- ಮಲೇಷ್ಯಾದಲ್ಲಿ ನಡೆದ ಜನನಾಯಗನ್ ಅದ್ಧೂರಿ ಆಡಿಯೋ ಲಾಂಚ್
- ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ
- ವೇದಿಕೆಯಲ್ಲಿ ಟಿವಿಕೆ ಎಂದು ಕೂಗಿದ ಫ್ಯಾನ್ಸ್ಗೆ ಬೇಡವೆಂದ ವಿಜಯ್
ತಮಿಳುನಾಡು: ನಿನ್ನೆ (ಡಿ.27) ತಮಿಳಿನ ಸ್ಟಾರ್ ನಟ, 'ಟಿವಿಕೆ' (ತಮಿಳಗ ವೆಟ್ರಿ ಕಳಗಮ್) ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್' ಆಡಿಯೋ ಲಾಂಚ್ ಅದ್ಧೂರಿಯಾಗಿ ಮಲೇಷ್ಯಾದ ಬುಕಿತ್ ಜೈಲ್ ಸ್ಟೇಡಿಯಂನಲ್ಲಿ ನಡೆಯಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ವಿಜಯ್ ಕೈಬಿಸಿ, ಧನ್ಯವಾದ ಅರ್ಪಿಸಿದ್ದು ವಿಶೇಷ.
ತಮಿಳು ಚಿತ್ರರಂಗಕ್ಕೆ ಹಲವು ಸೂಪರ್ಹಿಟ್ ಸಿನಿಮಾಗಳ ಕೊಡುಗೆ ನೀಡಿರುವ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ಇದು ಎಂಬ ಸಂಗತಿ ಹಲವರ ಬೇಸರಕ್ಕೆ ಕಾರಣವಾಯಿತು. ಈ ವಿಷಯವನ್ನು ಅರಿತ ಕಾಲಿವುಡ್ ನಿರ್ದೇಶಕರ ತಂಡ, ವೇದಿಕೆಯ ಮೇಲೆ ನಟನಿಗೆ ಪ್ರೀತಿಯ ಅಪ್ಪುಗೆ ನೀಡಿ, ಅಭಿಮಾನ ವ್ಯಕ್ತಪಡಿಸಿತು. ಈ ಎಲ್ಲ ನಿರ್ದೇಶಕರು ಅವರೊಂದಿಗೆ ಕೆಲಸ ಮಾಡಿದವರೇ ಆಗಿರುವುದು ಇನ್ನೊಂದು ವಿಶೇಷ.
ವೇದಿಕೆಗೆ ಬಂದ ವಿಜಯ್, ಸ್ಟೇಡಿಯಂ ಪೂರ ತುಂಬಿ ತುಳುಕುತ್ತಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಕೊನೆಯ ಸಿನಿಮಾ ಕುರಿತಂತೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದ ನಟ, ಫ್ಯಾನ್ಸ್ಗಳತ್ತ ಕೈಬೀಸಿ, ನಗೆ ಬೀರಿದರು. ಈ ವೇಳೆ ನಟನ ಟಿವಿಕೆ ಪಕ್ಷದ ಹೆಸರನ್ನು ಕೂಗಿದ ಅಭಿಮಾನಿ ಬಳಗಕ್ಕೆ, ನಗುತ್ತಲೇ ಇದು ಇಲ್ಲಿಗೆ ಸೂಕ್ತವಲ್ಲ, ಬೇಡ ಎಂದು ನಿಲ್ಲಿಸಲು ವಿಜಯ್ ತಲೆ ಅಲ್ಲಾಡಿಸುತ್ತಲೇ ಸಂದೇಶ ನೀಡಿದರು.
ಇದೊಂದು ಸಿನಿಮಾಗೆ ಸಿದ್ಧಪಡಿಸಿರುವ ವೇದಿಕೆಯೇ ಹೊರತು ರಾಜಕೀಯ ಕಾರ್ಯಕ್ರಮಕ್ಕಲ್ಲ ಎಂಬುದನ್ನು ಪರೋಕ್ಷವಾಗಿ ಫ್ಯಾನ್ಸ್ಗೆ ತಿಳಿಸಿದರು. ಅದ್ಧೂರಿಯಾಗಿ ನಡೆದ ಆಡಿಯೋ ಲಾಂಚ್ ಈವೆಂಟ್ನಲ್ಲಿ ನಟಿ ಪೂಜಾ ಹೆಗ್ಡೆ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ಸಾಹಿತಿ ವಿವೇಕ್, ಕೋರಿಯೋಗ್ರಫರ್ಗಳಾದ ಶೋಭಿ ಮತ್ತು ಶೇಖರ್ ಭಾಗಿಯಾಗಿದ್ದರು,(ಏಜೆನ್ಸೀಸ್)