ಬೆಂಗಳೂರು: ದಯಾಳ್ ಪದ್ಮನಾಭನ್ ಸದ್ಯ ದಿಕ್ಕು ತೋರಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಂದರೆ, ‘ರಂಗನಾಯಕಿ’ ಸಿನಿಮಾ ಬಳಿಕ ‘ಲೂಸ್ ಮಾದ’ ಯೋಗಿ ಜತೆ ‘ಒಂಭತ್ತನೇ ದಿಕ್ಕು’ ಸಿನಿಮಾ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಇದೇ ಚಿತ್ರಕ್ಕೀಗ ತಾರಾ ಮೆರುಗು ಸಿಕ್ಕಿದೆ. ಅಂದರೆ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ‘ಒಂಭತ್ತನೇ ದಿಕ್ಕು’ ಚಿತ್ರದ ಭಾಗವಾಗಿದ್ದಾರೆ. ಆರಂಭದಲ್ಲಿ ಕಥೆಯ ಹಿನ್ನೆಲೆ ಮತ್ತು ಕೊನೆಯ ಉಪಸಂಹಾರಕ್ಕೆ ದರ್ಶನ್ ಧ್ವನಿ ನೀಡಿದ್ದಾರೆ.
‘ಆರಂಭ ಮತ್ತು ಕೊನೆಗೆ ಬರುವ ಕೆಲವು ಸಾಲುಗಳು ಚಿತ್ರಕ್ಕೆ ಬಹುಮುಖ್ಯವಾದ ಭಾಗ. ಅದನ್ನು ಪರಿಚಿತ ಧ್ವನಿಯ ಮೂಲಕವೇ ಕೇಳುಗರಿಗೆ ತಲುಪಿಸಬೇಕು ಎಂಬುದು ನಮ್ಮ ಪ್ಲಾ್ಯನ್ ಆಗಿತ್ತು. ಅದರಂತೆ ದರ್ಶನ್ ಬಳಿ ಕೇಳಿದಾಗ ಒಪ್ಪಿಗೆ ಸೂಚಿಸಿದರು. ಒಂದೇ ದಿನದಲ್ಲಿ ಆಗಮಿಸಿ ಅವರ ಪಾಲಿನ ಕೆಲಸ ಮುಗಿಸಿಕೊಟ್ಟಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ದಯಾಳ್. ‘ಒಂದೇ ಸಮಯದ ಪರಿಧಿಯಲ್ಲಿ ಎರಡು ಬೇರೆ ಬೇರೆ ಕಥೆಗಳು ಜತೆಯಲ್ಲಿ ಸಾಗಲಿವೆ. ಕೊನೆಗೆ ಅವೆರಡು ಒಂದೆಡೆ ಸೇರುತ್ತವೆ. ಈ ಅಂಶವನ್ನು ನೋಡುಗರಿಗೆ ಮನವರಿಕೆ ಮಾಡಿಕೊಡುವ ಉದ್ದೇಶಕ್ಕೆ ಚಿತ್ರದ ಆರಂಭದಲ್ಲಿ ಗ್ರಾಫಿಕ್ಸ್ ಮಾಡಲಾಗಿದೆ. ಆ ಗ್ರಾಫಿಕ್ಸ್ಗೆ ದರ್ಶನ್ ಧ್ವನಿ ನೀಡಿದ್ದಾರೆ’ ಎನ್ನುವ ದಯಾಳ್, ಈಗಾಗಲೇ ಸಿನಿಮಾವನ್ನು ರೀ-ರೆಕಾರ್ಡಿಂಗ್ ಹಂತಕ್ಕೆ ತಂದಿದ್ದಾರೆ.
ಇನ್ನೇನು ಈ ತಿಂಗಳಾಂತ್ಯಕ್ಕೆ ಸೆನ್ಸಾರ್ ಮುಗಿಸಿಕೊಂಡು, ಫೆಬ್ರವರಿ ಕೊನೇ ವಾರದಲ್ಲಿ ಸಿನಿಮಾ ತೆರೆಗೆ ತರಲಿದ್ದಾರೆ. ಯೋಗಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ, ಅದಿತಿ ಪ್ರಭುದೇವ ನಾಯಕಿ. ನಿರ್ದೇಶನದ ಜತೆಗೆ ನಿರ್ವಣಕ್ಕೂ ದಯಾಳ್ ಬಂಡವಾಳ ಹೂಡುತ್ತಿದ್ದು, ಅವರಿಗೆ ಗುರು ದೇಶಪಾಂಡೆ ಮಾಲೀಕತ್ವದ ‘ಜಿ ಸಿನಿಮಾಸ್’ ಮತ್ತು ಚೆನ್ನೈ ಮೂಲದ ‘ಕೆ9 ಸ್ಟುಡಿಯೋ’ ನಿರ್ವಣದಲ್ಲಿ ಸಾಥ್ ನೀಡಿವೆ.