ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ
- ವಿಜಯ್ ಅವರ ಕೊನೇ ಚಿತ್ರ ಜನ ನಾಯಗನ್ ರಿಲೀಸ್ಗೆ ಸಂಕಷ್ಟ
- ಇತ್ತೀಚಿನ ಬೆಳವಣಿಗೆಗಳನ್ನು ಕಂಡ ಮೇಲೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲುವ ಭೀತಿ
- ಚಿತ್ರದ ನಿರ್ಮಾಪಕರಿಗೆ ಇನ್ನೊಂದು ಸಿನಿಮಾ ಮಾಡಿಕೊಡುವ ಭರವಸೆ ಕೊಟ್ಟ ನಟ
ಚೆನ್ನೈ: ಕಾಲಿವುಡ್ ಸ್ಟಾರ್ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ರಿಲೀಸ್ಗೆ ಸದ್ಯ ಸೆನ್ಸಾರ್ ಮಂಡಳಿ ತಂದಿಟ್ಟ ಸಂಕಷ್ಟ ಇನ್ನೂ ಬಗೆಹರಿದಿಲ್ಲ. ಕೋರ್ಟ್ ಮೆಟ್ಟಿಲೇರಿದ ಚಿತ್ರತಂಡಕ್ಕೆ ಅಂದುಕೊಂಡ ದಿನದಂದೇ ಬಿಡುಗಡೆ ಭಾಗ್ಯ ನೀಡದಂತೆ ಮಾಡಿದ್ದು ಸಿಬಿಎಫ್ಸಿ. ಜ.09ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ವಿಜಯ್ ಚಿತ್ರ, ಇಂದಿಗೂ ರಿಲೀಸ್ ಆಗದಿರುವುದು ಹಲವು ಕಾಲಿವುಡ್ ಚಿತ್ರಗಳಿಗೆ ಭಾರೀ ಸಂಕಷ್ಟ ತಂದೊಡ್ಡಿದೆ.
ವಿಜಯ್ ಅವರ ಜನನಾಯಗನ್ ಚಿತ್ರದ ರಿಲೀಸ್ ಯಾವಾಗ ಎಂಬ ಸ್ಪಷ್ಟ ಮಾಹಿತಿ ತಮಿಳು ಚಿತ್ರರಂಗಕ್ಕೆ ಇನ್ನೂ ಲಭ್ಯವಾಗಿಲ್ಲ. ಇದು ರಿಲೀಸ್ಗೆ ಎದುರುನೋಡುತ್ತಿರುವ ನಟನ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳಲ್ಲಿ ದೊಡ್ಡ ಗೊಂದಲ ಸೃಷ್ಟಿಸಿದೆ. ಜನವರಿಯಿಂದ ಇಲ್ಲಿಯವರೆಗೂ ಬಿಡುಗಡೆ ಯಾವಾಗ ಎಂಬುದೇ ಇನ್ನೂ ತಿಳಿಯದ ನಿರ್ಮಾಪಕರಿಗೆ ಸೋಲು ಸಿಕ್ಕರೆ ಏನು ಗತಿ? ಎಂಬ ತಲೆಬಿಸಿ ಕಾಡತೊಡಗಿದೆ. ಅದಕ್ಕೀಗ, ವಿಜಯ್ ಮತ್ತೊಂದು ಸಿನಿಮಾದಲ್ಲಿ ನಟಿಸುವ ಮೂಲಕ ನಿರ್ಮಾಪಕರಿಗೆ ಹಣವನ್ನು ಹಿಂತಿರುಗಿಸಲು ಮುಂದಾಗಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.
ಮೊದಲೇ ರಿಲೀಸ್ ಸಂಕಷ್ಟ ಅನುಭವಿಸುತ್ತಿರುವ ಜನ ನಾಯಗನ್ಗೆ ಇತ್ತೀಚೆಗಷ್ಟೇ ಚಿತ್ರದ ಬಹುಮುಖ್ಯ ದೃಶ್ಯಗಳ ಸೋರಿಕೆ ದೊಡ್ಡ ಹೊಡೆತ ನೀಡಿದೆ. ಈ ಎಲ್ಲ ಬೆಳವಣಿಗೆಗಳು, ಸಿನಿಮಾದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲಿದೆ ಎಂಬ ಭಯ ಅದಾಗಲೇ ನಿರ್ಮಾಪಕರಲ್ಲಿ ಕಾಡಲಾರಂಭಿಸಿದೆ. ಇದೇ ಕಾರಣಕ್ಕೋ, ಏನೋ ಚಿತ್ರದ ನಿರ್ಮಾಪಕರಿಗೆ ಇನ್ನೊಂದು ಚಿತ್ರ ಮಾಡಿಕೊಡುವ ಭರವಸೆಯನ್ನು ವಿಜಯ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ನಿರ್ಧಾರ ಜನ ನಾಯಗನ್ ಒಟ್ಟು ಗಳಿಕೆಯನ್ನು ನೋಡಿದ ಮೇಲೆ ಕೈಗೊಳ್ಳುವುದಾಗಿ ವಿಜಯ್ ಹೇಳಿದ್ದಾರೆ ಎನ್ನಲಾಗಿದೆ. ಚಿತ್ರದ ತಯಾರಕರು ಹೇಳಿರುವಂತೆ ಇದೇನಾದರೂ ನಿಜವಾದರೆ, ಅದರಲ್ಲೂ ನಟನ ಕೊನೆಯ ಚಿತ್ರ ಎನ್ನಲಾದ ಜನ ನಾಯಗನ್ ಬಾಕ್ಸ್ ಆಫೀಸ್ನಲ್ಲಿ ಸೋತರೆ, ಅದೇ ನಿರ್ಮಾಪಕರಿಗೆ ಇನ್ನೊಂದು ಸಿನಿಮಾ ಮಾಡಿಕೊಡುವುದು ವಿಜಯ್ ಅವರ ಉದ್ದೇಶವಾಗಿದೆ,(ಏಜೆನ್ಸೀಸ್).