Trisha Krishnan ಚಿತ್ರ Instagram
Trisha Krishnan: ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಅವರು ಇತ್ತೀಚೆಗೆ (ಮೇ 4) ತಮ್ಮ 43ನೇ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಅವರ ಜನ್ಮದಿನವು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರ ಸಡಗರಕ್ಕೆ ಕಾರಣವಾಗಿತ್ತು. ವಿಶೇಷವೆಂದರೆ, ತಮ್ಮ ದಿನವನ್ನು ಅತ್ಯಂತ ಶಾಂತಿಯುತವಾಗಿ ಆರಂಭಿಸಿದ ನಟಿ, ಈಗ ತಮಗೆ ಹಾರೈಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳನ್ನು ಅರ್ಪಿಸುವ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ನಲ್ಲೇನಿದೆ?
ಸಾಮಾಜಿಕ ಜಾಲತಾಣದಲ್ಲಿ ಹರಿದುಬಂದ ಅಭಿನಂದನೆಗಳ ಮಹಾಪೂರವನ್ನು ಕಂಡು ಭಾವುಕರಾದ ತ್ರಿಶಾ, ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು ಈ ಅಗಾಧ ಪ್ರೀತಿಗೆ ನಿಜವಾಗಿಯೂ ವಿನಮ್ರ ಮತ್ತು ಕೃತಜ್ಞತೆಗಳು ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೂ ನಡೆದಿದ್ದೇನು?
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ದ್ರಾವಿಡ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆದಿದೆ. ವರದಿಗಳ ಪ್ರಕಾರ, ಒಟ್ಟು 234 ಕ್ಷೇತ್ರಗಳ ಪೈಕಿ ವಿಜಯ್ ಪಕ್ಷ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿಜಯ್ ತಾವು ಸ್ಪರ್ಧಿಸಿರುವ ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಐತಿಹಾಸಿಕ ಗೆಲುವಿನ ಸಂಭ್ರಮದ ನಡುವೆಯೇ, ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ನಟಿ ತ್ರಿಶಾ ಕೃಷ್ಣನ್ ತಿರುಪತಿಯಿಂದ ನೇರವಾಗಿ ಚೆನ್ನೈನ ನೀಲಂಕರೈನಲ್ಲಿರುವ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದು ಭಾರೀ ಕುತೂಹಲ ಮೂಡಿಸಿತ್ತು. ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ತ್ರಿಶಾ ವಿಜಯ್ ಅವರಿಗೆ ಶುಭಾಶಯ ಕೋರಲು ಆಗಮಿಸಿದ್ದಾರೆ ಎನ್ನಲಾಗಿದೆ. ವಿಜಯ್ ನಿವಾಸದ ಸುತ್ತ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ತ್ರಿಶಾ ಭೇಟಿಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು.
ರಾಜಕೀಯ ಫಲಿತಾಂಶದಂದೇ ತ್ರಿಶಾ ತಿರುಪತಿಗೆ ಭೇಟಿ!
ವಿಶೇಷವೆಂದರೆ, ತ್ರಿಶಾ ಅವರ ಜನ್ಮದಿನ ಮತ್ತು ತಿರುಪತಿ ಭೇಟಿಯು ದಳಪತಿ ವಿಜಯ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗುವ ದಿನದಂದೇ ನಡೆದಿರುವುದರಿಂದ ನಟಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿತ್ತು. ಆದಾಗ್ಯೂ, ವಿಜಯ್ ಮೊದಲ ಬಾರಿಗೆ ಟಿವಿಕೆ ಪಕ್ಷದ ಮೂಲಕ ಚುನಾವಣಾ ಕಣಕ್ಕಿಳಿದಿದ್ದು, ಇಡೀ ರಾಜ್ಯದ ಕಣ್ಣು ಈ ಫಲಿತಾಂಶದ ಮೇಲಿತ್ತು.
ವಿಜಯ್ ಮತ್ತು ತ್ರಿಷಾ ಅವರ ಚಲನಚಿತ್ರಗಳು
ವಿಜಯ್ ಮತ್ತು ತ್ರಿಶಾ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಗಿಲ್ಲಿ, ತಿರುಪಾಚಿ, ಆಥಿ, ಕುರುವಿ ಮತ್ತು ಇತ್ತೀಚೆಗೆ ಲಿಯೋ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಅವರು ಪರದೆಯನ್ನು ಹಂಚಿಕೊಂಡಿದ್ದಾರೆ (ಏಜೆನ್ಸೀಸ್).