ಸಿನಿವಾಣಿ

ಉದಯ ಕಾಮಿಡಿಯಲ್ಲಿ ಇಂದಿನಿಂದ ನಗಿಸೋ ಚಾಲೆಂಜ್

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಿನೂತನ ಕಾರ್ಯಕ್ರಮಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಕಾಮಿಡಿ ವಾಹಿನಿ ಇದೀಗ ಮತ್ತೊಂದು ಹೊಸ ಕಾರ್ಯಕ್ರಮ ಆರಂಭಿಸಿದೆ. ಪ್ರೇಕ್ಷಕರನ್ನು ಸದಾ ನಗೆಗಡಲಲ್ಲಿ ತೇಲಿಸಲು ನಗಿಸುವ ಚಾಲೆಂಜ್ ಸ್ವೀಕರಿಸಿದೆ. ಉದಯ ಕಾಮಿಡಿ ವಾಹಿನಿಯು ‘ನಗಿಸೋ ಚಾಲೆಂಜ್’ ಎಂಬ ಹೊಸ ಹಾಸ್ಯಮಯ ಕಾರ್ಯಕ್ರಮ ಆರಂಭಿಸಿದೆ. ಜನರು ಆರೋಗ್ಯವಾಗಿ, ಲವಲವಿಕೆಯಿಂದ ಇರಲು ನಗು ಮುಖ್ಯ. ಹೀಗಾಗಿ ಈ ಹಾಸ್ಯ ಕಾರ್ಯಕ್ರಮದ ಟ್ಯಾಗ್​ಲೈನ್ ‘ನೋಡ್ತಾ ಇರಿ ನಗ್ತಾ ಇರಿ’.

ಈ ಕಾರ್ಯಕ್ರಮದ ಮೂಲಕ ರಾಜ್ಯದ ಹಾಸ್ಯ ಪ್ರತಿಭೆಗಳಿಗೆ, ಹೊಸ ಕಲಾವಿದರಿಗೆ ಈ ವಾಹಿನಿ ವೇದಿಕೆ ಕಲ್ಪಿಸಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಆಡಿಷನ್ ನಡೆಸಿ, ಆಯ್ಕೆ ಆದವರಿಗೆ ಚಾಲೆಂಜ್ ತೆಗೆದುಕೊಳ್ಳುವ ಅವಕಾಶ ನೀಡಿದೆ. ಪ್ರತಿ ಹಾಸ್ಯ ಕಲಾವಿದರಿಗೆ ವೇದಿಕೆಯಲ್ಲಿ 4 ನಿಮಿಷಗಳ ಕಾಲಾವಕಾಶ ಇರುತ್ತದೆ.

ಆ ಸಮಯದಲ್ಲಿ ಅವರು ತಮ್ಮ ಪ್ರತಿಭೆ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು. ಇಲ್ಲಿ ಹಲವು ಚಾಲೆಂಜ್​ಗಳು ಇರುತ್ತವೆ. ಸ್ಟಾ್ಯಂಡಪ್ ಕಾಮಿಡಿ, ಮಿಮಿಕ್ರಿ, ಸ್ಕಿಟ್ ಮೂಲಕ ರಂಜಿಸಬೇಕು. ಈ ಕಾರ್ಯಕ್ರಮಕ್ಕೆ ನಟಿ ‘ಸ್ಪರ್ಶ’ ರೇಖಾ, ಕಿರಿಕ್ ಕೀರ್ತಿ, ಹಾಸ್ಯನಟ ಪವನ್ ತೀರ್ಪಗಾರರು.

ಇವರು ತಮ್ಮ ಮಾತು, ಹರಟೆ, ವಿಮರ್ಶೆ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಲಿದ್ದಾರೆ. ಉದಯ ಕಾಮಿಡಿ ವಾಹಿನಿ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ಕಲ್ಪಿಸಿ ಅವರ ಬದುಕು ರೂಪಿಸಿದೆ. ಈಗ ‘ನಗಿಸೋ ಚಾಲೆಂಜ್’ ಕಾರ್ಯಕ್ರಮದ ಮೂಲಕ ಹೊಸ ಕಲಾವಿದರಿಗೆ ಉತ್ತಮ ವೇದಿಕೆ ಸೃಷ್ಟಿಸಿದೆ.

ಈ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ರಾಜ್ಯಕ್ಕೆ ಪರಿಚಯಿಸಿ ಅವರ ಪ್ರತಿಭೆಗೆ ತಕ್ಕ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುವುದು ಶೋ ನಿರ್ದೇಶಕ ಹಾಗೂ ಉದಯ ಕಾಮಿಡಿ ವಾಹಿನಿ ಮುಖ್ಯಸ್ಥ ಭುವನ್ ಶಾಸ್ತ್ರಿ ಮಾತು. ‘ನಗಿಸೋ ಚಾಲೆಂಜ್’ ಕಾರ್ಯಕ್ರಮ ಫೆ.1ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಉದಯ ಕಾಮಿಡಿಯಲ್ಲಿ ಪ್ರಸಾರ ಆಗಲಿದೆ.