ಸಿನಿವಾಣಿ

ಪರಭಾಷೆ ಹೀರೋಗಳ ಕಡೆ ಒದೆತಿಂದು ಬರಬೇಡಿ; ಕನ್ನಡದ ನಾಯಕ ನಟರಿಗೆ ನಿರ್ದೇಶಕ ಡೆಡ್ಲಿ ರವಿ ಶ್ರೀವತ್ಸ ಮನವಿ!!

ಬೆಂಗಳೂರು: ಕನ್ನಡದ ಸ್ಟಾರ್​ ನಟರು ಕನ್ನಡದಲ್ಲಿ ಹೀರೋಗಳಾದರೆ, ಪರಭಾಷೆಗಳಲ್ಲಿ ವಿಲನ್​ ಆಗಿ ಅಬ್ಬರಿಸುತ್ತಾರೆ. ಕಿಚ್ಚ ಸುದೀಪ್​ ನಟನೆಯ ಬಹುತೇಕ ಪರಭಾಷೆ ಸಿನಿಮಾಗಳಲ್ಲಿ ವಿಲನ್​ ಆಗಿ ಅಬ್ಬರಿಸಿದ್ದೇ ಹೆಚ್ಚು. ಈಗ ಆ ವಿಲನ್​ ಪಟ್ಟಕ್ಕೆ ಕಿವಿಗೊಡಬೇಡಿ ಎಂದು ಕನ್ನಡದ ನಿರ್ದೇಶಕ ರವಿ ಶ್ರೀವತ್ಸ ಮನವಿ ಟ್ವಿಟರ್​ನಲ್ಲಿ ಮಾಡಿದ್ದಾರೆ.
‘ನನ್ನ ಎಲ್ಲ ಹೀರೋಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅಭಿನಯ, ಹೆಸರು, ಹಣ, ಕೀರ್ತಿ ಈ ಹಣೆಪಟ್ಟಿ ಹುಡ್ಕೊಂಡು ದಯಮಾಡಿ ಹೊರ ಭಾಷೆಗಳಲ್ಲಿ ಅಭಿನಯಿಸಿ, ಅಲ್ಲಿನ ಹೀರೋಗಳ ಕೈಯಲ್ಲಿ ಒದೆ ತಿಂದು ಬರಬೇಡಿ!ಪ್ಲೀಸ್​ ’ ಎಂದು ಮನವಿ ಮಾಡಿದ್ದಾರೆ. ಹೀಗೆ ಮನವಿ ಮಾಡಿದ್ದು, ಇತ್ತೀಚೆಗೆ ಸುದ್ದಿಯಲ್ಲಿರುವ ಪುಷ್ಪಾ ಸಿನಿಮಾದ ಸುದ್ದಿಯೊಂದನ್ನು ಕೇಳಿ.
ಬಹುಭಾಷೆಯಲ್ಲಿ ಸಿದ್ಧವಾಗುತ್ತಿರುವ ಪುಷ್ಪ ಚಿತ್ರದಲ್ಲಿ ವಿಜಯ್​ ಸೇತುಪತಿ ಖಳನಾಗಿ ನಟಿಸಬೇಕಿತ್ತು. ಕಾರಣಾಂತರಗಳಿಂದ ಅವರು ಹಿಂದೆ ಸರಿದರು. ಹೀಗಿರುವಾಗಲೇ ವಿಜಯ್​ ಸ್ಥಾನಕ್ಕೆ ಕನ್ನಡದ ನಟ ಧನಂಜಯ ಹೆಸರು ಕೇಳಿಬಂದಿತ್ತು. ಆ ಸುದ್ದಿಯನ್ನು ನೋಡಿ, ರವಿ ಶ್ರೀವತ್ಸ ಈ ರೀತಿ ತಮ್ಮ ಮನದಾಳ ಹೇಳಿಕೊಂಡಿದ್ದಾರೆ. ರವಿ ಶ್ರೀವತ್ಸ ಅವರ ಅಭಿಪ್ರಾಯಕ್ಕೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಅದನ್ನೇ ಫಾಲೋ ಮಾಡುವಂತೆ ಎಲ್ಲ ಹೀರೋಗಳಿಗೆ ನೆಟ್ಟಿಗರೇ ಸಲಹೆ ನೀಡುತ್ತಿದ್ದಾರೆ.