ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಟ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ "ಡೆವಿಲ್' ಚಿತ್ರದ ಬಗ್ಗೆ ಪ್ರಾರಂಭದಿಂದಲೂ ನಿರೀಕ್ಷೆ ಹೆಚ್ಚಿದೆ. "ಕಾಟೇರ'ದಲ್ಲಿ ಹಳ್ಳಿ ರಾ ಲುಕ್ನಲ್ಲಿ ಕಾಣಿಸಿಕೊಂಡಿದ್ದ ದರ್ಶನ್, "ಡೆವಿಲ್'ನಲ್ಲಿ ಸ್ಟೈಲಿಶ್ ಆಗಿ ಮಿಂಚಲಿದ್ದು, ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಪೋಸ್ಟರ್ಗಳು ವೈರಲ್ ಆಗಿವೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಪುತ್ತೂರು ಮೂಲದ ನಟಿ ರಚನಾ ರೈ ದರ್ಶನ್ಗೆ ನಾಯಕಿಯಾಗಿದ್ದಾರೆ. ಈಗಾಗಲೇ ಕನ್ನಡ ಮತ್ತು ತುಳು ಭಾಷೆಗಳ "ಸರ್ಕಸ್', "ಶ್ರೀರಂಗ' ಮತ್ತು "ಹ್ಯಾಪಿ ರ್ಬತ್ಡೇ ಟು ಮಿ' ಚಿತ್ರಗಳಲ್ಲಿ ನಟಿಸಿರುವ ರಚನಾಗೆ "ಡೆವಿಲ್' ಮೊದಲ ಬಹುಕೋಟಿ ವೆಚ್ಚದ, ಸ್ಟಾರ್ ಸಿನಿಮಾ. ಹೀಗಾಗಿಯೇ ಅವರಿಗೂ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು.
ಈ ಬಗ್ಗೆ ರಚನಾ, "ನಾನು "ಡೆವಿಲ್'ಗೆ ಆಡಿಷನ್ ಮೂಲಕ ಆಯ್ಕೆಯಾದೆ. ದರ್ಶನ್ ಸರ್ ಸಿನಿಮಾದಲ್ಲಿ ನಟಿಸುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. "ಡೆವಿಲ್' ಚಿತ್ರ ಒಪ್ಪಿಕೊಂಡಾಗಿನಿಂದ ನನಗೆ ಪ್ರತಿದಿನವೂ ಸ್ಪೆಷಲ್. ಈಗಲೇ ಪಾತ್ರದ ಬಗ್ಗೆ ಏನೂ ಹೇಳುವಂತಿಲ್ಲ. ದರ್ಶನ್ ಸರ್ ಜತೆ ತೆರೆಹಂಚಿಕೊಳ್ಳುತ್ತಿರುವದೇ ದೊಡ್ಡ ವಿಷಯ. ಆದರೆ, ಒಬ್ಬ ಸೂಪರ್ಸ್ಟಾರ್ ಜತೆ ಕೆಲಸ ಮಾಡುತ್ತಿರುವಂತೆ ನನಗೆ ಒಮ್ಮೆಯೂ ಫೀಲ್ ಆಗಿಲ್ಲ. ನಟಿಸುವಾಗ ತಿದ್ದಿ ಹೇಳುತ್ತಿದ್ದರು, ನಿರ್ದೇಶಕ ಪ್ರಕಾಶ್ ಸರ್ ಮತ್ತು ದರ್ಶನ್ ಪ್ರತಿ ಹಂತದಲ್ಲೂ ಬೆಂಬಲಿಸಿದ್ದಾರೆ. ಅವರಿಗೆ ಥ್ಯಾಂಕ್ಸ್' ಎಂದು ಮಾಹಿತಿ ನೀಡುತ್ತಾರೆ.
ಹಲವು ಪ್ರಾಣಿ, ಪಗಳನ್ನು ರಸಿರುವ ಪ್ರಾಣಿಪ್ರಿಯೆ ರಚನಾಗೆ ವೆಟರಿನರಿ ಡಾಕ್ಟರ್ ಆಗುವ ಆಸೆ ಇತ್ತಂತೆ. ಆದರೆ, ರಕ್ತವೆಂದರೆ ಭಯವಿದ್ದ ಕಾರಣ ಆ ಪ್ಲಾನ್ ಕೈಬಿಟ್ಟರಂತೆ. ಪದವಿ ಪೂರ್ಣಗೊಳಿಸಿದ ಬಳಿಕ ಕೆಲ ಪತ್ರಿಕೆಗಳಿಗೆ ಬರಹಗಳನ್ನೂ ಬರೆದಿರುವ ರಚನಾಗೆ ಸಾಹಿತ್ಯದ ಬಗ್ಗೆಯೂ ಒಲವಿದೆ. ಅದರ ಜತೆಗೆ ಕ್ರೀಡೆಯಲ್ಲೂ ಸಕ್ರಿಯರಾಗಿದ್ದ ಅವರು ರಾಷ್ಟ್ರಮಟ್ಟ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
"ಬ್ಯಾಡ್ಮಿಂಟನ್ ಸ್ಪರ್ಧೆಗಳಿಗಾಗಿ ಹಾಗೂ ಭರತನಾಟ್ಯಂ ಪ್ರದರ್ಶನ ನೀಡಲು ದೇಶದ ಹಲವೆಡೆ ಓಡಾಡಿದ್ದೇನೆ. ಹೀಗಾಗಿ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಕ್ಲಾಸ್ಗೆ ತೆರಳಿದ್ದೇ ಕಡಿಮೆ. ಜಾಲತಾಣದಲ್ಲಿ ನನ್ನ ಫೋಟೋ ನೋಡಿ ಮೊದಲ ಸಿನಿಮಾ ಅವಕಾಶ ಬಂದಿತ್ತು. ನಟಿಯಾಗುತ್ತೇನೆ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಏನೇನೋ ಆಗಬೇಕು ಅಂತ ಪ್ಲಾನ್ ಇದ್ದರೂ, ಸಿನಿಮಾ ನನ್ನ ಪಾಲಿಗೆ ದೇವರ ಪ್ಲಾನ್ ಅನ್ನಿಸುತ್ತದೆ. ಹೀಗಾಗಿ ಸದ್ಯಕ್ಕೆ ಸಿನಿಮಾನೇ ಪ್ಲಾನ್. ಮಾಡಿದರೂ ಇಲ್ಲೇ, ಮಡಿದರೂ ಇಲ್ಲೇ' ಎಂದು ಹೇಳಿಕೊಳ್ಳುತ್ತಾರೆ ರಚನಾ.
"ಡೆವಿಲ್'ಗೆ ಆಯ್ಕೆಯಾದ ಬೆನ್ನಲ್ಲೇ ರಚನಾಗೆ ಕನ್ನಡದ ಜತೆಜತೆಗೆ ತೆಲುಗು, ತಮಿಳಿನಲ್ಲೂ ಆರ್ಗಳು ಬರುತ್ತಿವೆಯಂತೆ. "ಎಷ್ಟು ಕಥೆ ಕೇಳಿದ್ದೇನೆ ಅಂತ ಲೆಕ್ಕಕ್ಕಿಲ್ಲ. ಕೆಲ ಕಥೆಗಳನ್ನು ಒಪ್ಪಿಕೊಂಡಿದ್ದೇನೆ. ಕೆಲ ದಿನಗಳಲ್ಲೇ ಅಧಿಕೃತವಾಗಿ ಘೋಷಣೆಯಾಗಲಿವೆ. ಸಾಮಾನ್ಯ ಜನರಿಗೆ, ಜೀವನಕ್ಕೆ ಕನೆಕ್ಟ್ ಆಗುವಂತಹ ನೈಜ ಕಥೆಗಳು ನೋಡಲು ಇಷ್ಟವಾಗುತ್ತವೆ. ಅಂತಹ ಪಾತ್ರಗಳಲ್ಲಿ ಹಾಗೂ ಪೀರಿಯಾಡಿಕ್ ಸಿನಿಮಾಗಳಲ್ಲಿ ನನಗೆ ನಟಿಸಲು ಇಷ್ಟ. ಒಬ್ಬ ಕಲಾವಿದೆಯಾಗಿ ಜನರ ಮನಸ್ಸಿನಲ್ಲಿ ಉಳಿಯಬೇಕು, ಅವರು ನೆನಪಿಸಿಕೊಳ್ಳುವಂತಹ ವ್ಯಕ್ತಿಯಾಗಬೇಕು ಎಂಬುದು ನನ್ನಾಸೆ' ಎನ್ನುತ್ತಾರೆ ರಚನಾ ರೈ.