ಸಿನಿವಾಣಿ

ದಿವ್ಯಾ-ಅರವಿಂದ್ ಅರ್ಧಂಬರ್ಧ ಪ್ರೇಮಕಥೆ; ರೀಲ್​ನಲ್ಲೂ ಒಂದಾದ ರಿಯಲ್ ಜೋಡಿ

‘ಬಿಗ್ ಬಾಸ್’ ಖ್ಯಾತಿಯ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯ ಮೇಲೂ ಪ್ರೇಮಿಗಳಾಗಿದ್ದಾರೆ. ‘ತುಘಲಕ್’, ‘ನಮ್ ಏರಿಯಾಲ್ ಒಂದಿನ’ ನಿರ್ದೇಶಕ ಅರವಿಂದ್ ಕೌಶಿಕ್ ಆಕ್ಷನ್ ಕಟ್ ಹೇಳಿರುವ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತದೆ. ಆದರೆ, ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಉಳಿಯವುದು ಕಷ್ಟ. ಏಕೆಂದರೆ, ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗುತ್ತದೆ ಎಂಬುದು ಚಿತ್ರದ ಸಾರಾಂಶ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ನಾಯಕನನ್ನು ಪರಿಚಯಿಸುವ ಟೀಸರ್ ದಸರಾ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಅರವಿಂದ್ ಕೌಶಿಕ್, ‘ಚಿತ್ರದಲ್ಲಿ ಅರವಿಂದ್ ಅವರ ಬೈಕ್ ರೇಸಿಂಗ್ ಸಾಧನೆಗಳ ಬಗ್ಗೆ ಹೇಳಿಲ್ಲ. ನಾನು ಮಾಡಿಕೊಂಡ ಕಥೆಗೆ ಒಬ್ಬ ಹೊಸ ನಾಯಕ ಬೇಕಿತ್ತು. ಆತ ಜನ ಗುರುತಿಸುವಂತಹ ನಾಯಕನೂ ಆಗಿರಬೇಕು ಅಂತ ಅಂದುಕೊಂಡಾಗ ಕೆಪಿ ಅರವಿಂದ್ ನೆನಪಾದರು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ’ ಎಂದು ಮಾಹಿತಿ ನೀಡುತ್ತಾರೆ.

ಅರವಿಂದ್, ದಿವ್ಯಾ ಜತೆಗೆ ಗಾಯಕ ರ್ಯಾಪರ್ ಆಲ್​ಓಕೆ ಖ್ಯಾತಿಯ ಅಲೋಕ್, ಶ್ರೇಯಾ, ವೆಂಕಟ್ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರ್ಯ ಛಾಯಾಗ್ರಹಣವಿರುವ ಈ ಚಿತ್ರವನ್ನು ನವೆಂಬರ್​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.