ಸಿನಿವಾಣಿ

ಹೊಸ ವರ್ಷಕ್ಕೆ 'ಡ್ಯಾಶ್' ಹಾಡಿನ ಜತೆ ಬಂದ ಚಂದನ್​ ಶೆಟ್ಟಿ …

chetannadiger

ಬೆಂಗಳೂರು: 'ಸೂತ್ರಧಾರಿ' ಚಿತ್ರದ ಒಂದು ಹಾಡಿಗೆ ಚಂದನ್​ ಶೆಟ್ಟಿ ಮತ್ತು ಸಂಜನಾ ಆನಂದ್​ ಹೆಜ್ಜೆ ಹಾಕಿದ್ದಾರೆ, ಆ ಹಾಡಿನ ಚಿತ್ರೀಕರಣ ಇತ್ತೀಚೆಗೆ ಇನ್ನೋವೇಟಿವ್​ ಫಿಲಂ ಸಿಟಿಯಲ್ಲಿ ನಡೆದಿದೆ ಎಂಬ ಸುದ್ದಿ ಬಂದಿತ್ತು. ಹೊಸ ವರ್ಷದ ಸಂಭ್ರಮಾಚರಣೆಗೆ ಈ ಹಾಡು ಹೇಳಿ ಮಾಡಿಸಿದಂತಿದೆ ಎಂದು ಚಿತ್ರತಂಡ, ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಿದೆ.

ಅಂದಹಾಗೆ, ಈ ಹಾಡಿನ ಹೆಸರು 'ಡ್ಯಾಶ್​'. ಇದಕ್ಕೆ ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಚಂದನ್​ ಶೆಟ್ಟಿ ಅವರದ್ದೇ. ಎ2 ಮ್ಯೂಸಿಕ್​ ಚಾನಲ್​ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಈಗಾಗಲೇ ಒಂದೂವರೆ ಮಿಲಿಯನ್​ ವೀಕ್ಷಣೆಯನ್ನು ದಾಖಲಿಸಿದೆ.

ಈ ಹಾಡು ಹೊಸವರ್ಷಕ್ಕೆ 'ಸೂತ್ರಧಾರಿ' ಚಿತ್ರತಂಡದಿಂದ ಒಂದು ಉಡುಗೊರೆ ಎನ್ನುವ ಚಂದನ್​ ಶೆಟ್ಟಿ, ''ಡ್ಯಾಶ್​' ಎಂದರೆ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ. ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ 'ಭಜರಂಗಿ ಮೋಹನ್' ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ' ಎಂದು ಮಾಹಿತಿ ಕೊಡುತ್ತಾರೆ.

ಸಂಜನಾ ಆನಂದ್​ಗೆ ಇದು ಮೊದಲ ಸ್ಪೆಷಲ್​ ಹಾಡಂತೆ. 'ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಹಾಡು ಅದ್ಭುತವಾಗಿದೆ' ಎನ್ನುತ್ತಾರೆ ಅವರು.

'ಸೂತ್ರಧಾರಿ' ಚಿತ್ರವನ್ನು ಕಿರಣ್​ ಕುಮಾರ್ ನಿರ್ದೇಶಿಸಿದ್ದು, ನವರಸನ್​ ನಿರ್ಮಾಣ ಮಾಡಿದ್ದಾರೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಚಂದನ್​ ಶೆಟ್ಟಿಗೆ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ.