ಬೆಂಗಳೂರು: ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ "ದರ್ಬಾರ್" ಚಿತ್ರ ಇಂದು ದೇಶಾದ್ಯಂತ ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಕೆಲವೆಡೆ ಚಿತ್ರದ ಶೋಗಳು ಮಧ್ಯರಾತ್ರಿಯಿಂದಲೇ ಆರಂಭವಾಗಿವೆ. ತಲೈವಾ ರಜಿನಿ ನಟನೆ ಹಾಗೂ ಸ್ಟೈಲ್ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದಾರೆ. ಇದರ ನಡುವೆ ಈಗಾಗಲೇ ಚಿತ್ರವನ್ನು ವೀಕ್ಷಿಸಿದವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದರ್ಬಾರ್ ಚಿತ್ರಕ್ಕೆ ಬೆರಳಣಿಕೆಯಷ್ಟು ಮಂದಿ ಬಿಟ್ಟರೆ ಎಲ್ಲರೂ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ರಜಿನಿಕಾಂತ್ ನಟನೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಆದರೆ ಚಿತ್ರದ ಕತೆಯ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಕತೆಯಲ್ಲಿ ಹೊಸತನವಿಲ್ಲ. ಮಾಮೂಮಿ ಮಿಕ್ಸ್ ಮಸಾಲಾ ಸಿನಿಮಾದಂತಿದೆ ಎಂದು ಬೇಸರ ಹೊರಹಾಕಿದ್ದಾರೆ. ಆದರೆ ಸಾಕಷ್ಟು ಮಂದಿ ಚಿತ್ರ ಅದ್ಧೂರಿಯಾಗಿದೆ. ಸ್ಕ್ರೀನ್ಪ್ಲೇ ಚೆನ್ನಾಗಿದೆ. ಕಾಮಿಡಿ ಅಂಶವು ನೆಗೆಗಡಲಲ್ಲಿ ತೇಲಿಸುತ್ತದೆ. ಹಿನ್ನೆಲೆ ಧ್ವನಿ ಸೇರಿದಂತೆ ರಜಿನಿ ಅಭಿನಯ ಎಲ್ಲರನ್ನು ಸೆಳೆಯುತ್ತದೆ. ಇದೊಂದು ಪಕ್ಕಾ ಕುಟುಂಬ ಮನರಂಜನೆಯ ಚಿತ್ರ ಎಂದೆಲ್ಲಾ ಮೆಚ್ಚುಗೆ ಸೂಚಿಸಿದ್ದಾರೆ.
ಕೆಲ ನೆಟ್ಟಿಗರು ಚಿತ್ರದ ಬಗ್ಗೆ ನೀಡಿದ ಕಮೆಂಟ್ ಈ ಕೆಳಕಂಡಂತಿದೆ...
ಒಂದೇ ಪದದಲ್ಲಿ ಹೇಳುವುದಾದರೆ ಮಾಸ್ಟರ್ ಪೀಸ್
ಚಿತ್ರದ ಬಗ್ಗೆ ಒಂದೇ ಪದದಲ್ಲಿ ಹೇಳುವುದಾದರೆ ಮಾಸ್ಟರ್ ಪೀಸ್. ತಲೈವಾ ರಜಿನಿಕಾಂತ್ ಅದ್ಭುತವಾಗಿ ನಟಿಸಿದ್ದಾರೆ. ಬಿಜಿಎಂ ಚೆನ್ನಾಗಿದೆ ಎಂದು ಕಮೆಂಟ್ ಮಾಡಿ 5ಕ್ಕೆ 4.5 ಅಂಕ ಕೊಟ್ಟಿದ್ದಾರೆ.
ಚಿತ್ರದಲ್ಲಿ ಎಲ್ಲವೂ ಅದ್ಭುತ
ತಲೈವರ್ ನಟನೆ ಎಲ್ಲರನ್ನು ಆವರಿಸಿದೆ. ಸ್ಕ್ರೀನ್ಪ್ಲೇ, ನಿರ್ದೇಶನ, ಬಿಜಿಎಂ, ಸಿನಿಮ್ಯಾಟೋಗ್ರಫಿ, ಹಾಡು ಮತ್ತು ಸಾಹಸ ಹಾಗೂ ಸಿನಿಮಾ ಪಾತ್ರವರ್ಗ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ ಎಂದು ಟ್ರೆಂಡ್ ರಜಿನಿ ಟ್ವಿಟರ್ ಪೇಜ್ನಲ್ಲಿ 5ಕ್ಕೆ 4.5 ಅಂಕ ನೀಡಿ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ನೀರಸ ಕತೆ
ನಾನೊಬ್ಬ ತಲೈವಾ ಅಭಿಮಾನಿಯಾಗಿ ಚಿತ್ರವು ನಿಜವಾಗಿಯೂ ನಿರಾಸೆ ಮೂಡಿಸಿತು. ಚಿತ್ರದಲ್ಲಿ ಯಾವುದೇ ತಾರ್ಕಿಕ ಅಂತ್ಯವಿಲ್ಲ. ಕೆಲವೊಂದು ಸನ್ನಿವೇಶಗಳನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ನಿರ್ದೇಶಕರೊಂದಿಗೆ ತಲೈವಾ ಮತ್ತೊಮ್ಮೆ ಸಿನಿಮಾ ಮಾಡಬೇಡಿ. ಬಿಜಿಎಂ ಬಿಟ್ಟರೆ ಹೊಸತೇನು ಇಲ್ಲ. ಇದೊಂದು ಹಳೆಯ ಮಸಾಲಾ ಚಿತ್ರವಾಗಿದೆ ಎಂದು ನೆಟ್ಟಿಗನೊಬ್ಬ 5ಕ್ಕೆ ಒಂದು ಅಂಕ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ತಲೈವಾ ಮ್ಯಾಜಿಕ್
ಚಿತ್ರದಲ್ಲಿ ಸಂಪೂರ್ಣ ರಜಿನಿಕಾಂತ್ ಮ್ಯಾಜಿಕ್ ಅಡಗಿದೆ. ಯೋಗಿಬಾಬು ಕಾಮಿಡಿ ಹಾಸ್ಯ ಕಡಲಲ್ಲಿ ತೇಲಿಸುತ್ತದೆ. ಚಿತ್ರದ ಮೊದಲಾರ್ಧ ಒಳ್ಳೆಯ ಮನರಂಜನೆ ನೀಡುತ್ತದೆ. ದ್ವೀತಿಯಾರ್ಧದಲ್ಲಿ ಭಾವನಾತ್ಮಕ ಸನ್ನಿವೇಶ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕ್ಲೈಮ್ಯಾಕ್ಸ್ ಅಂತು ಇಡೀ ಚಿತ್ರವನ್ನು ಮೇಲಕ್ಕೆ ತೆಗೆದುಕೊಂಡೊಗುತ್ತದೆ ಎಂದು ನೆಟ್ಟಿಗನೊಬ್ಬ 5 ಕ್ಕೆ 4 ಅಂಕ ನೀಡಿ ಸಿಕ್ಕಾಪಟ್ಟೆ ಹೊಗಳಿದ್ದಾರೆ.
ಒಟ್ಟಾರೆ ಬೆರಳಣಿಕೆಯಷ್ಟು ಬಿಟ್ಟರೆ ಚಿತ್ರದ ಬಗ್ಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಕತೆ, ರಜಿನಿ ಸ್ಟೈಲ್ ಮತ್ತು ಸ್ಕ್ರೀನ್ ಪ್ರಸೆನ್ಸ್, ಬಿಜಿಎಂ, ರಜಿನಿ ಆ್ಯಕ್ಸನ್ ಸೇರಿದಂತೆ ಎಲ್ಲವನ್ನು ಇಷ್ಟಪಟ್ಟಿದ್ದಾರೆ. ಚಿತ್ರವು ಬಾಕ್ಸ್ಆಫೀಸ್ನಲ್ಲಿ 300 ಕೋಟಿ ರೂ.ಗು ಅಧಿಕ ಹಣವನ್ನು ಬಾಚಲಿದೆ ಎಂದು ಅಭಿಮಾನಿಗಳು ಹಾಗೂ ಸಿನಿರಸಿಕರು ಭವಿಷ್ಯ ನುಡಿದಿದ್ದಾರೆ.
ಅಂದಹಾಗೆ ದರ್ಬಾರ್ ಚಿತ್ರವನ್ನು ಎ. ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದು, ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಲ್ಲಿರಾಜಹ್ ಸುಬಸ್ಕರಣ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಜಿನಿಕಾಂತ್, ನಯನತಾರಾ, ನಿವೆತಾ ಥಾಮಸ್ ಮತ್ತು ಸುನೀಲ್ ಶೆಟ್ಟಿ ಸೇರಿದಂತೆ ಪ್ರಮುಖ ತಾರಾಗಣವೇ ಇದೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)