ನಾನು ಪರಪುರುಷನ ಜತೆ ಹೋದರೆ ಈ ದೇಶದ ಜನರು ಮೌನವಾಗಿರುತ್ತಾರೆಯೇ? ಜಯಂ ರವಿಗೆ ಮಾಜಿ ಪತ್ನಿ ಟಾಂಗ್! Ravi Mohan
- ತಮಿಳು ನಟರ ವಿರುದ್ಧ ಜಯಂ ರವಿ ಖ್ಯಾತಿಯ ನಟ ರವಿ ಮೋಹನ್ ಅವರ ಮಾಜಿ ಪತ್ನಿ ಆರತಿ ಟೀಕಾ ಪ್ರಹಾರ
- ಪುರುಷರು ಈ ಜಗತ್ತಿನ ಅತಿದೊಡ್ಡ ಸಂತ್ರಸ್ತರು ಎಂಬ ರವಿ ಹೇಳಿಕೆಗೆ ಆಕ್ರೋಶ ಹೊರಹಾಕಿದ ಆರತಿ
- ವಿಕ್ಟಿಮ್ ಕಾರ್ಡ್ ಆಟದಲ್ಲಿ ತಮ್ಮ ಮಾಜಿ ಗಂಡನ ದ್ವಿಮುಖ ನೀತಿಯನ್ನು ಟೀಕಿಸಿದ ಆರತಿ
Ravi Mohan : ಡಿವೊರ್ಸ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಹೊಸ ಸಂಬಂಧಗಳನ್ನು ಬೆಳೆಸುತ್ತಿರುವ ತಮಿಳು ನಟರ ವಿರುದ್ಧ ಜಯಂ ರವಿ ಖ್ಯಾತಿಯ ನಟ ರವಿ ಮೋಹನ್ ಅವರ ಮಾಜಿ ಪತ್ನಿ ಆರತಿ ಟೀಕಾ ಪ್ರಹಾರ ನಡೆಸಿದ್ದಾರೆ. ಪುರುಷರು ಈ ಜಗತ್ತಿನ ಅತಿದೊಡ್ಡ ಸಂತ್ರಸ್ತರು ಎಂಬ ರವಿ ಮೋಹನ್ ಅವರ ಹೇಳಿಕೆ ಬೆನ್ನಲ್ಲೇ ಆರತಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರವಿ ಮೋಹನ್ ಮತ್ತು ಆರತಿ ನಡುವೆ ಡಿವೋರ್ಸ್ ವಿವಾದ ನಡೆಯುತ್ತಿರುವುದು ಗೊತ್ತೇ ಇದೆ. ಇದಕ್ಕೆ ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆಗಿನ ಲವ್ ಅಫೇರ್ ಕಾರಣ ಎಂಬ ಚರ್ಚೆ ತುಂಬಾ ದಿನಗಳಿಂದಲೂ ನಡೆಯುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರವಿ ಅವರು ಕೆನಿಶಾ ಜತೆಗಿರುವ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾವಾಗ ಫೋಟೋಗಳು ವೈರಲ್ ಆಯಿತೋ ರವಿ ಮೇಲೆ ಸೈಬರ್ ದಾಳಿಗಳು ಕೂಡ ನಡೆಯುತ್ತಿವೆ.
ತಮ್ಮ ಮೇಲಿನ ಸೈಬರ್ ದಾಳಿಗಳಿಗೆ ಇತ್ತೀಚೆಗಷ್ಟೇ ಖಡಕ್ ಉತ್ತರ ನೀಡಿರುವ ರವಿ ಮೋಹನ್, ಮಹಿಳೆಯರು ಮಾತ್ರ ಸರಿ ಎಂದು ನೀವು ಭಾವಿಸುತ್ತೀರಿ. ಆದರೆ, ಪುರುಷರು ಈ ಜಗತ್ತಿನ ಅತಿ ದೊಡ್ಡ ಸಂತ್ರಸ್ತರು. ನಮ್ಮ ಕಾನೂನು ವ್ಯವಸ್ಥೆಯು ಕೂಡ ಅದನ್ನು ಅರಿತುಕೊಂಡಿದೆ. ಒಂದು ದಿನ ನಿಮಗೆ ನನ್ನ ಮನಸ್ಸು ಏನೆಂದು ಗೊತ್ತಾಗುತ್ತದೆ ಮತ್ತು ನಾನು ಇಷ್ಟ ಪಟ್ಟ ಜನರಿಗೆ ಏನು ಮಾಡಿದ್ದೇನೆ ಅನ್ನೋದು ಸಹ ತಿಳಿಯುತ್ತದೆ. ಹೀಗಾಗಿ ನನ್ನನ್ನು ಬದುಕಲು ಬಿಡಿ, ನಿಮ್ಮ ಕೆಟ್ಟ ಆಲೋಚನೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ನಾನು ನನ್ನ ಹಾದಿಗೆ ಹಿಂತಿರುಗುತ್ತಿದ್ದೇನೆ ಎಂದು ರವಿ ಮೋಹನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಒಂದು ವಿಡಿಯೋ ಸಹ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕೇವಲ ಸನ್ನೆಗಳ ಮೂಲಕ ಮಾತ್ರ ಮಾತನಾಡಿದ್ದಾರೆ.
ರವಿ ಮೋಹನ್ ವಿಡಿಯೋ ಗಮನಿಸಿರುವ ಮಾಜಿ ಪತ್ನಿ ಆರತಿ, ಸಂತ್ರಸ್ತರ ವಿಚಾರದಲ್ಲಿ ಅಥವಾ ವಿಕ್ಟಿಮ್ ಕಾರ್ಡ್ ಆಟದಲ್ಲಿ ತಮ್ಮ ಮಾಜಿ ಗಂಡನ ದ್ವಿಮುಖ ನೀತಿಯನ್ನು ಟೀಕಿಸಿದ್ದಾರೆ. ವಿಚ್ಛೇದನ ಅಂತಿಮಗೊಳ್ಳುವ ಮೊದಲೇ ನಾನು ಇನ್ನೊಬ್ಬ ಪುರುಷನೊಂದಿಗೆ ಹೊರಗೆ ಹೋದರೆ, ಈ ದೇಶದ ಜನರು ಮೌನವಾಗಿರುತ್ತಾರೆಯೇ? ಇಷ್ಟೆಲ್ಲಾ ಮಾಡಿದ ನಂತರ, ಮಹಿಳೆಯರು ಈ ಜಗತ್ತಿನಲ್ಲಿ ಅತಿದೊಡ್ಡ ಸಂತ್ರಸ್ತರು ಎಂಬ ನನ್ನ ಮಾತನ್ನು ಯಾರಾದರೂ ಒಪ್ಪುತ್ತಾರೆಯೇ? ಖಂಡಿತ ಇಲ್ಲ. ಹಾಗಿದ್ದಲ್ಲಿ, ಅದೇ ರೀತಿ ಮಾಡುವ ಪುರುಷರನ್ನೂ ನಾವು ಪ್ರಶ್ನಿಸಬೇಕು. ಅಂತಹ ಕೆಲಸಗಳನ್ನು ಮಾಡುವ ಮೂಲಕ ದೊಡ್ಡ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ ಎಂದು ಆರತಿ ಟೀಕಿಸಿದ್ದಾರೆ.
ಅಂದಹಾಗೆ, ಈ ಪೋಸ್ಟ್ ಮೂಲಕ ತಮ್ಮ ಮಾಜಿ ಪತಿ ರವಿ ಮೋಹನ್ ಮಾತ್ರವಲ್ಲದೆ, ಪರೋಕ್ಷವಾಗಿ ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧವನ್ನೂ ಆರತಿ ಟೀಕಿಸಿದ್ದಾರೆ. ತಮ್ಮ ಮಕ್ಕಳಿಗೆ ಜನ್ಮ ನೀಡುವಾಗ ಬಳಲಿದ ತಮ್ಮ ಹೆಂಡತಿಯರ ಬಗ್ಗೆ ಅವರಿಗೆ ಪ್ರೀತಿ ಅಥವಾ ಕರುಣೆ ಇಲ್ಲ. ಇಷ್ಟೆಲ್ಲಾ ಮಾಡಿದರೂ, ಅವರು ನ್ಯಾಯಾಲಯ ಮತ್ತು ಕಾನೂನು ನಮ್ಮ ಪರತವಾಗಿದೆ ಮತ್ತು ತಮ್ಮನ್ನು ಸಂತ್ರಸ್ತರು ಎಂದು ಕರೆದುಕೊಳ್ಳುತ್ತಿದ್ದಾರೆ ಅಂತ ಆರತಿ ಕಿಡಿಕಾರಿದ್ದಾರೆ.
ಅಂದಹಾಗೆ, 15 ವರ್ಷಗಳ ದಾಂಪತ್ಯದ ನಂತರ 2024 ರಲ್ಲಿ ಜಯಂ ರವಿ, ಆರತಿಯಿಂದ ಬೇರ್ಪಟ್ಟರು. ನಂತರ, 2025 ರಲ್ಲಿ, ನಟ ಕೆನಿಷಾ ಜೊತೆ ರವಿ ಅವರು ಮದುವೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿ ದೊಡ್ಡ ಚರ್ಚೆಯಾಗಿತ್ತು. ಅದೇ ರೀತಿ, ನಟ ವಿಜಯ್ ಮತ್ತು ಸಂಗೀತಾ 27 ವರ್ಷಗಳ ದಾಂಪತ್ಯದ ನಂತರ ತಾವು ಬೇರ್ಪಡುವುದಾಗಿ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯ್ ಕೂಡ ಮದುವೆಯ ಆರತಕ್ಷತೆಯಲ್ಲಿ ನಟಿ ತ್ರಿಷಾ ಜೊತೆ ಒಂದೇ ಬಣ್ಣದ ಉಡುಪು ಧರಿಸಿ ಕಾಣಿಸಿಕೊಂಡರು. ಇದು ಕೂಡ ವಿವಾದದ ಸ್ವರೂಪ ಪಡೆದುಕೊಂಡಿತು, (ಏಜೆನ್ಸೀಸ್).