| ಚೇತನ್ ನಾಡಿಗೇರ್ ಬೆಂಗಳೂರು
ಕಳೆದ ಆರೂವರೆ ತಿಂಗಳುಗಳಲ್ಲಿ ಕನ್ನಡದಲ್ಲಿ 100ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಈ 100 ಪ್ಲಸ್ ಚಿತ್ರಗಳಲ್ಲಿ ಗುಣಮಟ್ಟದ ವಿಷಯದಲ್ಲಿ ಹಲವು ಚಿತ್ರಗಳು ಮುಂದಿವೆಯಾದರೂ, ಹಣಕಾಸಿನ ವಿಷಯದಲ್ಲಿ ಶೇ. 80ರಷ್ಟು ಚಿತ್ರಗಳು ಹಿಂದಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಾರಕ್ಕೆ ಎಂಟ್ಹತ್ತು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಎಷ್ಟೋ ಚಿತ್ರಗಳಿಗೆ ಮೊದಲ ದಿನವೇ ಪ್ರೇಕ್ಷಕರ ಅಭಾವ ಉಂಟಾಗಿ ಪ್ರದರ್ಶನಗಳು ರದ್ದಾಗಿವೆ. ಹಿಂದೊಮ್ಮೆ ಒಂದು ಚಿತ್ರ ಎಷ್ಟು ವಾರ ಪ್ರದರ್ಶನವಾಯಿತು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಆದರೆ, ಈಗ ಒಂದು ಚಿತ್ರ ಅದೆಷ್ಟು ಪ್ರದರ್ಶನ ಕಂಡಿದೆ ಎಂಬುದರ ಲೆಕ್ಕಾಚಾರ ನಡೆಯುತ್ತಿವೆ. ಅದರಲ್ಲೂ ಒಂದು ಪ್ರದರ್ಶನ ಹೌಸ್ಫುಲ್ ಆದರಂತೂ ಅದೇ ದೊಡ್ಡದು ಎಂಬಂತಾಗಿದೆ. ಒಂದು ಚಿತ್ರ ಸೋತರೆ ಬೇರೆ ಮಾತು. ಆದರೆ, ಜನ ಚಿತ್ರ ನೋಡುವುದಕ್ಕೆ ಚಿತ್ರಮಂದಿರದತ್ತಲೇ ಬರದಿದ್ದರೆ ಏನು ಮಾಡುವುದು?
ಇದು ಬರೀ ಕನ್ನಡ ಚಿತ್ರರಂಗವೊಂದರ ಮಾತಲ್ಲ. ಎಲ್ಲ ಭಾಷೆಯ ಚಿತ್ರರಂಗಗಳಲ್ಲೂ ಇದೇ ರೀತಿ ಪರಿಸ್ಥಿತಿ ಇದೆ. ಜನ ದೊಡ್ಡ ಸ್ಟಾರ್ಗಳ ಅಥವಾ ದೊಡ್ಡ ಬಜೆಟ್ ಚಿತ್ರಗಳನ್ನು ಮಾತ್ರ ನೋಡುತ್ತಾರೆ, ಮಿಕ್ಕಂತೆ ಸಣ್ಣ ಚಿತ್ರಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬ ಮಾತಿದೆ. ಆದರೆ, ಇಲ್ಲಿ ಚಿತ್ರಗಳ ಪ್ರಮಾಣ ಮುಖ್ಯವಲ್ಲ. ‘ಸಾಮ್ರಾಟ್ ಪೃಥ್ವಿರಾಜ್’, ‘ಆಚಾರ್ಯ’, ‘ಬೀಸ್ಟ್’ ಮುಂತಾದ ದೊಡ್ಡ ಚಿತ್ರಗಳು ಓಡಲಿಲ್ಲ. ಅದೇ ರೀತಿ ಕಂಟೆಂಟ್ ಇರುವ ಸಿನಿಮಾ ಎಂದು ಹೇಳಿಕೊಂಡು ಬಂದ ಕೆಲವು ಸಿನಿಮಾಗಳು ಗೊತ್ತಾಗದಂತೆ ಮಾಯವಾಗಿವೆ. ಇನ್ನು, ‘ಆರ್ಅರ್ಆರ್’, ‘ಕೆಜಿಎಫ್ 2’, ‘ವಿಕ್ರಮ್ ಮುಂತಾದ ಪಕ್ಕಾ ಕಮರ್ಷಿಯಲ್ ಮತ್ತು ಮಾಸ್ ಚಿತ್ರಗಳು ಸೂಪರ್ ಹಿಟ್ ಆಗಿವೆ. ಹಾಗಾದರೆ, ಇಲ್ಲಿ ಸಮಸ್ಯೆ ಏನು? ಜನ ಯಾವ ತರಹದ ಸಿನಿಮಾಗಳನ್ನು ಅಪೇಕ್ಷಿಸುತ್ತಿದ್ದಾರೆ? ಬೇರೆಬೇರೆ ಮನರಂಜನೆಗಳಿಂದಾಗಿ ಅವರಿಗೆ ಚಿತ್ರಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆಯಾ? ಅವರು ಚಿತ್ರಮಂದಿರಗಳತ್ತ ಬರುವುದು ಯಾಕೆ ಕಡಿಮೆಯಾಗುತ್ತಿದೆ? ಎಂಬ ಪ್ರಶ್ನೆಗಳು ಸಹಜ. ಈ ಪ್ರಶ್ನೆಗಳಿಗೆ ಉತ್ತರ ಮಾತ್ರ ಯಾರಿಗೂ ಸಿಗುತ್ತಿಲ್ಲ.
ಅದೇ ಕಾರಣಕ್ಕೆ ತೆಲುಗು ಚಿತ್ರ ನಿರ್ವಪರು ಆಗಸ್ಟ್ ಒಂದರಿಂದ ಚಿತ್ರೀಕರಣ ನಿಲ್ಲಿಸುವುದಕ್ಕೆ ಮುಂದಾಗಿದ್ದಾರೆ. ಜನ ಯಾಕೆ ಚಿತ್ರಮಂದಿರದತ್ತ ಬರುತ್ತಿಲ್ಲ? ಅವರನ್ನು ವಾಪಸ್ಸು ಕರೆತರುವುದಕ್ಕೆ ಏನು ಮಾಡಬೇಕು? ಅವರ ಅಭಿರುಚಿಗೆ ತಕ್ಕ ಹಾಗೆ ಸಿನಿಮಾ ಮಾಡುವದು ಹೇಗೆ? ಹೆಚ್ಚುತ್ತಿರುವ ಚಿತ್ರ ನಿರ್ಮಾಣ ವೆಚ್ಚವನ್ನು ತಗ್ಗಿಸುವುದು ಹೇಗೆ? ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಮೊದಲ ಹಂತವಾಗಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿರೀಕ್ಷಿತ ಚಿತ್ರವೊಂದು ಬಿಡುಗಡೆಯಾಗಿ ಕೆಲವೇ ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿರುವುದರಿಂದ, ಪ್ರೇಕ್ಷಕರು ಓಟಿಟಿಯಲ್ಲೇ ನೋಡಿಕೊಂಡರಾಯಿತು ಎಂದು ಚಿತ್ರಮಂದಿರಗಳಿಂದ ದೂರ ಉಳಿಯುತ್ತಿದ್ದಾರೆ. ಹಾಗಾಗಿ, ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವ ನಿಟ್ಟಿನಲ್ಲಿ ಚಿತ್ರವೊಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎಂಟು ವಾರಗಳ ನಂತರ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಲ್ಲದೆ ಹೆಚ್ಚಾಗಿರುವ ಕಲಾವಿದರ ಮತ್ತು ತಂತ್ರಜ್ಞರ ಸಂಭಾವನೆ, ಚಿತ್ರಮಂದಿರಗಳಲ್ಲಿ ದುಬಾರಿ ಪ್ರವೇಶದರ, ಪ್ರತೀ ವಾರ ಎರಡೇ ಚಿತ್ರಗಳ ಬಿಡುಗಡೆ ... ಮುಂತಾದ ಹಲವು ವಿಷಯಗಳನ್ನು ರ್ಚಚಿಸಿ, ಒಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಹೆಜ್ಜೆ ಇಟ್ಟಿದ್ದಾರೆ. ಒಂದಿಷ್ಟು ದಿನ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಿ, ಏನು ಮಾಡಬೇಕು ಅಥವಾ ಮಾಡಬಾರದು ಎಂಬುದರ ಕುರಿತು ತೀರ್ಮಾನ ತೆಗೆದುಕೊಂಡು ಆ ನಂತರ ಪುನಃ ಹೆಜ್ಜೆ ಇಡಬೇಕೆಂದು ತೀರ್ವನವಾಗಿದೆ. ಬರೀ ಟಾಲಿವುಡ್ ಅಷ್ಟೇ ಅಲ್ಲ, ಬೇರೆ ಚಿತ್ರರಂಗಗಳಲ್ಲೂ ಆತ್ಮಾವಲೋಕನ ಅತ್ಯಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಲೇ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಚಿತ್ರಮಂದಿರವೆಂಬುದು ನೆನಪಾಗಿ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಾಗಾದರೆ ಮುಂದೇನು? ಕಾದು ನೋಡಬೇಕು.
ಚಿತ್ರಗಳ ಸಂಖ್ಯೆ ಕಡಿಮೆ ಆಗುವುದಿಲ್ಲ: ಜನರನ್ನು ಚಿತ್ರಮಂದಿರಕ್ಕೆ ಹೇಗೆ ಕರೆತರಬೇಕು ಎಂಬ ವಿಷಯದ ಕುರಿತು ತೆಲುಗು ಚಿತ್ರರಂಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಕುರಿತು ಮಾತನಾಡುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ‘ಚಿತ್ರೀಕರಣ ನಿಲ್ಲಿಸುವುದರಿಂದ ಪರಿಹಾರ ಸಿಗುವುದಿಲ್ಲ ಅಥವಾ ಚಿತ್ರಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಜನ ಬರೀ ಸ್ಟಾರ್ ಸಿನಿಮಾಗಳನ್ನು ನೋಡುತ್ತಾರೆ ಎನ್ನುವುದು ಸರಿಯಲ್ಲ. ಹಾಗೆಯೇ ಸಣ್ಣ ಸಿನಿಮಾ ನೋಡುವುದಿಲ್ಲ ಎನ್ನುವುದು ಸರಿಯಲ್ಲ. ಆದರೆ, ಯಾಕೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬುದು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.