ಯುವನಟ ಪ್ರದೀಪ್ ರಂಗನಾಥನ್​  
ಕಾಲಿವುಡ್

ಡಬಲ್ ಆಯ್ತು ಯೂತ್ ಐಕನ್​ 'ಡ್ಯೂಡ್'​ ಸಂಭಾವನೆ?​ 'ಹೀರೋ ಮೆಟಿರಿಯಲ್' ಅಲ್ಲದ ನಟನಿಂದಲೇ ಬ್ಲಾಕ್​ಬಸ್ಟರ್​ಗಳು! | Pradeep Ranganathan

ಪ್ರಮುಖ ಮುಖ್ಯಾಂಶಗಳು

  • ಯುವನಟ ಪ್ರದೀಪ್ ರಂಗನಾಥನ್ ಅಭಿನಯದ 'LIK' ನಾಳೆ (ಏ.10) ತೆರೆಗೆ
  • ಲವ್​ ಜಾನರ್​ ಬಿಟ್ಟು ಹೋಗದ ಪ್ರದೀಪ್​ರಿಂದ ಮತ್ತೊಂದು ಬಹುನಿರೀಕ್ಷಿತ ಚಿತ್ರ
  • ಸಾಲು ಸಾಲು ಸೂಪರ್​ಹಿಟ್ ಬೆನ್ನಲ್ಲೇ ನಟನ​ ಸಂಭಾವನೆ ಕೂಡ ಡಬಲ್​
ಚೆನ್ನೈ: ತಮಿಳಿನ ಸೂಪರ್​ಹಿಟ್ 'ಲವ್​ ಟುಡೇ',​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಭರ್ಜರಿ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಇದೀಗ ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಈ ಚಿತ್ರದ ಮೇಲೆ ಸದ್ಯ ಅವರ ಯುವ ಅಭಿಮಾನಿಗಳ ಬಳಗ ಹಾಗೂ ತಮಿಳು ಸಿನಿಪ್ರಿಯರು ಸಖತ್ ಥ್ರಿಲ್​ ಆಗಿದ್ದಾರೆ. ಯಾಕಂತ ಕಾತರ ಎಂಬ ಪ್ರಶ್ನೆಗೆ ಮತ್ತದೇ 'ಲವ್​' ಅನ್ನೋದೇ ಉತ್ತರ.

'ಹೀರೋ ಮೆಟಿರಿಯಲ್​' ಅಲ್ಲದ ನಟ

ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಇದೀಗ ತಮ್ಮ ಅಭಿಮಾನಿಗಳ ಬಳಗ ಮಾತ್ರವಲ್ಲದೇ ಅವಕಾಶಗಳು ಹಾಗೂ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದು ಇಲ್ಲಿ ಗಮನಾರ್ಹ. 2022ರಲ್ಲಿ, ಪ್ರದೀಪ್ 'ಲವ್ ಟುಡೇ' ಎಂಬ ಚಿತ್ರದ ಮುಖೇನ ಕಾಲಿವುಡ್​ಗೆ ಪಾದಾರ್ಪಣೆ ಮಾಡಿದರು. 'ಡ್ರ್ಯಾಗನ್​' ಚಿತ್ರದಲ್ಲಿ ಅಪಾರ ಯಶಸ್ಸು ಕಂಡರು. ಇದಾದ ಬಳಿಕ ತೆರೆಕಂಡ 'ಡ್ಯೂಡ್'​ನಲ್ಲಿ ಅಂತಹ ಗೆಲುವು ಕಾಣಲಿಲ್ಲ. ಆದರೆ, ಅವರ ನಟನೆಗೆ ಎಂದಿನಂತೆ ಪ್ರಶಂಸೆಗಳು ಮತ್ತು ಉತ್ತಮ ವಿಮರ್ಶೆಗಳು ವ್ಯಕ್ತವಾಯಿತು. ​

ನಾಳೆ (ಏ.10) LIK ರಿಲೀಸ್​

ವಿಘ್ನೇಶ್ ಶಿವನ್​ ನಿರ್ದೇಶಿಸಿರುವ ಹಾಗೂ ನಿರ್ಮಾಣ ಮಾಡಿರುವ 'ಲವ್​ ಇನ್ಶೂರೆನ್ಸ್​ ಕಂಪನಿ' ಚಿತ್ರದಲ್ಲಿ ಪ್ರದೀಪ್ ರಂಗನಾಥನ್​, ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವನ್​ ಮತ್ತು ನಟಿ ನಯನತಾರಾ ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್​ ಸಿನಿಮಾಗೆ ಮ್ಯೂಸಿಕ್ ಕಂಪೋಸ್​ ಮಾಡಿರುವುದು ವಿಶೇಷ. ಈ ಚಿತ್ರವೂ ಲವ್​ ಜಾನರ್ ಆಗಿದ್ದು, ಪ್ರದೀಪ್​ ಚಿತ್ರಗಳಲ್ಲಿ ಲವ್​ ಕಂಟೆಂಟ್​ ಇಲ್ಲದಿರಲು ಸಾಧ್ಯವೇ ಇಲ್ವಾ? ಎಂಬ ಪ್ರಶ್ನೆ ಸದ್ಯ ಅವರ ಅಭಿಮಾನಿಗಳಲ್ಲಿ ಕಾಡತೊಡಗಿದೆ. ಈ ಚಿತ್ರ ಇದೇ ಏ.10ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ.

ರಜಿನಿ ಸ್ವ್ಯಾಗ್​

ಪ್ರಸ್ತುತ, ಸ್ಟಾರ್​ ನಟನಾಗಿ ಕಾಲಿವುಡ್​ನಲ್ಲಿ ಮಿಂಚುತ್ತಿರುವ ಪ್ರದೀಪ್,​ಬಿಗ್ ಬ್ಯಾನರ್​ನ ಸಂಸ್ಥೆಗಳಿಂದ ಒಳ್ಳೊಳ್ಳೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅನೇಕ ನಿರ್ಮಾಪಕರು ಪ್ರದೀಪ್​ ಜೊತೆಗೆ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ. ತಮಿಳಿನ ಸೂಪರ್​ಸ್ಟಾರ್ ರಜಿನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ಪ್ರದೀಪ್, ತಮ್ಮ ಸಿನಿಮಾಗಳಲ್ಲಿ ಅವರಂತೆಯೇ ಆ್ಯಕ್ಷನ್​ ಮಾಡೋದು, ಅನುಕರಣೆಯೊಂದಿಗೆ ಡೈಲಾಗ್ ಹೊಡೆಯುತ್ತಾರೆ. ಇದು ಯುವ ಅಭಿಮಾನಿಗಳಿಗೆ ಅದೋನೋ ವಿಶೇಷ ಅನಿಸಿದೆ.

ಸಂಭಾವನೆ ಏರಿಕೆ, ಹೆಚ್ಚಿದ ಡಿಮಾಂಡ್

ಪ್ರಸ್ತುತ 8 ಸಿನಿಮಾಗಳು ಪ್ರದೀಪ್ ಕೈಯಲ್ಲಿವೆ ಎಂದು ಒಂದಷ್ಟು ಸಿನಿ ಮೂಲಗಳು ತಿಳಿಸಿವೆ. ಈ ಸಂಗತಿ ಸದ್ಯ ಕಾಲಿವುಡ್​ ಚಿತ್ರರಂಗಕ್ಕೆ ಆಶ್ಚರ್ಯ ತಂದಿದೆ. ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಪ್ರದೀಪ್ ರಂಗನಾಥನ್​ ಸಂಭಾವನೆ ಒಂದೊಂದು ಸಿನಿಮಾ ಕಳೆದಂತೆ ಡಬಲ್ ಆಗುತ್ತಲೆ ಇದೆ. ಆರಂಭದಲ್ಲಿ 5ರಿಂದ 6 ಕೋಟಿ ಪಡೆಯುತ್ತಿದ್ದ ಪ್ರದೀಪ್, ಈಗ ಒಂದು ಚಿತ್ರಕ್ಕೆ ಬರೋಬ್ಬರಿ 25ರಿಂದ 50 ಕೋಟಿ ರೂ.ವರೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ತಮಿಳು ಸಿನಿ ವರದಿಗಳು ತಿಳಿಸಿವೆ.

'ಲವ್'​ ಸಿನಿಮಾಗಳಿಂದಲೇ ಪ್ರದೀಪ್​ಗೆ ಭರ್ಜರಿ ಯಶಸ್ಸು

'ಲವ್ ಟುಡೇ', 'ಡ್ರ್ಯಾಗನ್'​ ಮತ್ತು 'ಡ್ಯೂಡ್' ಈಗಿನ ಕಾಲಘಟ್ಟದ ಯುವಜನತೆಯ ಪ್ರೇಮಕಥೆಗಳು ಮತ್ತು ಮನಸ್ಥಿತಿಗಳ ಮೇಲೆ ಹೆಚ್ಚು ಫೋಕಸ್​ ಮಾಡಲಾದ ಚಿತ್ರಗಳು. ಈ ಮೂರರಲ್ಲೂ ಲವ್​​ಸ್ಟೋರಿ, ಕಾಮಿಡಿ ಮತ್ತು ಒಂದೊಳ್ಳೆ ಸಂದೇಶಗಳಿವೆ. ಇದು ಸಿನಿಮಾ ನೋಡಲು ಬರುವ ಪ್ರೇಕ್ಷಕನನ್ನು ಕಥೆಗೆ ಹೊಂದಿಕೊಳ್ಳುವಂತೆ ಮಾಡಿವೆ ಮತ್ತು ಭರಪೂರ ಮನರಂಜನೆಯನ್ನು ನೀಡಿವೆ. ಈ ಚಿತ್ರಗಳೇ ಇಂದು ಪ್ರದೀಪ್​ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, 'ಲವ್​ ಇನ್ಶೂರೆನ್ಸ್ ಕಂಪನಿ' ಮೇಲೂ ಅದೇ ಭರವಸೆ, ನಿರೀಕ್ಷೆಗಳು ಮೂಡುವಂತೆ ಮಾಡಿದೆ. ಪದೇ ಪದೇ ಹಲವಾರು ಬಾರಿ ಮುಂದೂಡಿಕೆ ಆಗಿರುವ ಎಲ್​ಐಕೆ ರಿಲೀಸ್​, ಈಗ ಏ.10ರಂದು ತೆರೆಗೆ ಬರಲಿದ್ದು, ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಹಿಟ್​ ಸಾಲಿಗೆ ಸೇರುತ್ತದೆಯೋ, ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಅಷ್ಟಕ್ಕೂ ಯಾರು ಈ ಪ್ರದೀಪ್​ ರಂಗನಾಥನ್​?

ಮೂಲತಃ ತಮಿಳುನಾಡಿನವರೇ ಆದ ಪ್ರದೀಪ್ ರಂಗನಾಥನ್, ಚೆನ್ನೈನಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ. ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಅವರು, ನಟ, ಬರಹಗಾರ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಟ ಜಯಂ ರವಿ ಮತ್ತು ಕಾಜಲ್ ಅಗರ್ವಾಲ್ ನಟಿಸಿದ 2019ರ ಸೂಪರ್​ಹಿಟ್ ಚಿತ್ರ 'ಕೋಮಲಿ' ಮೂಲಕ ಮೊದಲು ಗಮನ ಸೆಳೆದ ಪ್ರದೀಪ್​, ಆ ನಂತರ ಪೂರ್ಣ ಪ್ರಮಾಣದಲ್ಲಿ ಸ್ಟಾರ್​ ಹೀರೋ ಆಗಿ ಮಿಂಚಿದರು.
2021ರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರಿಗಾಗಿ ಸೈಮಾ ಪ್ರಶಸ್ತಿಯನ್ನು ಗೆದ್ದ ಪ್ರದೀಪ್ ರಂಗನಾಥನ್​, ಚೆನ್ನೈನ ಶಿವಸುಬ್ರಮಣ್ಯ ನಾಡರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ್ದಾರೆ. ಸಿನಿಮಾ ನಿರ್ಮಾಣದ ಮೇಲಿನ ಅವರ ಉತ್ಸಾಹ ಕಿರುಚಿತ್ರಗಳಿಂದ ಆರಂಭವಾಗಿ ಇಂದು ಬಹುನಿರೀಕ್ಷಿತ ಚಿತ್ರಗಳ ಹಂತಕ್ಕೆ ಬಂದು ನಿಂತಿದೆ. 'ವಾಟ್ಸಾಪ್ ಕಾದಲ್', 'ಕಾಲೇಜ್ ಡೈರೀಸ್' ಮತ್ತು 'ಟಿವಿ ಕಾದೈ'ನಂತಹ ಸ್ವಂತ ಪ್ರಾಜೆಕ್ಟ್​ಗಳೇ ಇಂದು ಅವರ ಸಿನಿವೃತ್ತಿಗೆ ದೊಡ್ಡ ಅಡಿಪಾಯವನ್ನು ಹಾಕಿಕೊಟ್ಟಿದೆ,(ಏಜೆನ್ಸೀಸ್).