ಸಿನಿವಾಣಿ

ಕನ್ನಡಕ್ಕೆ "ದರ್ಶನ' ಗಾಯಕ; ಅಜೇಯ್​ ರಾವ್​ "ಯುದ್ಧಕಾಂಡ' ಚಿತ್ರದ ಹಾಡಿಗೆ ಹೇಷಮ್​ ಅಬ್ದುಲ್​ ವಹಾಬ್​ ಧ್ವನಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕೇರಳ ರಾಜ್ಯ ಪ್ರಶಸ್ತಿ ವಿಜೇತ ಗಾಯಕ, ಸಂಗೀತ ನಿರ್ದೇಶಕ 2021ರ ಸೂಪರ್​ಹಿಟ್​ "ಹೃದಯಂ' ಚಿತ್ರದ "ದರ್ಶನ' ಹಾಡಿನ ಖ್ಯಾತಿಯ ಹೇಷಮ್​ ಅಬ್ದುಲ್​ ವಹಾಬ್​ ಇದೀಗ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಜೇಯ್​ ರಾವ್​ ನಾಯಕನಾಗಿ ನಟಿಸಿ, ನಿರ್ಮಿಸುತ್ತಿರುವ, "ಕಟ್ಟಿಂಗ್​ ಶಾಪ್​' ನಿರ್ದೇಶಕ ಪವನ್​ ಭಟ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ "ಯುದ್ಧಕಾಂಡ' ಚಿತ್ರದ ಹಾಡೊಂದಕ್ಕೆ ಹೇಷಮ್​ ಧ್ವನಿಯಾಗಿದ್ದಾರೆ.

ಈ ಬಗ್ಗೆ ಅಜೇಯ್​ ರಾವ್​, "ಅನನ್ಯವಾದ, ಹೊಸ ವಾಯ್ಸ್​ ಒಂದು ಈ ಹಾಡಿಗೆ ಬೇಕಿತ್ತು. ಸಂಗೀತ ನಿರ್ದೇಶಕ ಕೆ.ಬಿ. ಪ್ರವಿಣ್​ ಒಂದು ಟ್ರ್ಯಾಕ್​ ​ ಹಾಡಿದ್ದರು. ಇದುವರೆಗು ಜನ ನನ್ನನ್ನು ರೊಮ್ಯಾಂಟಿಕ್​ ಇಮೇಜ್​ನಲ್ಲಿ ನೋಡಿಕೊಂಡು ಬಂದಿದ್ದಾರೆ. ಈ ಹಾಡು ಯೂಥ್​ಫುಲ್​ ಆಗಿದ್ದು, ನಾನೂ ಸಾಕಷ್ಟು ವರ್ಕೌಟ್​ ಮಾಡಿ ಯಂಗ್​ ಆಗಿ ಕಾಣಿಸಿಕೊಂಡಿದ್ದೇನೆ. ಹೀಗಾಗಿ ಈ ಹಾಡಿಗೆ ಹೊಸ ವಾಯ್ಸ್​ ಇದ್ದರೆ ಚಂದ ಅಂತ ಅನ್ನಿಸಿತು. ಕನ್ನಡಿಗರಿಗೆ ಪರಿಚಿತ ಧ್ವನಿಯಾಗಿದ್ದರೆ ಅದು ನನ್ನ ಲುಕ್​ಗೆ ಮ್ಯಾಚ್​ ಆಗುತ್ತಿರಲಿಲ್ಲ. ಹೀಗಾಗಿ ಹೇಷಮ್​ ಅವರನ್ನು ಸಂಪರ್ಕಿಸಿದೆವು. ಅವರ ಸಂಗೀತಕ್ಕೆ, ಹಾಡುಗಾರಿಕೆಗೆ ನಾನೂ ಫ್ಯಾನ್​​. "ದರ್ಶನ' ಸಾಂಗ್​ ಅಂತೂ ಈಗಲೂ ಟ್ರೆಂಡಿಂಗ್​ನಲ್ಲಿದೆ. ಅವರು ಕನ್ನಡ ಸಿನಿಮಾದಲ್ಲಿ ಇದುವರೆಗೂ ಹಾಡಿರಲಿಲ್ಲ. ಖುಷಿಯಿಂದ ಒಪ್ಪಿ ಹಾಡಿದರು' ಎಂದು ಮಾಹಿತಿ ನೀಡುತ್ತಾರೆ. ಪ್ರೇಮಿಗಳ ದಿನದ ಅಂಗವಾಗಿ ಇಂದು ಈ ಹಾಡು ರಿಲೀಸ್ ಆಗಿದೆ.

ಗಡಿ ದಾಟುವ ಸಾಮರ್ಥ್ಯವಿರುವ ಗಟ್ಟಿ ಕಥೆ:

ಅಂದಹಾಗೆ, ಹೇಷಮ್​ ಅವರಿಂದ ಈ ಹಾಡನ್ನು ಹಾಡಿಸಲು "ಒಂದು ಸ್ವಾರ್ಥವೂ ಇದೆ' ಎನ್ನುತ್ತಾರೆ ಅಜೇಯ್​. ""ಯುದ್ಧಕಾಂಡ' ಎಲ್ಲ ಭಾಷೆಗಳಿಗೂ ಸಲ್ಲುವಂತಹ ಸಿನಿಮಾ ಎಂಬ ಬಲವಾದ ನಂಬಿಕೆ ನನ್ನದು. ಆ ಶಕ್ತಿ ನಮ್ಮ ಚಿತ್ರಕ್ಕಿದೆ. ಇದು ತಾಯಿ&ಮಗನ ಕುರಿತ ವಿಷಯ. ದೇಶದ ಎಲ್ಲ ಭಾಗಗಳಲ್ಲೂ ನಡೆಯುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಕುರಿತ ಸಿನಿಮಾ. ಕಂಟೆಂಟ್​ ತುಂಬ ಚೆನ್ನಾಗಿದೆ. ಕನ್ನಡಿಗರು ನಮ್ಮ ಚಿತ್ರವನ್ನು ಒಪ್ಪಿಕೊಂಡರೆ, "ಕಾಂತಾರ'ದಂತೆ ನಂತರದ ದಿನಗಳಲ್ಲಿ ಪರಭಾಷೆಗಳಲ್ಲೂ ಡಬ್​ ಮಾಡಿ ರಿಲೀಸ್​ ಮಾಡುವ ಪ್ಲಾ$್ಯನ್​ ಇದೆ. ಹೇಷಮ್​ ಅವರಿಂದ ಹಾಡಿಸಲು ಅದೂ ಒಂದು ಕಾರಣ. ಅವರು ಮಲಯಾಳಂ ಮಾತ್ರವಲ್ಲದೇ ಕೆಲ ಪ್ಯಾನ್​ ಇಂಡಿಯಾ ಚಿತ್ರಗಳಲ್ಲಿ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ಹಾಡಿ ಗುರುತಿಸಿಕೊಂಡಿದ್ದಾರೆ' ಎನ್ನುತ್ತಾರೆ.

ಏಪ್ರಿಲ್​ನಲ್ಲಿ ಬಿಡುಗಡೆ

"ಯುದ್ಧಕಾಂಡ' ಚಿತ್ರದ ಸೆನ್ಸಾರ್​ ಈಗಾಗಲೇ ಪೂರ್ಣಗೊಂಡಿದ್ದು, ಏಪ್ರಿಲ್​ನಲ್ಲಿ ರಿಲೀಸ್​ ಮಾಡಲು ಅಜೇಯ್​ ರಾವ್​ ಸಿದ್ಧತೆ ನಡೆಸಿದ್ದಾರೆ. "ಕಳೆದ ಡಿಸೆಂಬರ್​ನಲ್ಲೇ ಬಿಡುಗಡೆ ಮಾಡಲು ಪ್ಲಾ$್ಯನ್​ ಮಾಡಿಕೊಂಡಿದ್ದೆವು. ನನ್ನ ತಾಯಿಗೆ ಅನಾರೋಗ್ಯವಿದ್ದ ಕಾರಣ, ಅವರ ಚಿಕಿತ್ಸೆಗೆಂದು ಓಡಾಡುತ್ತಿದ್ದೆ. ಅಮ್ಮ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ವಿತರಕರ ಜತೆ ಮಾತುಕತೆ ನಡೆಯುತ್ತಿದೆ. ಏಪ್ರಿಲ್​ನಲ್ಲಿ ರಿಲೀಸ್​ ಅಂತ ನಿರ್ಧರಿಸಿದ್ದೇವೆ. ಹೆಚ್ಚುಕಡಿಮೆ ಆದರೂ ಮೇ ಅಂತೂ ದಾಟುವುದಿಲ್ಲ. ಅಷ್ಟರಲ್ಲಿ ಬಿಡುಗಡೆ ಮಾಡುತ್ತೇವೆ' ಎಂದು ಮಾಹಿತಿ ನೀಡುತ್ತಾರೆ ಅಜೇಯ್​.