ತಮಿಳು ನಟ ವಿಜಯ್​, ಯಶ್​ ಅಭಿನಯದ 'ಟಾಕ್ಸಿಕ್' ​  
ಕಾಲಿವುಡ್

ಇನ್ನೂ ತಡವಾದ್ರೆ ಕಷ್ಟ... ದಳಪತಿ ವಿಜಯ್​ ಕೊನೆ ಚಿತ್ರಕ್ಕೆ ಉಳಿದಿರುವುದು ಇದೊಂದೇ ದಾರಿ | Jana Nayagan

ಪ್ರಮುಖ ಮುಖ್ಯಾಂಶಗಳು

  • ತಮಿಳು ನಟ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನ ನಾಯಗನ್'
  • ಸೆನ್ಸಾರ್​ ಮಂಡಳಿಯ ಸಂಕಷ್ಟ ವಿಜಯ್ ಚಿತ್ರಕ್ಕೆ ಇನ್ನೂ ಸಿಗದ ರಿಲೀಸ್ ಭಾಗ್ಯ
  • ಪದೇ ಪದೇ ರಿಲೀಸ್​ ದಿನಾಂಕ ಮುಂದೂಡಿಕೆ, ಗೊಂದಲದಲ್ಲಿ ವಿಜಯ್ ಅಭಿಮಾನಿಗಳು
ಚೆನ್ನೈ: ಸ್ಟಾರ್​ ಹೀರೋಗಳ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ ಎಂದಾದರೆ, ಅದೇ ವಾರದಲ್ಲಿ ಇನ್ನೊಬ್ಬ ಸ್ಟಾರ್​ ನಟನ ಚಿತ್ರ ತೆರೆಗೆ ಬರುವುದು ಅಪರೂಪ. ಕೆಲವೇ ಕೆಲವು ನಿರ್ಮಾಪಕರು ಮಾತ್ರ ರಿಲೀಸ್​ ಕ್ಲ್ಯಾಶ್​ ಬಗ್ಗೆ ಹೆಚ್ಚು ಚಿಂತಿಸದೆ, ಧೈರ್ಯದಿಂದ ರಿಲೀಸ್​ಗೆ ಮುಂದಾಗುತ್ತಾರೆ. ಆದರೆ, ಹೊಸಬರ ತಂಡಗಳು ಮತ್ತು ಹೊಸ ನಟರ ಚಿತ್ರಗಳನ್ನು ಈ ಸಮಯದಲ್ಲಿ ಬಿಡುಗಡೆಗೊಳಿಸಲು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ಸಿನಿಮಾದ ದಿನಾಂಕವನ್ನು ಒಂದು ವಾರ ಹಿಂದೆ ಅಥವಾ ಮುಂದಕ್ಕೆ ಹಾಕಿಕೊಳ್ಳಲಾಗುತ್ತೆ. ಸದ್ಯ ಇದೇ ಪರಿಸ್ಥಿತಿ ತಮಿಳು ಚಿತ್ರರಂಗದ ಹಲವು ಚಿತ್ರಗಳಿಗೆ ಆಗುತ್ತಿವೆ. ಅದಕ್ಕೆ ಕಾರಣ, ಬಹುನಿರೀಕ್ಷಿತ 'ಜನನಾಯಗನ್'​​!

ಪದೇ ಪದೇ ಮುಂದೂಡಿಕೆ

ಕಾಲಿವುಡ್​ ಸ್ಟಾರ್​ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್'​ ರಿಲೀಸ್​ಗೆ ಸೆನ್ಸಾರ್​ ಮಂಡಳಿ ದೊಡ್ಡ ಸಂಕಷ್ಟ ತಂದಿಟ್ಟಿದೆ. ರಿಲೀಸ್​ ಆಗದೆ, ಪ್ರೇಕ್ಷಕರ ಎದುರು ಬರಲು ಕ್ಯೂನಲ್ಲಿ ನಿಂತಿರುವ ವಿಜಯ್​ ಚಿತ್ರಕ್ಕೆ ಇನ್ನೂ ಬಿಡುಗಡೆ ಕುರಿತಂತೆ ಸರಿಯಾದ ಸ್ಪಷ್ಟತೆ ಸಿಕ್ಕಿಲ್ಲ. ಸಿಬಿಎಫ್​ಸಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ ಚಿತ್ರತಂಡಕ್ಕೆ ರಿಲೀಸ್​ ಯಾವಾಗ ಎಂಬುದನ್ನೇ ಸೆನ್ಸಾರ್​ ಮಂಡಳಿ ಸ್ಪಷ್ಟಪಡಿಸುತ್ತಿಲ್ಲ. ಇದು ನಿರ್ಮಾಪಕರಿಗೆ ತಮ್ಮ ಚಿತ್ರವನ್ನು ಅಂದುಕೊಂಡಂತೆ ತೆರೆಗೆ ತರಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ವಿಜಯ್​ ತಂಡಕ್ಕೆ ಮಾತ್ರವಲ್ಲ, ಇನ್ನಿತರ ಚಿತ್ರಗಳ ಗೊಂದಲಕ್ಕೂ ಕಾರಣವಾಗಿದೆ.
ಈ ತಿಂಗಳು, ಮುಂದಿನ ತಿಂಗಳಲ್ಲಿ ವಿಜಯ್ ಕೊನೆ ಸಿನಿಮಾ ತೆರೆಗೆ ಬರಬಹುದು ಎಂದು ಸಿನಿಪ್ರಿಯರು ಮತ್ತು ದಳಪತಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಚಿತ್ರತಂಡ ಮಾತ್ರ ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ, ಸೆನ್ಸಾರ್​ ಮಂಡಳಿ ಚಿತ್ರತಂಡಕ್ಕೆ ನೀಡದ ರಿಲೀಸ್​ ಭಾಗ್ಯ. ಸಿಬಿಎಫ್​ಸಿ ನಡೆಯಿಂದ ಕುಗ್ಗಿರುವ 'ಜನ ನಾಯಗನ್'​ ತಯಾರಕರು, ಬ್ಯಾಕ್ ಟು ಬ್ಯಾಕ್​ ರಿಲೀಸ್​ ಡೇಟ್​ಗಳನ್ನು ಬದಲಿಸಿದ್ದರು. ಆದರೀಗ, ಏಪ್ರಿಲ್​ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ ಎನ್ನುವ ಮಾತು ಸಂಪೂರ್ಣ ಬದಲಾಗಿದೆ.

ಕ್ಲ್ಯಾಶ್​ ಆದ್ರೆ ಕಷ್ಟ!

ಬಿಡುಗಡೆಯಲ್ಲಿನ ವಿಳಂಬದಿಂದಾಗಿ ಚಿತ್ರದ ಒಟಿಟಿ ಡೀಲ್​ ಕೂಡ ರದ್ದಾಗುವ ಪರಿಸ್ಥಿತಿ ಎದುರಾಗಿದೆ ಎಂದು ವರದಿಯಾಗಿದೆ. ಚಿತ್ರದ ರಿಲೀಸ್​ ಅನ್ನು ವಿಜಯ್​ ಅವರ ಜನ್ಮದಿನ ಅಂದರೆ ಜೂನ್​ನಲ್ಲಿ ತೆರೆಗೆ ತರಲು ಚಿತ್ರತಂಡ ಚಿಂತಿಸಿದೆ. ಆದರೆ, ಆ ತಿಂಗಳಲ್ಲಿ ಹಲವಾರು ಸಿನಿಮಾಗಳು ಸಾಲುಗಟ್ಟಿ ನಿಂತಿರುವ ಹಿನ್ನೆಲೆ ಚಿತ್ರತಂಡ ಇದೀಗ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ರಿಲೀಸ್​ ಬಳಿಕವೇ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಕುರಿತಾಗಿ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).