ಬೆಂಗಳೂರು: ‘ಶಿಷ್ಯ’ ಚಿತ್ರದ ಮೂಲಕ ಹೀರೋ ಆದ ದೀಪಕ್, ಇದೀಗ ಚಿತ್ರರಂಗದಲ್ಲಿ 14 ವರ್ಷಗಳನ್ನು ಪೂರೈಸಿದ್ದಾರೆ. ಈಗ ಹೊಸ ಇನ್ನಿಂಗ್ಸ್ ಪ್ರಾರಂಭಿಸಿರುವ ಅವರು, ‘ಏಕ್ ಲವ್ ಯಾ’ ಚಿತ್ರದಲ್ಲಿ ರೆಬೆಲ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿರುವುದಷ್ಟೇ ಅಲ್ಲ, ಪ್ರಜ್ವಲ್ ಅಭಿನಯದ ‘ವೀರಂ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ.
ಈ 14 ವರ್ಷಗಳಲ್ಲಿ ದೀಪಕ್ ಅಭಿನಯಿಸಿರುವ ಚಿತ್ರಗಳ ಸಂಖ್ಯೆ ಬೆರಳಣಿಕೆಯಷ್ಟೇ. ಅವರು ಕೊನೆಯದಾಗಿ ನಟಿಸಿದ ಚಿತ್ರ, ಶಿವರಾಜಕುಮಾರ್ ಅಭಿನಯದ ‘ಬೆಳ್ಳಿ’. ಈ ಚಿತ್ರ ಬಿಡುಗಡೆಯಾಗಿ ಆರು ವರ್ಷಗಳಾಗಿವೆ. ಹೀಗೆ ತಮ್ಮ ಚಿತ್ರಜೀವನದಲ್ಲಿ ಸಾಕಷ್ಟು ಗ್ಯಾಪ್ಗಳನ್ನು ಕಂಡಿರುವ ದೀಪಕ್, ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಹೀಗೆ ಗ್ಯಾಪ್ಗಳಾಗುವುದಕ್ಕೆ ಕಾರಣ ಏನು ಎಂದರೆ, ಅವರ ಬಗ್ಗೆ ಇದ್ದ ಹಲವು ಆರೋಪಗಳು. ದೀಪಕ್ ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರುವುದಿಲ್ಲ, ಅವರಿಗೆ ಕಮಿಟ್ವೆುಂಟ್ ಇಲ್ಲ, ಅವರು ಫೋನ್ ಎತ್ತುವುದಿಲ್ಲ, ಪ್ರತಿಯೊಂದಕ್ಕೂ ತಕರಾರು ತೆಗೆಯುತ್ತಾರೆ ಎಂಬಂತಹ ಆರೋಪಗಳು ದೀಪಕ್ ಬಗ್ಗೆ ಕೆಲವು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಅದೇ ಅವರ ವೃತ್ತಿಬದುಕಿಗೆ ಯಡವಟ್ಟಾಯಿತು ಎಂದರೆ ತಪ್ಪಿಲ್ಲ.
ಲೂಸ್ಟಾಕ್ನಿಂದ ಹೀಗೆಲ್ಲಾ ಆಯ್ತು: ಈ ಕುರಿತು ಮಾತನಾಡುವ ದೀಪಕ್, ‘ಎಷ್ಟೋ ಜನ ನನ್ನ ಜತೆಗೆ ಚಿತ್ರ ಮಾಡೋಕೆ ಬರುತ್ತಿದ್ದರು. ಆದರೆ, ಅವರ ಬಳಿ ದುಡ್ಡಾಗಲೀ, ಪ್ಯಾಶನ್ ಆಗಲೀ ಇರುತ್ತಿರಲಿಲ್ಲ. ಸುಮ್ಮನೆ ಚಿತ್ರ ಮಾಡೋಕೆ ಬರುತ್ತಿದ್ದರು. ಆರಂಭದಲ್ಲಿ ಕೆಲವು ಚಿತ್ರಗಳನ್ನು ಮಾಡಿದೆ. ಕ್ರಮೇಣ ಅದೇ ನನ್ನ ವೃತ್ತಿಜೀವನಕ್ಕೆ ಸಮಸ್ಯೆಯಾಯಿತು. ಹಾಗಾಗಿ ಅಂತಹ ಕೆಲವು ತಂಡಗಳಿಂದ ದೂರಾಗುತ್ತಾ ಹೋದೆ. ಆಗ ನನ್ನ ವಿರುದ್ಧ ಏನೇನೋ ಮಾತಾಡೋಕೆ ಶುರು ಮಾಡಿದರು.
ಆ ಲೂಸ್ಟಾಕ್ನಿಂದ ನನ್ನ ವೃತ್ತಿಜೀವನಕ್ಕೆ ಪೆಟ್ಟು ಬಿತ್ತು. ಇದೆಲ್ಲದರಿಂದ ಬೇಸರವಾಗಿ, ನಾನೇ ಸ್ವಲ್ಪ ದೂರ ಇದ್ದುಬಿಟ್ಟಿದ್ದೆ. ಈ ಮಧ್ಯೆ, ‘ಏಕ್ ಲವ್ ಯಾ’ದಲ್ಲಿ ಪ್ರೇಮ್ ನನಗೊಂದು ರೆಬೆಲ್ ಪೊಲೀಸ್ ಪಾತ್ರವನ್ನು ಕೊಟ್ಟರು. ಆ ನಂತರ ‘ವೀರಂ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆ ನಿರ್ವಪಕರ ಬಳಿಯೂ ನನ್ನ ಬಗ್ಗೆ ಏನೇನೋ ಸುದ್ದಿ ಹಬ್ಬಿಸಿದ್ದರು. ಆದರೆ, ಅವರಿಗೆ ನನ್ನ ಬಗ್ಗೆ ಗೊತ್ತಾಗಿ, ನನ್ನ ಮೇಲೆ ನಂಬಿಕೆ ಇಟ್ಟು ಚಿತ್ರ ಮಾಡುತ್ತಿದ್ದಾರೆ’ ಎನ್ನುತ್ತಾರೆ ದೀಪಕ್. ಜೀವನವೇ ಹಾಳಾಗಿ ಹೋಯ್ತು: ಇಷ್ಟೆಲ್ಲಾ ಆರೋಪಗಳಿರುವಾಗ ದೀಪಕ್ ಯಾಕೆ ಸುಮ್ಮನಿದ್ದರು, ಅವರ್ಯಾಕೆ ಈ ಆರೋಪಗಳನ್ನು ಹಿಂದೆಯೇ ಕ್ಲಿಯರ್ ಮಾಡಲಿಲ್ಲ ಎಂಬ ಪ್ರಶ್ನೆ ಸಹಜ.
ಈ ಪ್ರಶ್ನೆಗೆ, ‘ಅದೇ ನಾನು ಮಾಡಿದ ದೊಡ್ಡ ತಪು್ಪ’ ಎಂಬ ಉತ್ತರ ಅವರಿಂದ ಬರುತ್ತದೆ. ‘ಇದನ್ನೆಲ್ಲಾ ಆಗಲೇ ಹೇಳಬೇಕು ಅಂತಿತ್ತು. ಆದರೆ, ನನ್ನನ್ನ ಬಿಡುತ್ತಿರಲಿಲ್ಲ. ನಮ್ಮವರೇ ಕಲ್ಲು ಹಾಕಿದರು. ಇದೆಲ್ಲದರಿಂದ ನನ್ನ ಜೀವನವೇ ಹಾಳಾಗಿ ಹೋಯ್ತು. ಇದೆಲ್ಲದರಿಂದ ನನ್ನ 14 ವರ್ಷಗಳ ವೃತ್ತಿಜೀವನವನ್ನು ಪಣಕ್ಕೆ ಇಡುವ ಹಾಗಾಯ್ತು. ಇದೆಲ್ಲವನ್ನೂ ಬಹಿರಂಗವಾಗಿ ಹೇಳುವ ಹಾಗಿರಲಿಲ್ಲ. ಇನ್ನು ಸಾಧ್ಯವೇ ಇಲ್ಲ ಎಂದು ಈಗ ಹೊರಗೆ ಬಂದಿದ್ದೇನೆ’ ಎನ್ನುತ್ತಾರೆ ದೀಪಕ್. ಹಾಗಾದರೆ, ಇನ್ನು ಮುಂದೆ ಅವರು ನೆಗೆಟಿವ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾರಾ? ಹಾಗೇನಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ನಾನೊಬ್ಬ ನಟ. ಹೀರೋ, ವಿಲನ್ ಎಂದು ಯಾವುದೇ ಚೌಕಟ್ಟು ಹಾಕಿಕೊಂಡಿಲ್ಲ. ಒಳ್ಳೆಯ ಪಾತ್ರ ಯಾವುದೇ ಆದರೂ ಇನ್ನು ಮುಂದೆ ಮಾಡುತ್ತಾ ಹೋಗುತ್ತೇನೆ’ ಎಂದು ಮಾತು ಮುಗಿಸುತ್ತಾರೆ ಅವರು.
50 ಲಕ್ಷ ಸಹ ನೋಡಿಲ್ಲ
‘ನಾನು ಇದುವರೆಗೂ 10 ಚಿತ್ರಗಳಲ್ಲಿ ನಟಿಸಿರಬಹುದು. ಆದರೆ, 50 ಲಕ್ಷ ಸಹ ನೋಡಿಲ್ಲ. ಎಷ್ಟೋ ಚಿತ್ರಗಳಲ್ಲಿ ಸರಿಯಾಗಿ ದುಡ್ಡು ಸಿಗಲಿಲ್ಲ. ಕೆಲವು ಚಿತ್ರಗಳು ಬಹಳ ತಡವಾಗಿ ಬಿಡುಗಡೆಯಾದರೆ, ಇನ್ನೂ ಕೆಲವು ಬಿಡುಗಡೆಯಾಗಿದ್ದೇ ಗೊತ್ತಾಗಲಿಲ್ಲ. ಇದೆಲ್ಲದರಿಂದ ಬೇಸತ್ತು ಸುಮ್ಮನಾಗಿಬಿಟ್ಟಿದ್ದೆ.
ಹಾಗಂತ ಸುಮ್ಮನೆ ಕುಳಿತುಕೊಳ್ಳುವ ಹಾಗಿರಲಿಲ್ಲ. ಏನಾದರೂ ಮಾಡಬೇಕಿತ್ತು. ಆಗ ಮಹೇಶ್ ಬಾಬು, ‘ಮುಸ್ಸಂಜೆ ಮಹೇಶ್’ ಮುಂತಾದ ಎಷ್ಟೋ ನಿರ್ದೇಶಕರನ್ನ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಕೇಳಿದ್ದೂ ಇದೆ. ಹೀಗಿರುವಾಗಲೇ, ಪ್ರೇಮ್ ಬಂದು ಅವಕಾಶ ಕೊಟ್ಟರು. ಆ ನಂತರ ‘ವೀರಂ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು’ ಎನ್ನುತ್ತಾರೆ ದೀಪಕ್.