ದಳಪತಿ ನಟ ವಿಜಯ್, ನಟಿ ಕಸ್ತೂರಿ ಶಂಕರ್
- ಜನ ನಾಯಗನ್ ಚಿತ್ರದ ಲೀಕ್ ದೃಶ್ಯಗಳ ಬಗ್ಗೆ ನಟಿ ಕಸ್ತೂರಿ ಶಂಕರ್ ಹೇಳಿಕೆ
- ಎಚ್ಡಿ ಪ್ರಿಂಟ್, ಅನ್ ಎಡಿಟೆಡ್ ದೃಶ್ಯಗಳನ್ನು ಹೊರಗಿನವರು ಲೀಕ್ ಮಾಡಿಲ್ಲ
- ಮೂರು ಗಂಟೆಗಳ ಪ್ರಚಾರಕ್ಕೆಂದು ರೂಪಿಸಿರುವ ಸಿನಿಮಾ ಇದು
Thalapathy Vijay: ಪ್ರಸ್ತುತ, ತಮಿಳುನಾಡು ಚುನಾವಣಾ ಕಣದಲ್ಲಿ ಸಖತ್ ಬಿಜಿಯಾಗಿರುವ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್, ಪ್ರಚಾರ ಕಾರ್ಯಗಳಲ್ಲಿ ನಿರಂತರವಾಗಿ ಓಡಾಡುತ್ತಿದ್ದಾರೆ. ದಾಂಪತ್ಯದಲ್ಲಿ ಬಿರುಕು, ರಾಜಕೀಯದಲ್ಲಿ ತೊಡಕು ಮತ್ತು ಬಹುನಿರೀಕ್ಷಿತ 'ಜನ ನಾಯಗನ್' ಚಿತ್ರದ ರಿಲೀಸ್ಗೆ ಅಡಚಣೆ. ಇದೆಲ್ಲದರ ನಡುವೆಯೂ ಚುನಾವಣಾ ಕಣದಲ್ಲಿರುವ ವಿಜಯ್ಗೆ ತಮ್ಮ ಬಹುನಿರೀಕ್ಷಿತ ಚಿತ್ರದ ದೃಶ್ಯಗಳು ಲೀಕ್ ಆಗಿರುವುದು ಸದ್ಯ ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಧ್ಯೆ, ನಟಿ ಕಸ್ತೂರಿ ಶಂಕರ್ ಆಡಿರುವ ಮಾತುಗಳು ನಟನ ಅಭಿಮಾನಿಗಳನ್ನು ಕೆರಳಿಸಿದೆ.
ಇಡೀ ಕಾಲಿವುಡ್ ಚಿತ್ರರಂಗವೇ ವಿಜಯ್ ಮತ್ತು ಚಿತ್ರತಂಡದ ಪರ ದನಿಗೂಡಿಸಿದ್ದು, ಇಂತಹ ಪೈರಸಿ ಕಾಟಕ್ಕೆ ನಾವೆಲ್ಲರೂ ಸೇರಿ ಫುಲ್ಸ್ಟಾಪ್ ಇಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದರು. ಮತ್ತೊಂದೆಡೆ, ಕಸ್ತೂರಿ ಶಂಕರ್ ಮಾತನಾಡಿ, ಇತ್ತೀಚೆಗೆ ಆನ್ಲೈನ್ನಲ್ಲಿ ಸೋರಿಕೆಯಾದ ವಿಜಯ್ ಚಿತ್ರದ ಒಂದಷ್ಟು ಸೀನ್ಗಳನ್ನು ನಾನೂ ವೀಕ್ಷಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಇದು ಮೂರು ಗಂಟೆಗಳ ಪ್ರಚಾರ ಸಿನಿಮಾ. ಎಚ್. ವಿನೋದ್ ನಿರ್ದೇಶಿಸಿರುವ ಈ ಚಿತ್ರವನ್ನು ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಬಲಪಡಿಸಲು ಸೂಕ್ಷ್ಮವಾಗಿ ರೂಪಿಸಲಾಗಿದೆ. ಇದೊಂದು ಪ್ರಚಾರದ ತುಣುಕು. ಈ ಸಿನಿಮಾವನ್ನು ಏನಾದರೂ ಈಗ ಜನ ನೋಡಿದರೆ, ಅದು ಟಿವಿಕೆಗೆ ದೊಡ್ಡ ಲಾಭ ತಂದುಕೊಡಲಿದೆ. ಇದು ವಿಜಯ್ ಟಾರ್ಗೆಟ್ ಮಾಡಿರುವ ಬಿಜೆಪಿ ಅಥವಾ ಡಿಎಂಕೆಗೆ ಹೊಡೆತ ನೀಡಲಿದೆ ಎಂದಿದ್ದಾರೆ.
ಇದು ಒಳಗಿನವರದ್ದೇ ಕೆಲಸ
ನನಗೆ ಕಾಡುತ್ತಿರುವ ಪ್ರಶ್ನೆ, ಹೇಗೆ ಒಂದು ಬಿಗ್ ಬಜೆಟ್ ಹಾಗೂ ಬ್ಯಾನರ್ನ ಚಿತ್ರದ ದೃಶ್ಯಗಳು ಅಷ್ಟು ಸುಲಭವಾಗಿ ಜಾಲತಾಣಗಳಲ್ಲಿ ಸೋರಿಕೆ ಆಗುತ್ತವೆ? ಅದು ಎಚ್ಡಿ ಪ್ರಿಂಟ್, ಎಡಿಟ್ ಆಗದಿರುವ ಸೀನ್ಗಳು ಇಡೀ ಚಿತ್ರತಂಡದವರ ಕಣ್ತಪ್ಪಿಸಿ ಹೇಗೆ ಹೊರಬರಲು ಸಾಧ್ಯ? ನನಗೆ ಅನಿಸೋದು. ಇದೆಲ್ಲ ಒಳಗಿನವರದ್ದೇ ಕೆಲಸ ಅಂತ. ಸೆನ್ಸಾರ್ ಮಂಡಳಿ ಮತ್ತು ಪ್ರಸಾರ ಸಚಿವಾಲಯದ ಭದ್ರತಾ ಪ್ರೋಟೋಕಾಲ್‌ಗಳನ್ನು ತಪ್ಪಿಸಿ, ಹೊರಬರುವುದು ಅಷ್ಟು ಸುಲಭವಿಲ್ಲ. ರಿಲೀಸ್ ಸಮಸ್ಯೆ ಎದುರಿಸುತ್ತಿರುವ ಚಿತ್ರತಂಡ, ಹೀಗಾದರೂ ಜನರಿಗೆ ತಮ್ಮ ಚಿತ್ರದ ಸಂದೇಶ ತಿಳಿಯಲಿ ಎಂದು ಮಾಡಿರುವ ತಂತ್ರ ಎಂದು ಹೇಳಿದ್ದಾರೆ,(ಏಜೆನ್ಸೀಸ್).