ಸಿನಿವಾಣಿ

ಒಂದು ಡೇರ್​ಡೆವಿಲ್ ಪ್ರಯತ್ನ: ತೇಜಸ್ವಿ ಅಭಿಮಾನಿಗಳೇ ನಿರ್ವಿುಸುತ್ತಿರುವ ಸಿನಿಮಾ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿಗಳನ್ನು ಸಿನಿಮಾ ಮಾಡುವುದಕ್ಕೆ ಬಯಸುತ್ತಿರುವ ಹಲವು ನಿರ್ದೇಶಕರು ಇದ್ದಾರೆ. ಆದರೆ, ಇಲ್ಲೊಬ್ಬರು ತೇಜಸ್ವಿ ಅವರ ಹೆಚ್ಚು ಪ್ರಸಿದ್ಧವಲ್ಲದ ಒಂದು ಸಣ್ಣಕಥೆಯನ್ನು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಆ ಕಥೆಯೇ ‘ಡೇರ್​ಡೆವಿಲ್ ಮುಸ್ತಾಫಾ’. ಈ ಚಿತ್ರವನ್ನು ತೆರೆಯ ಮೇಲೆ ತರುವುದಕ್ಕೆ ಹೊರಟಿರುವವರು ಶಶಾಂಕ್ ಸೋಗಾಲ್. ಶಶಾಂಕ್ ಇದಕ್ಕೂ ಮುನ್ನ ‘ಫಟಿಂಗ’ ಎಂಬ ಕಿರುಚಿತ್ರ ಮಾಡಿದ್ದರು. ಇದೀಗ ‘ಡೇರ್​ಡೆವಿಲ್ ಮುಸ್ತಾಫಾ’ ಕಥೆಯ ಹಕ್ಕುಗಳನ್ನು ಪಡೆದಿರುವ ಅವರು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಮಂಗಳವಾರ (ಸೆ.08) ತೇಜಸ್ವಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸುವುದರ ಜತೆಗೆ, ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಎಲ್ಲ ಸರಿ, ತೇಜಸ್ವಿಯವರ ಈ ಕಥೆಯೇ ಏಕೆ? ಈ ಪ್ರಶ್ನೆಯನ್ನು ಶಶಾಂಕ್ ಅವರ ಮುಂದಿಟ್ಟರೆ, ‘ಈಗಿನ ಕಾಲಘಟ್ಟಕ್ಕೆ ಈ ಕಥೆ ಬಹಳ ಮಹತ್ವದ್ದೆನಿಸುತ್ತದೆ. ಬಹಳ ಗಂಭೀರವಾದ ವಿಷಯವೊಂದನ್ನು ಅವರು ತಮಾಷೆಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆ ಕಥೆಯನ್ನು ಮೂಲವಾಗಿಟ್ಟುಕೊಂಡು, ಮಿಕ್ಕಂತೆ ಒಂದಿಷ್ಟು ವಿಷಯಗಳನ್ನು ಸೇರಿಸಿ ಚಿತ್ರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಶಾಂಕ್.

ಈ ಚಿತ್ರವು ಕ್ರೌಡ್​ಫಂಡಿಂಗ್ ಮೂಲಕ ನಿರ್ವಣವಾಗುತ್ತಿದ್ದು, ತೇಜಸ್ವಿ ಅವರ ಅಭಿಮಾನಿಗಳು ಸೇರಿಕೊಂಡು ಚಿತ್ರ ನಿರ್ವಿುಸುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹೊಸಬರು ನಟಿಸುತ್ತಿದ್ದು, ಮಿಕ್ಕಂತೆ ಮಂಡ್ಯ ರಮೇಶ್, ಉಮೇಶ್, ನಾಗಭೂಷಣ್ ಮುಂತಾದವರು ನಟಿಸುತ್ತಿದ್ದಾರೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದ್ದು, ರಾಹುಲ್ ರಾಯ್ ಛಾಯಾಗ್ರಹಣ ಮಾಡುತ್ತಿದ್ದಾರೆ.