ಸಿನಿವಾಣಿ

ಡಾರ್ಕ್​ ನೆಟ್​ ಕಪಟಿ ; ಸುಕೃತಾ ವಾಗ್ಲೆ, ದೇವ್​, ಸಾತ್ವಿಕ್​ ನಟಿಸಿರುವ ಸಿನಿಮಾ

ಬೆಂಗಳೂರು: ಈ ಹಿಂದೆ "ಕೋಮ' ಎಂಬ ಚಿತ್ರ ನಿರ್ದೇಶಿಸಿದ್ದ ರವಿ ಕಿರಣ್​ ಮತ್ತು ಚೇತನ್​ ಆ್ಯಕ್ಷನ್​&ಕಟ್​ ಹೇಳಿರುವ ಡಾರ್ಕ್​ ನೆಟ್​ ಕಥಾಹಂದರದ ಸಿನಿಮಾ "ಕಪಟಿ'. ಸುಕೃತಾ ವಾಗ್ಲೆ, ದೇವ್​ ದೇವಯ್ಯ, ಸಾತ್ವಿಕ್​ ಕೃಷ್ಣನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇತ್ತೀಚೆಗಷ್ಟೆ ನಟ ಡಾರ್ಲಿಂಗ್​ ಕೃಷ್ಣ ಚಿತ್ರದ ಟೀಸರ್​ ರಿಲೀಸ್​ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕ ದಯಾಳ್​ ಪದ್ಮನಾಭನ್​ "ಕಪಟಿ'ಯನ್ನು ನಿರ್ಮಿಸುತ್ತಿದ್ದು, "ನಾನು 10 ಕನ್ನಡ, ಎರಡು ತಮಿಳು ಚಿತ್ರಗಳು ಸೇರಿ 12 ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಅದರಲ್ಲಿ 11 ಚಿತ್ರಗಳನ್ನು ನಾನೇ ನಿರ್ದೇಶಿಸಿದ್ದೇನೆ. ಆದರೆ ರವಿಕಿರಣ್​ ಮತ್ತು ಚೇತನ್​ ಹೇಳಿದ ಕಥೆ ಇಷ್ಟವಾಗಿ ಈ ಚಿತ್ರವನ್ನು ನಿರ್ಮಿಸಿದ್ದೇನೆ. "ಗುಳ್ಟೂ' ಚಿತ್ರದ ನಂತರ ಕನ್ನಡದಲ್ಲಿ ಮೂಡಿಬಂದಿರುವ ಡಾರ್ಕ್​ ನೆಟ್​ ಜಾನರ್​ ಚಿತ್ರವಿದು' ಎಂದು ಮಾಹಿತಿ ನೀಡಿದರು.

"ಕಪಟಿ' ಇದೇ ತಿಂಗಳ 23ರಂದು ರಿಲೀಸ್​ ಆಗಲಿದ್ದು, ನಾಯಕಿ ಸುಕೃತಾ ವಾಗ್ಲೆ, "ನಾನು ಚಿತ್ರರಂಗ ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಕಥೆ ಇಷ್ಟವಾದ ಕಾರಣ ಬಹುದಿನಗಳ ಬಳಿಕ ಮತ್ತೆ ನಟಿಸಿದ್ದೇನೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದು ಹೇಳಿಕೊಂಡರು.