ಸಿನಿವಾಣಿ

ನಾಳೆ ಬಿಡುಗಡೆಯಾಗ್ತಿದೆಯಾ ಲಾ? ಸುದ್ದಿಯೂ ಇಲ್ಲ ... ಪ್ರಚಾರ ಇಲ್ಲವೆ ಇಲ್ಲ!

ಪುನೀತ್​ ರಾಜಕುಮಾರ್​ ನಿರ್ಮಾಣದ ಲಾ ಚಿತ್ರ ಜೂನ್​ 26ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗಲಿದೆ ಎಂಬ ಸುದ್ದಿಯೊಂದು ಕಳೆದ ತಿಂಗಳು ಕೇಳಿ ಬಂದಿತ್ತು. ಈ ಸುದ್ದಿ ಕೇಳಿದವರೆಲ್ಲಾ ಸಾಕಷ್ಟು ಸಂತಸಪಟ್ಟಿದ್ದರು. ಏಕೆಂದರೆ, ಈ ಹಿಂದೆ ಆದರ್ಶ್​ ಈಶ್ವರಪ್ಪ ನಿರ್ದೇಶನದ ಭಿನ್ನ ಜೀ5ನಲ್ಲಿ ನೇರವಾಗಿ ಬಿಡುಗಡೆಯಾಗಿತ್ತು. ಚಿತ್ರಮಂದಿರ ಬಿಟ್ಟು ನೇರವಾಗಿ ಓವರ್​ ದಿ ಟಾಪ್​ (ಓಟಿಟಿ)ನಲ್ಲಿ ಬಿಡುಗಡೆಯಾಗುತ್ತಿರುವ ಎರಡನೆಯ ಚಿತ್ರ ಎಂಬ ಹೆಗ್ಗಳಿಕೆಗೆ ಲಾ ಪಾತ್ರವಾಗಿತ್ತು.

ಇನ್ನೇನು ಚಿತ್ರ ಸ್ಟ್ರೀಮ್​ ಆಗುವುದಕ್ಕೆ ಒಂದು ದಿನ ಇರುವಾಗಲೇ, ಚಿತ್ರ ನಿಜಕ್ಕೂ ಬಿಡುಗಡೆಯಾಗುತ್ತಿದೆಯೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಾರಣ, ಚಿತ್ರ ಜೂನ್​ 26ಕ್ಕೆ ಬಿಡುಗಡೆಯಾಗುತ್ತದೆ ಎಂದು ಒಂದು ತಿಂಗಳ ಮುಂಚೆಯೇ ಹೇಳಲಾಗಿತ್ತು. ಆ ನಂತರ ಚಿತ್ರ ನಿರ್ಮಿಸಿರುವ ಪಿಆರ್​ಕೆ ಪ್ರೊಡಕ್ಷನ್​ ಆಗಲೀ, ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಅಮೇಜಾನ್ ಪ್ರೈಮ್​ ಆಗಲೀ ಚಿತ್ರದ ಬಗ್ಗೆ ಮಾತನಾಡಿಯೇ ಇಲ್ಲ.

ಈ ಹಿಂದೆ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ಅಮಿತಾಭ್​ ಬಚ್ಚನ್​ ಅಭಿನಯದ ಗುಲಾಬೋ ಸಿತಾಬೋ, ಜ್ಯೋತಿಕಾ ಅಭಿನಯದ ಪೊನ್ಮಗಳ್​ ವಂದಾಳ್​ ಮತ್ತು ಕೀರ್ತಿ ಸುರೇಶ್​ ಅಭಿನಯದ ಪೆಂಗ್ವಿನ್​ ಚಿತ್ರಗಳ ಪ್ರಚಾರ ಜೋರಾಗಿಯೇ ಆಗಿತ್ತು. ಚಿತ್ರದ ಟ್ರೇಲರ್​ಗಳು ಸಹ ಬಿಡುಗಡೆಯಾಗಿದ್ದವು. ಆದರೆ, ಲಾ ಚಿತ್ರದ ಪ್ರಚಾರವಾಗಿಲ್ಲ. ಅಷ್ಟೇ ಅಲ್ಲ, ಚಿತ್ರದ ಟ್ರೇಲರ್​ ಅಥವಾ ಟೀಸರ್ ಸಹ ಇನ್ನೂ ಬಿಡುಗಡೆಯಾಗಿಲ್ಲ. ಚಿತ್ರ ಹೇಗಿರಬಹುದು ಎಂಬ ಕಲ್ಪನೆ ಸಹ ಯಾರಿಗೂ ಇಲ್ಲ. ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಮಲಯಾಳಂನ ‘ಸೂಫಿಯಮ್ ಸುಜಾತೆಯಮ್’ ಚಿತ್ರದ ಟ್ರೇಲರ್​ ಸಹ ಯೂಟ್ಯೂಬ್​ನ ಅಮೇಜಾನ್​ ಪ್ರೈಮ್​ ವೀಡಿಯೋ ಚಾನಲ್​ನಲ್ಲಿ ಲಭ್ಯವಿದೆ. ಈ ಹಿಂದೆ ಬಿಡುಗಡೆಯಾದ ಎಲ್ಲಾ ಚಿತ್ರಗಳ ಟ್ರೇಲರ್​ ಸಿಗುತ್ತಿವೆ. ಆದರೆ, ಲಾ ಚಿತ್ರದ ಟ್ರೇಲರ್​ ಮಾತ್ರ ಇಲ್ಲ.

ಇಷ್ಟಕ್ಕೂ ಯಾಕೆ ಲಾ ಚಿತ್ರದ ಬಗ್ಗೆ ಏನೂ ಸುದ್ದಿಯೇ ಇಲ್ಲ. ಚಿತ್ರ ನಿಜಕ್ಕೂ ನಾಳೆ ಬಿಡುಗಡೆಯಾಗುತ್ತಿದೆಯೋ ಅಥವಾ ಬಿಡುಗಡೆ ದಿನಾಂಕವನ್ನೇನಾದರೂ ಮುಂದೂಡಲಾಗಿದೆಯೋ ಎಂಬ ಗೊಂದಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಕೆಲವರು ಹೇಳುವಂತೆ, ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೂಡಲಾಗಿದೆಯಂತೆ. ಹಾಗಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಈ ಕುರಿತು ಸದ್ಯಕ್ಕೆ ಚಿತ್ರತಂಡದಿಂದ ಅಥವಾ ಓಟಿಟಿ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ. ಹಾಗಾದರೆ, ರಾಗಿಣಿ ಪ್ರಜ್ವಲ್​ ಅಭಿನಯದ ಲಾ ಶುಕ್ರವಾರ ನಿಜಕ್ಕೂ ಬಿಡುಗಡೆಯಾಗುತ್ತದಾ? ಕಾದು ನೋಡಬೇಕು.