ಸಿನಿವಾಣಿ

ಡಾರ್ಲಿಂಗ್ ಪ್ರಭಾಸ್​ರ 320 ಕೋಟಿ ಮೌಲ್ಯದ ಬಂಗಲೆ ಎಲ್ಲಿ ನಿರ್ಮಾಣವಾಗುತ್ತಿದೆ ಗೊತ್ತಾ?

ಹೈದರಾಬಾದ್: ನಟ ಡಾರ್ಲಿಂಗ್ ಪ್ರಭಾಸ್ ಈಗ ಭಾರತದಲ್ಲಿ ಮಾತ್ರ ಅಲ್ಲ, ಬದಲಿಗೆ ವಿಶ್ವದಲ್ಲಿ ಒಂದು ಸೆನ್ಸೇಷನ್. ಇತ್ತೀಚೆಗೆ ತಾನೆ, ಬ್ರಿಟನ್ ಪತ್ರಿಕೆ ಒಂದರಲ್ಲಿ ದಕ್ಷಿಣ ಏಷ್ಯಾದ ನಂ1 ನಟ ಎಂದು ಗುರುತಿಸಿಕೊಂಡರು. ಸಾಲು ಸಾಲು ಪ್ಯನ್ ಇಂಡಿಯನ್ ಸಿನಿಮಾಗಳ ಆಫರ್​ಗಳನ್ನು ಪಡೆಯುತ್ತಾ ಬಾಲಿವುಡ್ ನಟರಿಗೂ ಶಾಕ್ ಕೊಡುತ್ತಿದ್ದಾರೆ. ಅಂದಹಾಗೆ ಇದಕ್ಕೆ ಕಾರಣ ಬಾಹುಬಲಿ, ಬಾಹುಬಲಿ-2 ಸಿನಿಮಾಗಳು. ಈ ಎರಡು ಚಿತ್ರಗಳು ನಟನನ್ನು ಇಡೀ ವಿಶ್ವಕ್ಕೆ ಪರಿಚಿಯಿಸಿದವು... ನೂರಾರು ಸಿನಿಮಾಗಳು ಮಾಡಿ ಬಾಲಿವುಡ್​ನಲ್ಲಿ ಮತ್ತು ಇಡೀ ಭಾರತ ದೇಶದಲ್ಲೂ ಹೆಸರು ಮಾಡಿದ ಬಾಲಿವುಡ್ ನಟರಿಗೂ ಸಹ ಡಾರ್ಲಿಂಗ್ ಪ್ರಭಾಸ್​ಗೆ ಸಿಕ್ಕಷ್ಟು ಖ್ಯಾತಿ ಸಿಕ್ಕಿಲ್ಲ. ಅಂತಹ ನಟ ಇದೀಗ 320 ಕೋಟಿ ವೆಚ್ಚದಲ್ಲಿ ತಮ್ಮ ಕನಸಿನ ಮನೆಯನ್ನು ನಿರ್ಮಿಸುತ್ತಿದ್ದಾರೆ ಎಂದರೆ ನಿಮಗೆ ಹೇಗೆ ಅನಿಸಬಹುದು ? ಸದ್ಯ, ನಟ ಪ್ರಭಾಸ್ ತಮ್ಮ ತಾಯಿ ಶಿವಕುಮಾರಿ ಅವರ ಜೊತೆಗೆ ಹೈದರಾಬಾದ್​ನ ಜುಬ್ಲಿಹಿಲ್ಸ್​​ನಲ್ಲಿ ನೆಲೆಸಿದ್ದಾರೆ. 
ಆದರೆ, ಪ್ರಭಾಸ್ ಇದೀಗ ತಮ್ಮ ಹೊಸ ಮನೆಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಂದಹಾಗೆ, ನಟನ ಹೊಸ ಮನೆಯನ್ನು ಮನೆ ಎಂದು ವರ್ಣಿಸುವುದಕ್ಕಿಂದ ಐಷಾರಾಮಿ ಬಂಗಲೆ ಎಂದೇ ಹೇಳಬೇಕು. ಇದಕ್ಕೆ ಕಾರಣ ಪ್ರಭಾಸ್ ಅವರ ಮನೆ ಬರೋಬ್ಬರಿ 2 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಈ 2 ಎಕರೆ ಜಾಗಕ್ಕೆ ಡಾರ್ಲಿಂಗ್ ಪ್ರಭಾಸ್ 120 ಕೋಟಿ ಕೊಟ್ಟು ಖರೀದಿಸಿದ್ದಾರೆ. ಮತ್ತು ಈ ಜಾಗದಲ್ಲಿ ಮನೆಯ ನಿರ್ಮಾಣಕ್ಕೆಂದು 200 ಕೋಡಿ ಖರ್ಚು ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲಿಗೆ, ನಟ ಪ್ರಭಾಸ್ ಅವರ ಕನಸಿನ ಮನೆಗೆಂದು ಹೆಚ್ಚು ಕಡಿಮೆ 320 ಕೋಟಿ ಖರ್ಚು ಮಾಡಲಿದ್ದಾರೆ. ನಟನ ಈ ಕನಸಿನ ಮನೆ ಹೈದರಾಬಾದ್​ನ ಹೊರವಲಯದಲ್ಲಿರುವ ನಾನಕ್​ರಾಮ್​​ಗೂಡದಲ್ಲಿ ನಿರ್ಮಾಣವಾಗುತ್ತಿದೆ. ಏಕೆಂದರೆ, ನಟ ಪ್ರಭಾಸ್​ಗೆ ಹೆಚ್ಚು ಜನಸಂದಣಿ ಇರುವ ಸ್ಥಳಗಳು ತುಂಬಾ ಇಷ್ಟವಾಗುವುದಿಲ್ಲ. ಅವರು ಏಕಾಂತವನ್ನು ಬಯಸುವ ವ್ಯಕ್ತಿ. ಇದೇ ಕಾರಣಕ್ಕೆ, ಹೈದರಾಬಾದ್​ನ ಹೊರವಲಯದಲ್ಲಿರುವ ಜಾಗವನ್ನು ನಟ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾನಕ್​ರಾಮ್‌ಗೂಡ ಸ್ಥಳ ಹಲವಾರು ಸಿನಿತಾರೆಯರ ಮನೆಗಳಿಗೆ ಹೆಸರುವಾಸಿಯಾಗಿದೆ. ಮತ್ತು ವಿವಿಧ ಶೂಟಿಂಗ್ ಸ್ಪಾಟ್‌ಗಳಿಗೆ ಈ ಸ್ಥಳದಿಂದ ಸುಲಭವಾಗಿ ತಲುಪಬಹುದು. ಏನೇ ಇರಲಿ, ಪ್ರಭಾಸ್ ತಮ್ಮ ಕನಸಿನ ಮನೆಗೆ 320 ಕೋಟಿ ಖರ್ಚು ಮಾಡುತ್ತಿರುವುದು ಎಲ್ಲರಿಗೂ ಶಾಕಿಂಗ್ ಆಗಿದೆ. ಆದರೆ, ಇದು ದೊಡ್ಡ ವಿಷಯ ಅಲ್ಲ. 'ಬಾಹುಬಲಿ', 'ಬಾಹುಬಲಿ-2' ಸಿನಿಮಾಗಳ ನಂತರ ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಅವರ ಒಂದು ಚಿತ್ರದ ಸಂಭಾವನೆ ಬರೋಬ್ಬರಿ 150 ಕೋಟಿಗೆ ಹೆಚ್ಚಳವಾಗಿದೆ. ಜೊತೆಗೆ, ಅವರ ಮುಂಬರುವ ಎಲ್ಲಾ ಪ್ಯಾನ್ ಇಂಡಿಯನ್ ಚಿತ್ರಗಳ ಬಜೆಟ್ ಕೇಳಿದರು ಅಭಿಮಾನಿಗಳು ದಂಗಾಗುತ್ತಾರೆ. 'ಆದಿಪುರುಷ್' ಚಿತ್ರದ ಬಜೆಟ್ 500 ಕೋಟಿ, 'ಸಲಾರ್' ಚಿತ್ರದ ಬಜೆಟ್ 300 ಕೋಟಿ, 'ಸ್ಪಿರಿಟ್' ಚಿತ್ರದ ಬಜೆಟ್ 550 ಕೋಟಿ, 'ಪ್ರಾಜೆಕ್ಟ್ K' ಚಿತ್ರದ ಬಜೆಟ್ 600 ಕೋಟಿ. ಹೀಗಿರುವಾಗ, ಡಾರ್ಲಿಂಗ್ ಪ್ರಭಾಸ್ ಜೀವನದಲ್ಲಿ 'ಕೋಟಿ' ಎಂಬ ಪದ ಹಾಸುಹೊಕ್ಕಾಗಿದೆ.