Vijay Sethupathi: ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಕಥಾಹಂದರವಿರಲಿ, ಎಂತಹ ಪಾತ್ರವಿರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುವ ಸೇತುಪತಿ, ತಮ್ಮ ಅದ್ಭುತ ನಟನೆಯಿಂದ ಪ್ರತಿಬಾರಿ ನೋಡುಗರ ಮನಗೆಲ್ಲುತ್ತಾರೆ.
ಸರಳ ಅಭಿನಯ, ಪಾತ್ರ ಹಾಗೂ ಕಥೆಯ ಆಯ್ಕೆಯಲ್ಲೇ ಮೊದಲ ಗೆಲುವು ನೋಡುವ ವಿಜಯ್, ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಖುಷಿ, ಪ್ರಶಂಸೆಗಳನ್ನು ಪಡೆಯುವ ಮುಖೇನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ. ಈ ವಿಷಯದಲ್ಲಿ ಅವರು ಸದಾ ಮುಂಚೂಣಿ. ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡ ಅವರು, ತಮ್ಮ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ 'ಮಹಾರಾಜ' ಚಿತ್ರದ ಸೀಕ್ವೆಲ್ ಬಗ್ಗೆ ಸುಳಿವು ನೀಡಿದರು.
'ಮಹಾರಾಜ 2' ಶೀಘ್ರವೇ...
ತಮಿಳಿನಲ್ಲಿ ತಮ್ಮ 50ನೇ ಚಿತ್ರವಾದ ಮಹಾರಾಜ ಚಿತ್ರಮಂದಿರ ಮತ್ತು ಒಟಿಟಿ ಎರಡರಲ್ಲೂ ಭಾರೀ ಸದ್ದು ಮಾಡಿತು. ಈ ಚಿತ್ರದ ಕಥೆ ಮತ್ತು ಅದರಲ್ಲಿನ ಪಾತ್ರಗಳು ಪ್ರೇಕ್ಷಕರಿಂದ ಸೈಎನಿಸಿಕೊಂಡಿತು. ಇದು ಒಂದೊಳ್ಳೆ ಕಥೆಯನ್ನು ಜನರಿಗೆ ನೀಡಿದಂತೆ ಸಿನಿಮಾ ಎಂಬ ಹೆಗ್ಗಳಿಕೆಗೂ ಚಿತ್ರತಂಡ ಮೆಚ್ಚುಗೆ ಪಡೆಯಿತು. ಸಮಾಜಕ್ಕೆ ಇಂತಹ ಕೊಡುಗೆ ನೀಡುವ ಸಿನಿಮಾಗಳು ಇನ್ನಷ್ಟು ಹೆಚ್ಚಾಗಬೇಕು ಎಂಬ ಹಲವಾರು ಅಭಿಪ್ರಾಯ, ಅನಿಸಿಕೆಗಳೇ ಇದೀಗ ಎರಡನೇ ಭಾಗ ಮಾಡಲು ಪ್ರೇರೆಪಿಸಿರುವಂತೆ ಕಂಡುಬಂದಿದೆ.
ಒಂದೊಳ್ಳೆ ಕಥೆ
'ಮಹಾರಾಜ' ಸೀಕ್ವೆಲ್ನಲ್ಲಿ ವಿಜಯ್ ಸೇತುಪತಿ ಅವರೇ ನಟಿಸಬೇಕು ಎಂದು ಆಸೆ ಪಟ್ಟಿರುವ ನಿರ್ದೇಶಕ ನಿಥಿಲನ್ ಸಾಮಿನಾಥನ್, ಇದಕ್ಕೋಸ್ಕರ ಸ್ಟಾರ್ ನಟನಿಗೆ ಅದ್ಭುತ ಕಥೆಯನ್ನು ಹೆಣೆದಿದ್ದಾಗಿ ತಿಳಿಸಿದ್ದಾರೆ. ವಿಜಯ್ ಸೇತುಪತಿ ಸ್ವತಃ ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತನಾಡಿ, ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ನಿರ್ದೇಶಕರು ಹೇಳಿದ ಸಾಲುಗಳು ನನಗೆ ಇಷ್ಟವಾಗಿದೆ ಮತ್ತು ಶೀಘ್ರದಲ್ಲೇ ಪೂರ್ಣ ಕಥೆಯನ್ನು ಕೇಳಲು ನಾನು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಚೀನಾ ಮತ್ತು ಜಪಾನ್...
ಜೂನ್ 14, 2024ರಂದು ಕೇವಲ 20 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ಈ ಚಿತ್ರವು, ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು 200 ಕೋಟಿ ರೂ.ಗೂ ಅಧಿಕ ಎಂದು ಸಿನಿ ಮೂಲಗಳು ತಿಳಿಸಿವೆ. ಅಲ್ಲಿಗೆ, ಬಂಡವಾಳಕ್ಕಿಂತ ದುಪ್ಪಟ್ಟಿನ ಲಾಭವೇ ಸಿಕ್ಕಿದ್ದು, ನಿರ್ಮಾಪಕರ ಜೇಬು ನಿರೀಕ್ಷೆಯಂತ ತುಂಬಿತು. ವರದಿಗಳ ಪ್ರಕಾರ, 'ಮಹಾರಾಜ' ಭಾರತದಲ್ಲಿ ಮಾತ್ರವಲ್ಲ, ಚೀನಾ ಮತ್ತು ಜಪಾನ್‌ನಂತಹ ದೇಶಗಳಲ್ಲಿಯೂ ಬಹಳ ಜನಪ್ರಿಯತೆ ಹಾಗೂ ವೀಕ್ಷಣೆ ಪಡೆದುಕೊಂಡಿತು. ಸೀಕ್ವೆಲ್ನಲ್ಲಿ ಯಾರೆಲ್ಲ ನಟಿಸಲಿದ್ದಾರೆ? ಚಿತ್ರೀಕರಣ ಯಾವಾಗಿನಿಂದ ಶುರು ಎಂಬುದರ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ,(ಏಜೆನ್ಸೀಸ್).