- ಸ್ಟಾರ್ ನಟರ ಸಿನಿಮಾಗಳ ರಿಲೀಸ್ ವಾರದಲ್ಲಿ ಹೊಸಬರ ಚಿತ್ರಗಳು ಪೋಸ್ಟ್ಪೋನ್
- ತಮಿಳು ನಟ ವಿಜಯ್ ಅಭಿನಯದ 'ಜನನಾಯಗನ್' ರಿಲೀಸ್ ಗೊಂದಲ
- ವಿಜಯ್ ಚಿತ್ರ ತೆರೆಗೆ ಬರುವ ವಾರದಲ್ಲಿ ಬೇರೆ ಚಿತ್ರಗಳು ಮುಂದೂಡಿಕೆ
- ಇದು ವಿಜಯ್ ಸಿನಿಮಾ ಕಥೆ ಮಾತ್ರವಲ್ಲ ಬೇರೆ ಚಿತ್ರರಂಗದಲ್ಲೂ ಇದೇ ಸಮಸ್ಯೆ
ಬೆಂಗಳೂರು: ಸ್ಟಾರ್ ನಟರ ಸಿನಿಮಾಗಳು ಅಂದಮೇಲೆ ಅಲ್ಲಿ ಭಾರೀ ನಿರೀಕ್ಷೆ, ದೊಡ್ಡ ಮಟ್ಟದ ಅಭಿಮಾನಿಗಳು, ವಿಪರೀತ ಕ್ರೇಜ್ ಮತ್ತು ಪ್ರಚಾರ ಕಾರ್ಯಗಳು ಎಂದಿಗಿಂತ ಜೋರಾಗಿರುತ್ತವೆ. ಈ ವಾರ ಅಥವಾ ಹಬ್ಬದ ದಿನಗಳಂದು ಸೂಪರ್ಸ್ಟಾರ್ಗಳ ಚಿತ್ರಗಳು ಅಖಾಡಕ್ಕಿಳಿಯುತ್ತಿವೆ ಎಂದು ಗೊತ್ತಾದರೆ, ಇತರೆ ಭಾಷೆಯ ಹಾಗೂ ಹೊಸಬರ ತಂಡಗಳು ತಮ್ಮ ಚಿತ್ರಗಳ ರಿಲೀಸ್ ದಿನಾಂಕವನ್ನು ತಕ್ಷಣವೇ ಮುಂದೂಡಿಕೆ ಮಾಡಿಕೊಳ್ಳುತ್ತವೆ. ಕಾರಣ, ಬಾಕ್ಸ್ ಆಫೀಸ್ನಲ್ಲಿ ಆಗುವ ಪೈಪೋಟಿ (Kollywood).
ಸ್ಟಾರ್ ಹೀರೋಗಳ ಚಿತ್ರ ತೆರೆಕಾಣಲು ಸಿದ್ಧವಾಗಿದೆ ಎಂದಾದರೆ, ಅದೇ ವಾರದಲ್ಲಿ ಇನ್ನೊಬ್ಬ ಸ್ಟಾರ್ ನಟನ ಸಿನಿಮಾ ತೆರೆಗೆ ಬರುವುದು ಅಪರೂಪ. ಕೆಲವೇ ಕೆಲವು ನಿರ್ಮಾಪಕರು ಮಾತ್ರ ರಿಲೀಸ್ ಕ್ಲ್ಯಾಶ್ ಬಗ್ಗೆ ಹೆಚ್ಚು ಚಿಂತಿಸದೆ, ಧೈರ್ಯದಿಂದ ರಿಲೀಸ್ಗೆ ಮುಂದಾಗುತ್ತಾರೆ. ಆದರೆ, ಹೊಸಬರ ತಂಡಗಳು ಮತ್ತು ಹೊಸ ನಟರ ಚಿತ್ರಗಳು ಈ ಸಮಯದಲ್ಲಿ ರಿಲೀಸ್ ನೋಡಲು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ಸಿನಿಮಾದ ದಿನಾಂಕವನ್ನು ಒಂದು ವಾರ ಹಿಂದೆ ಅಥವಾ ಮುಂದಕ್ಕೆ ಹಾಕಿಕೊಳ್ಳಲಾಗುತ್ತೆ. ಸದ್ಯ ಇದೇ ಪರಿಸ್ಥಿತಿ ತಮಿಳು ಚಿತ್ರರಂಗದ ಹಲವು ಚಿತ್ರಗಳಿಗೆ ಆಗುತ್ತಿವೆ. ಅದಕ್ಕೆ ಕಾರಣ, ಬಹುನಿರೀಕ್ಷಿತ 'ಜನನಾಯಗನ್' ರಿಲೀಸ್ ಗೊಂದಲ!
ರಿಲೀಸ್ ಮಾಡಿದ್ರೆ ನಿರ್ಮಾಪಕರಿಗೆ ಕಷ್ಟ-ನಷ್ಟ!
ತಮಿಳಿಗ ವೆಟ್ರಿ ಕಳಗಂ (TVK) ಪಕ್ಷವನ್ನು ಸ್ಥಾಪಿಸಿ ಪೂರ್ಣ ಪ್ರಮಾಣದಲ್ಲಿ ರಾಜಕಿಯಕ್ಕೆ ಧುಮುಕಿರುವ ಕಾಲಿವುಡ್ ಸೂಪರ್ ಸ್ಟಾರ್, ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ (Jana Nayagan) ಬಿಡುಗಡೆಗೆ ಸದ್ಯ ಸಾಕಷ್ಟು ಅಡೆತಡೆಗಳು ಎದುರಾಗಿವೆ. ಸೆನ್ಸಾರ್ ಮಂಡಳಿಯಿಂದ ಆದ ತೊಂದರೆಗಳು ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ವಿಜಯ್ ಚಿತ್ರವನ್ನು ಬಲವಂತವಾಗಿ ಮುಂದೂಡುವಂತೆ ಮಾಡಿದೆ. ಒಂದೆಡೆ, ಇದು ಚಿತ್ರತಂಡಕ್ಕೆ ಮತ್ತು ದಳಪತಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರೆ, ಇತರೆ ಚಿತ್ರಗಳಿಗೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಆಗುತ್ತಿರುವುದು ಮತ್ತೊಂದೆಡೆ.
ಮುಂದೂಡಿಕೆ ಗೊಂದಲ
ವಿಜಯ್ ಅವರ ಜನನಾಯಗನ್ ಚಿತ್ರ ಮುಂದೂಡಿಕೆ ಆಗ್ತಿದ್ದಂತೆ, ಆ ವಾರದಲ್ಲಿ ತೆರೆ ಕಾಣಲು ಪಟ್ಟಿಯಲ್ಲೇ ಇಲ್ಲದ ಹೊಸಬರ ಸಿನಿಮಾಗಳು, ದಿಢೀರ್ ಎಂಬಂತೆ ತಮ್ಮ ಚಿತ್ರಗಳ ರಿಲೀಸ್ ಡೇಟ್ಗಳನ್ನು ಬದಲಿಸಿಕೊಂಡಿವೆ. ಇದು ಕೆಲವರಿಗೆ ಪಾಸಿಟಿವ್ ಆದರೆ, ಇನ್ನೂ ಕೆಲವು ಚಿತ್ರಗಳ ನಿರ್ಮಾಪಕರಿಗೆ ನಷ್ಟದ ಭೀತಿಯನ್ನು ಮೂಡಿಸಿದೆ. ವಿಜಯ್ ಸಿನಿಮಾ ರಿಲೀಸ್ ಆಗುವ ವಾರ ಬಿಟ್ಟು ಅದರ ಮುಂದಿನ ವಾರಗಳಲ್ಲಿ ಅಥವಾ ಹಿಂದಿನ ವಾರಗಳಲ್ಲಿ ತಮ್ಮ ಸಿನಿಮಾಗಳನ್ನು ತೆರೆಗೆ ತರುವ ಯೋಚನೆಗಳು ಆಯಾ ಚಿತ್ರತಂಡದ್ದು. ಅದಕ್ಕಾಗಿ, ಜನನಾಯಗನ್ ಅಧಿಕೃತ ರಿಲೀಸ್ ದಿನಾಂಕದ ಬಗ್ಗೆ ಹೆಚ್ಚು ಗಮನ ಹರಿಸಿವೆ. ಅಕಸ್ಮಾತ್, ವಿಜಯ್ ಅವರ ಸಿನಿಮಾ ಬಿಡುಗಡೆಯಂದೇ ತಮ್ಮ ಸಿನಿಮಾವನ್ನು ತೆರೆಗೆ ತಂದರೆ ಎಲ್ಲಿ ಸೋಲು ಅನುಭವಿಸುವ ಪರಿಸ್ಥಿತಿ ಎದುರಾಗುತ್ತೋ ಎಂಬ ಭೀತಿ ಕಾಡುತ್ತಿವೆ.
ಫೆಬ್ರವರಿ 12 ಅಥವಾ...
ಆರಂಭದಲ್ಲಿ ಜ.9ಕ್ಕೆ ತೆರೆ ಕಾಣಲು ಸಜ್ಜಾಗಿದ್ದ ಜನನಾಯಗನ್ ಚಿತ್ರತಂಡ, ಇಲ್ಲಿಯವರೆಗೆ ರಿಲೀಸ್ಗಾಗಿ ಯಾವುದೇ ದಿನಾಂಕವನ್ನು ಘೋಷಣೆ ಮಾಡಿಲ್ಲ. ಇದು ದಳಪತಿ ವಿಜಯ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೆ, ಇತ್ತೀಚಿನ ಸಿನಿ ವರದಿಗಳ ಪ್ರಕಾರ, ಫೆಬ್ರವರಿ 12 ಅಥವಾ 26ರಂದು ಬಿಡುಗಡೆಗೊಳ್ಳಲು ಎದುರುನೋಡುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಏನು ಹೇಳುತ್ತೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.