ಸಿನಿವಾಣಿ

ಹಿಂದಿ ‘ಬಿಗ್​ಬಾಸ್​​’ಗೆ ಶುರುವಾಯ್ತು ದಿನಗಣನೆ; ಆದರೆ, ಕಂಡಿಷನ್ಸ್ ಅಪ್ಲೈ ...

ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಅತಿ ಹೆಚ್ಚು ಟಿಆರ್​ಪಿ ಹೊಂದಿರುವ ರಿಯಾಲಿಟಿ ಶೋ. ಈಗಾಗಲೇ ಯಶಸ್ವಿ 13 ಸೀಸನ್​ಗಳನ್ನು ಮುಗಿಸಿಕೊಂಡಿರುವ ಬಿಗ್​ಬಾಸ್​, 14ನೇ ಸೀಸನ್​ಗೆ ತಯಾರಿ ನಡೆಸಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತೊಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆಯೂ ಸ್ಥಗಿತಗೊಂಡಿತ್ತು. ಇದೀಗ ಆಡಿಷನ್​ಗೆ ಚಾಲನೆ ನೀಡಲಾಗಿದೆ.

ಹೌದು, ಲಾಕ್​ಡೌನ್​ ಕೊಂಚ ಸಡಿಲಗೊಂಡ ಹಿನ್ನೆಲೆಯಲ್ಲಿ ಆನ್​ಲೈನ್ ಆಡಿಷನ್​ಗೆ ಬಿಗ್​ಬಾಸ್​ ತಂಡ ನಿರ್ಧರಿಸಿದೆ. ಈಗಾಗಲೇ ಒಂದಷ್ಟು ಅಭ್ಯರ್ಥಿಗಳನ್ನು ಆಡಿಷನ್​ ಮಾಡಿದ್ದು, ಅಕ್ಟೋಬರ್​ ಮೊದಲ ವಾರದಲ್ಲಿ ರಿಯಾಲಿಟಿ ಶೋ ಶುರುವಾಗಲಿದೆ. ಇನ್ನು ಕೆಲ ಮೂಲಗಳ ಪ್ರಕಾರ ಈಗಾಗಲೇ 30 ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟ್ ಮಾಡಲಾಗಿದ್ದು, ಆ ಪೈಕಿ 16 ಜನರನ್ನು ಆಯ್ದುಕೊಂಡು ಬಿಗ್​ ಮನೆಗೆ ಕಳುಹಿಸಲಿದ್ದಾರಂತೆ. 13 ಜನ ಸೆಲೆಬ್ರಿಟಿಗಳಾದರೆ, ಇನ್ನುಳಿದ ಮೂವರು ಸಾಮಾನ್ಯರಾಗಿರಲಿದ್ದಾರೆ.

ಒಂದೊಂದು ಸೀಸನ್​ನಲ್ಲೂ ಒಂದೊಂದು ಥೀಮ್​ ಆಯ್ದುಕೊಳ್ಳಲಾಗುತ್ತಿತ್ತು. ಈ ಸಲ ಅರಣ್ಯದ ಥೀಮ್​ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಸದ್ಯ ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪ್ರಶ್ನೆ ಎದ್ದಿರುವುದರಿಂದ, ಪ್ರತಿ ಸ್ಪರ್ಧಿಯ ಕೋವಿಡ್​ ಪರೀಕ್ಷೆ ಮಾಡಿಯೇ ಮನೆಒಳಗೆ ಬಿಡಲಾಗುತ್ತದೆಯಂತೆ. ಜತೆಗೆ ಮನೆಯಲ್ಲಿರುವವರ ಸುರಕ್ಷತೆಗೆ ಯಾವೆಲ್ಲ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೋ, ಅದೇ ಕ್ರಮಗಳನ್ನು ಶೂಟಿಂಗ್​ ಸೆಟ್​ನಲ್ಲೂ ಅಳವಡಿಸಿಕೊಳ್ಳಲು ತಂಡ ತೀರ್ಮಾನಿಸಿದೆ. (ಏಜೆನ್ಸೀಸ್​)