ಸಿನಿವಾಣಿ

ಹೀರೋ ಆದ ಡಾನ್ಸ್​ ಕರ್ನಾಟಕ ಡಾನ್ಸ್​ ಮೋಹನ್​ ; ಮುಕ್ತ ಮನಸು ಚಿತ್ರಕ್ಕೆ ಮಾನ್ಯ ನಾಯಕಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ರಂಗಾಯಣದಲ್ಲಿ 25 ವರ್ಷಗಳ ಕಾಲ ಕೆಲಸ ಮಾಡಿ, ಡಾ. ರಾಜಕುಮಾರ್​ ಫಿಲಂ ಶಾಲೆಯಲ್ಲಿ ಸಿನಿಮಾ ಮೇಕಿಂಗ್​ ಕಲಿತಿರುವ ಆರ್​.ಸಿ. ರಂಗಶೇಖರ್​ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಮೊದಲ ಬಾರಿಗೆ ನಿರ್ದೇಶಿಸಿರುವ ಸಿನಿಮಾ "ಮುಕ್ತ ಮನಸು'. ಅವರೂ ಮತ್ತು ನಾಯಕ ಮೋಹನ್​ ಸೇರಿ ಬಹುತೇಕ ಚಿತ್ರತಂಡ ಹೊಸಬರಿಂದ ಕೂಡಿದೆ.

ನಿರ್ದೇಶಕ ರಂಗಶೇಖರ್​, "ಪ್ರೇಮಿಗಳು ಮುಕ್ತವಾಗಿದ್ದರೆ, ಅವರ ಸಂಬಂಧದಲ್ಲಿ ಯಾವುದೇ ಕಲ್ಮಶವಿಲ್ಲದಿದ್ದರೆ ಪ್ರೀತಿ ಹೇಗೆ ಕೊನೆಯ ತನಕ ಉಳಿದುಕೊಳ್ಳುತ್ತದೆ? ಆ ನಿಜ ಪ್ರೀತಿ ಹೇಗಿರುತ್ತದೆ? ಎಂಬುದೇ ಚಿತ್ರದ ಒನ್​ಲೈನ್​. ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ನಾಯಕಿಗೆ ನಾಯಕನ ಮೇಲೆ ಪ್ರೇಮಾಂಕುರವಾಗುತ್ತದೆ. ಮನೆಯಲ್ಲಿ ವಿರೋಧ ಎದುರಾದಾಗ ಮುಕ್ತ ಮನಸುಗಳ ಪ್ರೀತಿ ಯಾವ ಹಂತಕ್ಕೆ ತಲುಪುತ್ತದೆ? ಕೊನೆಗೆ ಒಬ್ಬರೂ ಒಂದಾಗುತ್ತಾರಾ? ಎಂಬುದನ್ನು ಕಮರ್ಷಿಯಲ್​ ಅಂಶಗಳೊಂದಿಗೆ ಹೇಳುವ ಪ್ರಯತ್ನ ಮಾಡಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

"ಡಾನ್ಸ್​ ಕರ್ನಾಟಕ ಡಾನ್ಸ್​ ಸೀಸನ್​ 5'ರ ಸ್ಪರ್ಧಿ ಮೈಸೂರಿನ ಮೋಹನ್​ ರಂಗನಾಥ್​ ನಾಯಕನಾಗಿದ್ದು, ಆಟೋ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಕ್ಲಾಸಿಕಲ್​ ಡಾನ್ಸರ್​ ಮಾನ್ಯ ನಾಯಕಿಯಾಗಿದ್ದಾರೆ. ಉಳಿದಂತೆ ಶೋಭರಾಜ್​, ರಮೇಶ್​ ಪಂಡಿತ್​, ಅಪರ್ಣ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವಿನು ಮನಸು ಸಂಗೀತ, ರವಿ ಛಾಯಾಗ್ರಹಣವಿರಲಿದೆ.