ನ್ಯೂಜಿಲೆಂಡ್​ ಆಟಗಾರ ಆದಿತ್ಯ ಅಶೋಕ್​ 
ಕಾಲಿವುಡ್

ಯಾರು ಈ ಆದಿತ್ಯ ಅಶೋಕ್​? ಕಿವೀಸ್​​ ಪರ ಆಡ್ತಿರುವ ಈತನ ಕೈಯಲ್ಲಿ ರಜಿನಿ ಚಿತ್ರದ ಡೈಲಾಗ್​! ಏನಿದು ಕನೆಕ್ಷನ್​?

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ
  • ಕಿವೀಸ್​ ತಂಡದಲ್ಲಿ ಯುವ ಆಟಗಾರ ಆದಿತ್ಯ ಅಶೋಕ್
  • 4ನೇ ವಯಸ್ಸಿನವರೆಗೆ ಭಾರತದಲ್ಲಿ ವಾಸವಿದ್ದ ಆದಿತ್ಯ
  • ಆತನ ಕೈಯಲ್ಲಿದೆ ತಮಿಳು ಚಿತ್ರದ ಡೈಲಾಗ್​
ಗುಜರಾತ್​: ಇಂದು (ಜ.11) ವಡೋದರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ ಮೊದಲ ಏಕದಿನ ಸರಣಿ ಪಂದ್ಯದಲ್ಲಿ ಕಿವೀಸ್​ ತಂಡದಲ್ಲಿರುವ ಯುವ ಲೆಗ್-ಸ್ಪಿನ್ನರ್ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅಷ್ಟಕ್ಕೂ ಯಾರು ಈ ಯುವಕ? ಈತನಿಗೂ ಭಾರತಕ್ಕೂ ಏನು ಸಂಬಂಧ? ಎಂಬ ಒಂದಷ್ಟು ಪ್ರಶ್ನೆಗಳು ಸದ್ಯ ಕ್ರಿಕೆಟ್​ ಪ್ರಿಯರಲ್ಲಿ ಕಾಡುತ್ತಿದೆ. ಅದಕ್ಕೆ ಉತ್ತರ ಹೀಗಿದೆ ನೋಡಿ. 
ಭಾರತೀಯ ಮೂಲದ ಆದಿತ್ಯ, ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಆದಿತ್ಯ ಅಶೋಕ್ ನಾಲ್ಕನೇ ವಯಸ್ಸಿನವರೆಗೆ ಭಾರತದಲ್ಲಿಯೇ ವಾಸವಿದ್ದರು. ತದನಂತರ, ಅವರ ಪೋಷಕರು ಉದ್ಯೋಗದ ನಿಮಿತ್ತ ನ್ಯೂಜಿಲೆಂಡ್​ನ ಆಕ್ಲೆಂಡ್‌ಗೆ ತೆರಳಿದರು. ಅಲ್ಲಿಂದ ನ್ಯೂಜಿಲೆಂಡ್​ನಲ್ಲೇ ತನ್ನ ಕ್ರಿಕೆಟ್​ ಪಯಣ ಆರಂಭಿಸಿದ ಆದಿತ್ಯ, ಆಕ್ಲೆಂಡ್ ದೇಶೀಯ ಕ್ರಿಕೆಟ್​ನಲ್ಲಿ ತಮ್ಮ ಹೆಸರನ್ನು ಸ್ಥಾಪಿಸಿಕೊಂಡರು.
2020ರ ಅಂಡರ್ 19 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ ಅವರು, ಡಿಸೆಂಬರ್ 2021ರಲ್ಲಿ ಆಕ್ಲೆಂಡ್ ಪರ ತಮ್ಮ ಮೊದಲ ವೃತ್ತಿಪರ ಟಿ20 ಪಂದ್ಯವನ್ನಾಡಿದರು. ಮೂರು ಸ್ವರೂಪಗಳಲ್ಲಿಯೂ ನಿಯಮಿತ ಆಟಗಾರರಾಗಿರುವ ಆದಿತ್ಯರನ್ನು, 2022-23ರ ವರ್ಷದಲ್ಲಿ ನ್ಯೂಜಿಲೆಂಡ್‌ನ ವರ್ಷದ ಯುವ ಕ್ರಿಕೆಟಿಗ ಎಂದು ಹೆಸರಿಸಲಾಯಿತು.

ಆದಿತ್ಯಗೂ ರಜನಿ ಚಿತ್ರಕ್ಕೂ ಏನು ಸಂಬಂಧ?

ಆದಿತ್ಯ ಅಶೋಕ್ ದಕ್ಷಿಣ ಭಾರತದ ಸೂಪರ್‌ಸ್ಟಾರ್, ತಮಿಳಿನ 'ತಲೈವಾ' ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ತಮ್ಮ ತೋಳಿನ ಮೇಲೆ "ಎನ್ ವಾಲಿ ಥಾನಿ ವಾಲಿ" (ನನ್ನ ಹಾದಿಯೇ ವಿಶಿಷ್ಟ) ಎಂಬ ತಮಿಳು ಅರ್ಥದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಷ್ಟಕ್ಕೂ, ಇದು ರಜಿನಿ ಅಭಿನಯದ ಸೂಪರ್​ಹಿಟ್​ 'ಪಡಯಪ್ಪ' ಚಿತ್ರದ ಫೇಮಸ್​ ಡೈಲಾಗ್​ ಆಗಿದೆ.

ಅಜ್ಜನೊಂದಿಗೆ ಕಂಡ ಕೊನೆಯ ಸಿನಿಮಾ

ಈ ಚಿತ್ರವು ಅಶೋಕ್ ಅವರ ಜೀವನದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಎನ್ನಲಾಗಿದೆ. ಕಾರಣ, ತಮ್ಮ ಅಜ್ಜನೊಂದಿಗೆ ವೀಕ್ಷಿಸಿದ ಕೊನೆಯ ಸಿನಿಮಾ ರಜನಿ ಅವರ ಚಿತ್ರವಂತೆ. ಅಶೋಕ್, 2025ರಲ್ಲಿ ಐಪಿಎಲ್​ನ ಬಲಿಷ್ಠ ತಂಡ ಎಂದೇ ಕರೆಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ಹಲವು ವಾರಗಳ ಕಾಲ ತರಬೇತಿ ಪಡೆದಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್). 

ಏಕದಿನ ಸರಣಿಗೆ ಭಾರತ ತಂಡ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ 

ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಜಕಾರಿ ಫೌಲ್ಕ್ಸ್, ಕ್ರಿಶ್ಚಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್