ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು! Actor Vijay  
ಕಾಲಿವುಡ್

ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು: ಡಿವೋರ್ಸ್​ ಕೋರಿ ಕೋರ್ಟ್​ ಮೆಟ್ಟಿಲೇರಿದ ಪತ್ನಿ ಸಂಗೀತಾ​, ಏಪ್ರಿಲ್​ 20ಕ್ಕೆ ವಿಚಾರಣೆ! Actor Vijay

ಪ್ರಮುಖ ಮುಖ್ಯಾಂಶಗಳು

  • ತಮಿಳು ಸಿನಿಮಾ ರಂಗ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ
  • ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ನಟ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡಿದೆ
  • ವಿಜಯ್​ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ
Actor Vijay : ತಮಿಳು ಸಿನಿಮಾ ರಂಗ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ತಮಿಳಿಗ ವೆಟ್ರಿ ಕಳಗಂ ( TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಜಯ್​ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಟ ವಿಜಯ್​ ಅವರು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಪತ್ನಿ ಸಂಗೀತಾ ಡಿವೋರ್ಟ್​ ಅರ್ಜಿ ಸಲ್ಲಿಸಿದ್ದಾರೆ ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡುತ್ತಿವೆ. ವಿಜಯ್​ ಮತ್ತು ಪತ್ನಿ ಸಂಗೀತಾ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ.
ಫೆಬ್ರವರಿ 24 ರಂದು ಸಲ್ಲಿಸಲಾದ ಡಿವೋರ್ಸ್​ ಅರ್ಜಿಯು ಏಪ್ರಿಲ್ 20 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಪ್ರಕರಣದ ವಿಚಾರಣೆಗೆ ವಿಜಯ್ ಖುದ್ದಾಗಿ ಹಾಜರಾಗಬೇಕೆಂದು ಚೆಂಗಲ್ಪಟ್ಟು ನ್ಯಾಯಾಲಯ ಆದೇಶಿಸಿದೆ.

ಜ್ಯೋತಿಷಿ ಮಾತು ನಿಜವಾಗುತ್ತಾ?

ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ಖ್ಯಾತ ಪತ್ರಕರ್ತ ಶಂಕರ್ ಅವರು ವಿಜಯ್ ಅವರ ರಾಜಕೀಯ ಜೀವನ ಮತ್ತು ಅವರ ರಹಸ್ಯಗಳ ಬಗ್ಗೆ ಮಾತನಾಡಿದ್ದರು. ಜ್ಯೋತಿಷಿಯೊಬ್ಬರು ವಿಜಯ್ ಅವರು ತಮ್ಮ ಪತ್ನಿಯಿಂದ ಅಂತರ ಕಾಯ್ದುಕೊಂಡರೆ ಅಧಿಕಾರ ಸಿಗುತ್ತದೆ ಎಂದಿದ್ದಾರೆ. ಕಡಲೂರು ಜ್ಯೋತಿಷಿಯ ಭವಿಷ್ಯವಾಣಿಯಂತೆ ವಿಜಯ್ ನಡೆಯುತ್ತಿದ್ದಾರೆ ಎಂದಿದ್ದರು. ಇದೀಗ ಡಿವೋರ್ಸ್​ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು ಜ್ಯೋತಿಷಿ ಮಾತು ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ನಟ ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ಅವರು 1999, ಆಗಸ್ಟ್ 25 ರಂದು ವಿವಾಹವಾದರು. ಸಂಗೀತಾ ಅವರು ಮೂಲತಃ ಶ್ರೀಲಂಕಾ ಮೂಲದ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದು, ಲಂಡನ್‌ನಲ್ಲಿ ನೆಲೆಸಿದ್ದರು. ವಿಜಯ್ ಅವರ ದೊಡ್ಡ ಅಭಿಮಾನಿಯಾಗಿದ್ದ ಸಂಗೀತಾ, 1996ರಲ್ಲಿ ಚೆನ್ನೈಗೆ ಬಂದಿದ್ದಾಗ ವಿಜಯ್ ಅವರನ್ನು ಭೇಟಿಯಾಗಿ ಅವರ ನಟನೆಯನ್ನು ಮೆಚ್ಚಿ ಶುಭ ಕೋರಿದ್ದರು. ಈ ಪರಿಚಯವು ನಂತರ ಪ್ರೇಮಕ್ಕೆ ತಿರುಗಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಜೇಸನ್ ಸಂಜಯ್ ಎಂಬ ಮಗ ಮತ್ತು ದಿವ್ಯಾ ಸಾಶಾ ಎಂಬ ಮಗಳಿದ್ದಾಳೆ.

ನಟಿ ತ್ರಿಷಾ ಜತೆ ತಳುಕು

ನಟ ವಿಜಯ್ ಅವರ ರಾಜಕೀಯ ಪ್ರವೇಶದ ಸಂದರ್ಭದಲ್ಲಿ, ನಟಿ ತ್ರಿಷಾ ಅವರ ಹೆಸರನ್ನು ಎಳೆದು ತಂದ ವಿಷಯವು ಇತ್ತೀಚೆಗೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ತಮಿಳುನಾಡು ಬಿಜೆಪಿ ಘಟಕದ ನಾಯಕ ನೈನಾರ್ ನಾಗೇಂದ್ರನ್ ಅವರು ಕೆಲವು ದಿನಗಳ ಹಿಂದೆ ವಿಜಯ್ ಅವರ ರಾಜಕೀಯ ಅನುಭವವನ್ನು ಟೀಕಿಸುವಾಗ, ವಿಜಯ್ ಮೊದಲು "ತ್ರಿಷಾ ಅವರ ಮನೆಯಿಂದ ಹೊರಗೆ ಬರಲಿ" ಎಂದು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ತ್ರಿಷಾ, "ಅಗೌರವವನ್ನು ಯಾವಾಗಲೂ ಪ್ರಶ್ನಿಸಲೇಬೇಕು" ಎಂದು ಹೇಳುತ್ತಾ, ರಾಜಕೀಯ ಲಾಭಕ್ಕಾಗಿ ಮಹಿಳೆಯರ ವೈಯಕ್ತಿಕ ಜೀವನವನ್ನು ಬಳಸಿಕೊಳ್ಳುವುದನ್ನು ಖಂಡಿಸಿದರು. ನಂತರ ವಿವಾದ ತಾರಕಕ್ಕೇರಿದಾಗ ನೈನಾರ್ ನಾಗೇಂದ್ರನ್ ಅವರು ತಮ್ಮ ಮಾತಿನ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದರು. ತ್ರಿಷಾ ಮತ್ತು ವಿಜಯ್​ ನಡುವೆ ಲವ್​ ಅಫೇರ್​ ಇದೆ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ.
ಅಂದಹಾಗೆ ನಟ ವಿಜಯ್ ಅವರು 2024, ಫೆಬ್ರವರಿ 2ರಂದು ತಮ್ಮ ಹೊಸ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ ಅನ್ನು ಘೋಷಣೆ ಮಾಡಿದರು. ಇದಾದ 5 ತಿಂಗಳ ನಂತರ ಆಗಸ್ಟ್​ 22ರಂದು ಚೆನ್ನೈನಲ್ಲಿರುವ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜ ಮತ್ತು ಗೀತೆಯನ್ನು ಅನಾವರಣಗೊಳಿಸಿದರು. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ವಿಜಯ್​ ಘೋಷಣೆ ಮಾಡಿದ್ದಾರೆ, (ಏಜೆನ್ಸೀಸ್​).