ಮುಂಬೈ: ಭಾರತದಲ್ಲಿ ಅತೀ ಹೆಚ್ಚು ಸಮಯ ಪ್ರದರ್ಶನವಾದ ಚಿತ್ರಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಚಿತ್ರ 1995ರ ಅಕ್ಟೋಬರ್ 20ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಮತ್ತು ಜನಪ್ರಿಯತೆಗಳೆರಡನ್ನೂ ಪಡೆದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮುಂಬೈನ ಮರಾಠಾ ಮಂದಿರದಲ್ಲಿ ಈ ಚಿತ್ರ ಸತತವಾಗಿ 24 ವರ್ಷಗಳಿಗೂ ಹೆಚ್ಚು ಸಮಯ ಪ್ರದರ್ಶನ ಕಂಡಿತ್ತು.
ಆದರೆ, ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಇಡೀ ದೇಶದಲ್ಲಿ ಚಿತ್ರಪ್ರದರ್ಶನ ನಿಂತಿತ್ತು. ಇದರಿಂದ ಸತತವಾಗಿ 24ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರದರ್ಶನಗೊಂಡ 'ಡಿಡಿಎಲ್ಜೆ' ಪ್ರದರ್ಶನ ಸ್ಥಗಿತಗೊಂಡಿತ್ತು. ಇದೀಗ ಚಿತ್ರಪ್ರದರ್ಶನ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 13ರಿಂದ 'ಡಿಡಿಎಲ್ಜೆ' ಚಿತ್ರವನ್ನು ಮರಾಠಾ ಮಂದಿರದಲ್ಲಿ ಪುನಃ ಪ್ರದರ್ಶಿಸಲಾಗುತ್ತದೆ.
'ಡಿಡಿಎಲ್ಜೆ' ಚಿತ್ರವು ಬಿಡುಗಡೆಯಾಗಿ ಇತ್ತೀಚೆಗಷ್ಟೇ 25 ವರ್ಷಗಳಾಗಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು 25 ವರ್ಷ ಪ್ರದರ್ಶನ ಕಂಡ ಮೊದಲ ಭಾರತೀಯ ಚಿತ್ರವಾಗುತಿತ್ತು. ಆದರೆ, ಲಾಕ್ಡೌನ್ ಅದಕ್ಕೆ ಅನುವು ಮಾಡಿಕೊಡಲಿಲ್ಲ. ಈಗ ಚಿತ್ರಪ್ರದರ್ಶನ ಪುನಃ ಪ್ರಾರಂಭವಾಗಿದ್ದು, ಮುಂದಿನ ಎಂಟು ತಿಂಗಳುಗಳ ಕಾಲ ಸತತ ಪ್ರದರ್ಶನ ಮಾಡಿ, ಆ ನಂತರ ಅದೇ ಚಿತ್ರಮಂದಿರದಲ್ಲಿ ರಜತ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಚಿತ್ರವು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 18 ರಾಷ್ಟ್ರಗಳಲ್ಲಿ ಮತ್ತೊಮ್ಮೆ ಬಿಡುಗಡೆ ಆಗಲಿದೆ. ಜರ್ಮನಿ, ಅರಬ್ ರಾಷ್ಟ್ರಗಳು, ಕತಾರ್, ಅಮೆರಿಕಾ, ಇಂಗ್ಲೆಂಡ್, ಕೆನಡಾ, ಮಾರಿಷಸ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ 18ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರೀ-ರಿಲೀಸ್ ಆಗುತ್ತಿದೆ.
ಯಶ್ ಚೋಪ್ರಾ ನಿರ್ಮಾಣದ ಮತ್ತು ಅವರ ಮಗ ಆದಿತ್ಯ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಖಾನ್, ಕಾಜೋಲ್, ಅನುಪಮ್ ಖೇರ್, ಅಮರೀಶ್ ಪುರಿ, ಫರೀದಾ ಜಲಾಲ್, ಮಂದಿರಾ ಬೇಡಿ ಸೇರಿ ಹಲವರು ನಟಿಸಿದ್ದರು.