಿಂದ ದೀಪಾವಳಿ ಆಚರಿಸುವುದಿಲ್ಲ ಅಂತಲ್ಲ. ಬದಲಿಗೆ ನಮ್ಮ ಮನೆಯಲ್ಲಿ ಕ್ರಿಸ್ವುಸ್ ಬಿಟ್ಟರೆ ಅದ್ದೂರಿಯಾಗಿ ಆಚರಿಸುವ ಹಬ್ಬ ಎಂದರೆ ಅದು ದೀಪಾವಳಿ. ಚಿಕ್ಕಂದಿನಿಂದ ದೀಪಾವಳಿ ಬಗ್ಗೆ ಗೊತ್ತು. ದೀಪಗಳನ್ನು ಹಚ್ಚುವುದೇ ಒಂದು ಸಂಭ್ರಮ. ನಮ್ಮ ಮನೆ ಪಕ್ಕದವರ ಜತೆ ಸೇರಿ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇನೆ. ನಮ್ಮ ಮನೆಯಲ್ಲಿ ಹೆಚ್ಚು ದೀಪ ಹಚ್ಚಿ, ಪಟಾಕಿಯನ್ನೂ ಹೊಡೆಯುತ್ತಿದ್ದೆವು. ಇನ್ನು, ಈ ಹಬ್ಬಕ್ಕೆ ಪಕ್ಕದ ಮನೆಯವರೆಲ್ಲ ವಿಶೇಷ ಸಿಹಿ ತಿನಿಸು ಮಾಡಿರುತ್ತಾರೆ. ಅವರನ್ನೆಲ್ಲಾ ನಮ್ಮ ಮನೆಗೆ ಕರೆಸಿ ಒಟ್ಟಿಗೆ ಎಲ್ಲರೂ ಊಟ ಮಾಡುತ್ತೇವೆ. ಈ ಸಲ ದೀಪಾವಳಿಗೆ ಕುಟುಂಬದವರೆಲ್ಲ ಸೇರುತ್ತಿದ್ದೇವೆ. ಹಾಗಾಗಿ ಡಬಲ್ ಸಂಭ್ರಮ.
| ಸೋನಲ್ ಮೊಂತೇರೋ
ದೀಪಾವಳಿ ಹಬ್ಬ ಬಂತೆಂದರೆ ನಮ್ಮ ಮನೆಯಲ್ಲಿ ದೊಡ್ಡ ಸಂಭ್ರಮ. ಹಬ್ಬ ಇನ್ನೂ ನಾಲ್ಕು ದಿನ ಇದೆ ಎನ್ನುವಾಗಲೇ, ತಯಾರಿ ಶುರುವಾಗಿರುತ್ತದೆ. ಬೇರೆ ಹಬ್ಬಗಳಿಗೆ ಹೋಲಿಕೆ ಮಾಡಿದರೆ, ದೀಪಾವಳಿಯ ಸಂಭ್ರಮವೇ ದುಪ್ಪಟ್ಟು. ನಾಲ್ಕೈದು ತರಹದ ಸಿಹಿ ತಿನಿಸು, ಅದರಲ್ಲೂ ಹಾಲೊಬ್ಬಟ್ಟು ವಿಶೇಷ. ಕಜ್ಜಾಯ ಮಾಡುವ ಪದ್ಧತಿ ಇಲ್ಲ. ಅದೇ ರೀತಿ ಪಟಾಕಿ ಹೊಡೆಯುವುದು ಅಷ್ಟಕಷ್ಟೇ. ಚಿಕ್ಕವಳಿದ್ದಾಗ ಭಯದಲ್ಲೇ ಪಟಾಕಿ ಹೊಡೆಯುವುದು ನಮ್ಮ ಕೆಲಸವಾಗುತ್ತಿತ್ತು. ಓರಗೆಯವರೊಂದಿಗೆ ಸೇರಿ ಪಟಾಕಿ ಹೊಡೆಯುವಾಗ, ನನ್ನ ವೇಲ್ಗೆ ಪಟಾಕಿಯ ಕಿಡಿ ಸಿಡಿದು ಸುಟ್ಟಿತ್ತು. ಈಗಲೂ ಅಂದಿನ ಚೇಷ್ಟೆ ನೆನಪಿಗೆ ಬರುತ್ತವೆ. ಇದೀಗ ಪಟಾಕಿ ಹೊಡೆಯುವುದನ್ನು ಕಡಿಮೆ ಮಾಡಿದ್ದೇನೆ. ಅದರ ಬದಲು ದೀಪಗಳಿಂದಲೇ ಮನೆಯನ್ನು ಅಲಂಕರಿಸುತ್ತೇನೆ. ಮನೆ ಮುಂದೆ ಚಿಕ್ಕ ಗಾರ್ಡನ್ ಮಾಡಿದ್ದೇವೆ. ಅದರೊಳಗಿನ ತುಳಸಿಗಿಡಕ್ಕೆ ಪೂಜೆ ಸಲ್ಲಿಸಿ, ಸಂಬಂಧಿಕರ ಮನೆಗೆ ಹೋಗಿ ಹಬ್ಬ ಆಚರಿಸುತ್ತೇವೆ. ಅಡುಗೆಯ ಸಂಪೂರ್ಣ ಜವಾಬ್ದಾರಿ ಅಮ್ಮ ವಹಿಸಿಕೊಳ್ಳುತ್ತಾರೆ. ನಮ್ಮದೇನಿದ್ದರೂ, ಅಲಂಕಾರ, ಪೂಜೆಗೆ ಸಿದ್ಧತೆ ಮಾಡಿಕೊಳ್ಳುವುದು. ಮನೆ ಅಕ್ಕ ಪಕ್ಕ ಸಾಕು ಪ್ರಾಣಿಗಳಿರುವುದರಿಂದ ಪಟಾಕಿ ಹೊಡೆಯುವುದನ್ನೂ ಕಡಿಮೆ ಮಾಡಿದ್ದೇನೆ.
| ನಕ್ಷತ್ರ
ಚಿಕ್ಕಂದಿನಲ್ಲಿ ನಾನು ಮತ್ತು ಆಶಿಕಾ ದೀಪಾವಳಿಯನ್ನು ತುಂಬ ಮಜವಾಗಿ ಆಚರಣೆ ಮಾಡುತ್ತಿದ್ದೆವು. ಅಪ್ಪನ ಜತೆಗೆ ಹೋಗಿ ಪಟಾಕಿ ತರುವುದೇ ಒಂದು ಸಂಭ್ರಮ. ನಮ್ಮಿಬ್ಬರದ್ದು ಪಟಾಕಿ ಹೊಡೆಯುವುದೇ ಕೆಲಸ. ಅದರಲ್ಲೂ ನಾನು ಪಟಾಕಿಯನ್ನು ಕೈಯಲ್ಲಿ ಹಿಡಿದೇ ಹೊಡೆಯುತ್ತಿದ್ದೆ. ದೀಪಾವಳಿಗೆ ತಂದಿದ್ದ ಪಟಾಕಿಯನ್ನು ಉಳಿಸಿಕೊಂಡು ತುಳಸಿ ಮದುವೆ ದಿನದಂದೂ ಹೊಡೆದಿದ್ದು ನೆನಪಿದೆ. ಇದೆಲ್ಲದರ ನಡುವೆ ಈ ಸಲದ ದೀಪಾವಳಿ ಆಚರಣೆ ಕೊಂಚ ಸರಳವಾಗಿರಲಿದೆ. ಏಕೆಂದರೆ, ಅಮ್ಮ ಮತ್ತು ಆಶಿಕಾ ಚೆನ್ನೈನಲ್ಲಿ ಶೂಟಿಂಗ್ಗೆ ಹೋಗಿದ್ದಾರೆ. ಹಾಗಾಗಿ ನಾವು ಮಾಡುವ ಕೆಲಸವೇ ಈ ಸಲದ ಸಂಭ್ರಮ. ಈ ನಡುವೆ ಪುನೀತ್, ಇಲ್ಲದ್ದೂ ನೋವಿನ ವಿಚಾರ. ಆದರೂ, ಹೊಸದೊಂದು ಬೆಳಕು ಬರಲೇಬೇಕು. ಇದ್ದಿದ್ದನ್ನು ಒಪ್ಪಿಕೊಂಡು ಮುಂದೆ ಹೋಗಲೇಬೇಕು.
| ಅನುಷಾ ರಂಗನಾಥ್