ಸಂಗೀತಾ-ವಿಜಯ್​ (ಎಡ), ವಿಜಯ್ ಮತ್ತು ತ್ರಿಷಾ (ಬಲ) 
ಕಾಲಿವುಡ್

ಡಿವೋರ್ಸ್​ ಚರ್ಚೆಯ ಬೆನ್ನಲ್ಲೇ ತ್ರಿಷಾ ಜತೆ ವಿಜಯ್​ ಪ್ರತ್ಯಕ್ಷ! ಕೊನೆಗೂ ನಿಜವಾಯ್ತಾ ಆ ಮಾತುಗಳು?

ಚೆನ್ನೈ: ತಮಿಳು ಚಿತ್ರರಂಗದ​ ಸೂಪರ್​ ಸ್ಟಾರ್​ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ (Vijay-Thrisha) ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸುತ್ತಿದೆ. ಇವರಿಬ್ಬರ ಡಿವೋರ್ಸ್​ಗೆ ಮೂಲ ಕಾರಣವೇ ನಟಿ ತ್ರಿಷಾ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪೋಸ್ಟ್‌ಗಳು ಅಂತರ್ಜಾಲದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ. ಇಲ್ಲಿಯವರೆಗೂ ಇದ್ಯಾವುದಕ್ಕೂ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದ ಸ್ಟಾರ್​ ಜೋಡಿ, ಇದೀಗ ಮದುವೆ ಸಮಾರಂಭದಲ್ಲಿ ಒಟ್ಟಿಗೆ ಪ್ರತ್ಯಕ್ಷವಾಗಿರುವುದು ಸದ್ಯ ವದಂತಿಗಳೇ ಸತ್ಯ ಎಂಬುದನ್ನು ಒತ್ತಿ ಹೇಳುತ್ತಿವೆ. 

ಒಂದೇ ಕಾರಿನಲ್ಲಿ, ಜತೆಗೆ ಹೆಜ್ಜೆ

ವಿಜಯ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದೇ ತಡ ತ್ರಿಷಾ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈ ಹಿಂದೆಯೂ ಹಲವರು ಬಾರಿ ದಳಪತಿ ಹೆಸರಿನೊಂದಿಗೆ ಕೇಳಿಬಂದ ಸ್ಟಾರ್ ನಟಿಯ ಹೆಸರು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಸಾಕಷ್ಟು ಆರೋಪ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಅಂದಹಾಗೆ, ವಿಜಯ್​ ಮತ್ತು ತ್ರಿಷಾ ನಡುವೆ ಲವ್​ ಅಫೇರ್​ ಇದೆ ಅನ್ನೋ ಚರ್ಚೆ ಇಂದಿನದ್ದಲ್ಲ. ಮೊದಲಿನಿಂದಲೂ ಇಂಥದ್ದೊಂದು ಚರ್ಚೆ ನಡೆಯುತ್ತಾ ಬರುತ್ತಿದೆ. 
ಸಂಗೀತ ವಿಚ್ಛೇದನ ನೀಡಲು ತ್ರಿಷಾನೇ ಕಾರಣ ಎಂಬ ಆರೋಪಗಳ ಬೆನ್ನಲ್ಲೇ ಇದೀಗ ತ್ರಿಷಾ ಮತ್ತು ವಿಜಯ್​ ಮದುವೆ ಸಮಾರಂಭಕ್ಕೆ ಒಟ್ಟಿಗೆ ಕಾರಿನಲ್ಲಿ ಬಂದಿಳಿದಿದ್ದು, ಜೊತೆಯಲ್ಲೇ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇಷ್ಟೆಲ್ಲ ಬೆಂಕಿ ಹತ್ತಿ ಉರಿಯುತ್ತಿರುವ ಮಧ್ಯೆಯೇ ಅವರಿಬ್ಬರು ಜೊತೆಯಲ್ಲಿ ಪ್ರತ್ಯಕ್ಷವಾಗಿರುವುದು ಹರಿದಾಡುತ್ತಿರುವ ವಿಷಯಗಳು ಸತ್ಯ ಎಂಬುದನ್ನು ಸ್ಪಷ್ಟಪಡಿಸುತ್ತಿವೆ ಎಂದು ನೆಟ್ಟಿಗರು ಅಭಿಪ್ರಾಯಿಸುತ್ತಿದ್ದಾರೆ.  

ಮದುವೆ ಸಮಾರಂಭದಲ್ಲಿ ತ್ರಿಷಾ-ವಿಜಯ್ ಮಿಂಚಿಂಗ್​

ಇಬ್ಬರು ಜೊತೆಗೆ ನಿಂತು ತೆಗೆಸಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಊಹಾಪೋಹಗಳನ್ನು ಇನ್ನಷ್ಟು ಬಲಪಡಿಸುತ್ತಿದೆ. ತ್ರಿಷಾ ಅವರು ತಮಿಳು ಚಲನಚಿತ್ರೋದ್ಯಮದ ಪ್ರಮುಖ ನಟಿ. ವಯಸ್ಸು 40 ದಾಟಿದರು ಕೂಡ ಇಂದಿಗೂ ಸ್ಟಾರ್​ ನಾಯಕಿಯ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ತೆರೆಯ ಮೇಲೆ ವಿಜಯ್ ಮತ್ತು ತ್ರಿಷಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್​ ಆಗಿದೆ. ಕಳೆದ 20 ವರ್ಷಗಳಲ್ಲಿ ಅವರಿಬ್ಬರು 5 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿರುವುದು ಗಮನಾರ್ಹ.
ಇವುಗಳಲ್ಲಿ, 'ಗಿಲ್ಲಿ', 'ತಿರುಪಚ್ಚಿ' ಮತ್ತು 'ಲಿಯೋ' ಸಿನಿಮಾಗಳು ಬ್ಲಾಕ್​ಬಸ್ಟರ್​ ಹಿಟ್ ಆಗಿವೆ. ವಿಜಯ್​-ತ್ರಿಷಾ ಒಳ್ಳೆಯ ಜೋಡಿ ಎಂದು ಒಂದು ಕಾಲದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅವರಿಬ್ಬರು ಜೊತೆಯಾಗಿ ನಟಿಸಿದ ಸಿನಿಮಾಗಳು ಸಾರ್ವಜನಿಕವಾಗಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡವು. ಇದೀಗ ಅದೇ ಜನಪ್ರಿಯತೆ ಡಿವೋರ್ಸ್​ ವಿವಾದಕ್ಕೆ ತಳುಕು ಹಾಕಿಕೊಂಡಿದೆ. ಕೆಲವು ವರ್ಷಗಳ ಹಿಂದೆ, ವಿಜಯ್ ಮತ್ತು ತ್ರಿಷಾ ವಿದೇಶ ಪ್ರವಾಸ ಮಾಡುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆ ಸಮಯದಲ್ಲೂ ಇಬ್ಬರ ಸಂಬಂಧದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗಿದ್ದವು.

ಉರಿಯುವ ಬೆಂಕಿಗೆ ತುಪ್ಪ

ಇದಲ್ಲದೆ, ಮಾಸ್ಟರ್ ಚಿತ್ರದ ಆಡಿಯೋ ಬಿಡುಗಡೆ ನಂತರ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಜಯ್ ಜತೆಗೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದ ಕಾರಣ, ಸಂಗೀತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ನಟಿ ತ್ರಿಷಾ ಅವರೇ ಇದಕ್ಕೆಲ್ಲ ಕಾರಣ ಎಂಬ ಊಹಾಪೋಹಗಳು ಹಬ್ಬಿದ್ದವು. ಒಟ್ಟಾರೆ, ವಿಜಯ್​ ಮತ್ತು ಸಂಗೀತಾ ಡಿವೋರ್ಸ್​ ಪ್ರಕರಣದಲ್ಲಿ ತ್ರಿಷಾ ಹೆಸರು ಭಾರಿ ಚರ್ಚೆಯಾಗುತ್ತಿದೆ. ಈ ಸನ್ನಿವೇಶದಲ್ಲಿ ನೆಟ್ಟಿಗರು ನಟಿ ತ್ರಿಶಾ ಮಾಡಿದ ಹಳೆಯ ಪೋಸ್ಟ್‌ಗಳನ್ನು ಕೆದಕಿ ಮರುಪೋಸ್ಟ್ ಮಾಡುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸ,(ಏಜೆನ್ಸೀಸ್).