- ಇಂದು 75ನೇ ವಸಂತಕ್ಕೆ ಕಾಲಿಟ್ಟ ಅಭಿಮಾನಿಗಳ ನೆಚ್ಚಿನ ತಲೈವಾ ಸೂಪರ್ಸ್ಟಾರ್ ರಜಿನಿಕಾಂತ್
- ಚಿತ್ರರಂಗ ಸೇರಿದಂತೆ ಅನೇಕ ಗಣ್ಯರಿಂದ ರಜಿನಿಗೆ ಶುಭಾಶಯಗಳ ಮಹಾಪೂರ
- ರಜಿನಿ ಪೋಸ್ಟರ್ ಮುಂದೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ ಅಭಿಮಾನಿಗಳು
- ರಜಿನಿ ಬಗ್ಗೆ ಇದುವರೆಗೂ ಗೊತ್ತಿರದ ಸಂಗತಿಯೊಂದು ಇದೀಗ ಬಯಲು
ಚೆನ್ನೈ: ಸೂಪರ್ಸ್ಟಾರ್ ರಜಿನಿಕಾಂತ್ ( Rajinikanth ) ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಭಾರತ ಮಾತ್ರವಲ್ಲ ವಿದೇಶದಲ್ಲೂ ರಜಿನಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಅಭಿಮಾನಿಗಳ ನೆಚ್ಚಿನ ತಲೈವಾ ಇಂದು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗ ಸೇರಿದಂತೆ ಅನೇಕ ಗಣ್ಯರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅಭಿಮಾನಿಗಳಂತೂ ರಜಿನಿ ಪೋಸ್ಟರ್ ಮುಂದೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಕೊನೆಯದಾಗಿ ಬಿಡುಗಡೆಯಾದ ರಜಿನಿ ನಟನೆಯ ಕೂಲಿ ಸಿನಿಮಾ ಸೂಪರ್ ಹಿಟ್ ಆಯಿತು. ಸದ್ಯ ರಜಿನಿ ಅವರು ಜೈಲರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2023ರಲ್ಲಿ ತೆರೆಕಂಡ ಜೈಲರ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದರಿಂದ ಜೈಲರ್ 2 ಸಿನಿಮಾ ಮೂಲಕ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಮತ್ತು ರಜಿನಿ ಮತ್ತೆ ಒಂದಾಗಿದ್ದಾರೆ. ಇದರೊಂದಿಗೆ ರಜಿನಿ ಅವರು ಕಮಲ್ ಹಾಸನ್ ಅವರ ರಾಜ್ಕಮಲ್ ಇಂಟರ್ನ್ಯಾಷನಲ್ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಒಂದು ಸಿನಿಮಾ ಮಾಡಲಿದ್ದಾರೆ.
ಅಂದಹಾಗೆ ಪ್ರತಿಯೊಬ್ಬ ವ್ಯಕ್ತಿಯ ಲೈಫ್ನಲ್ಲೂ ಒಂದು ಪ್ರೇಮ ಕತೆ ಇದ್ದೇ ಇರುತ್ತದೆ. ರಜಿನಿಕಾಂತ್ ಅವರು ಲತಾ ಅವರನ್ನು ಪ್ರೀತಿಸಿ 1981ರಲ್ಲಿ ಮದುವೆಯಾಗಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಐಶ್ವರ್ಯಾ ಮತ್ತು ಸೌಂದರ್ಯ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿರುವುದು ಗೊತ್ತಿದೆ. ಆದರೆ, ರಜಿನಿ ಬಗ್ಗೆ ಇದುವರೆಗೂ ಗೊತ್ತಿರದ ಸಂಗತಿಯೊಂದು ಇದೀಗ ಬಯಲಾಗಿದೆ.
ಯಾವುದು ಆ ಸಂಗತಿ ಅಂದರೆ ರಜಿನಿಕಾಂತ್ ಅವರು ಖ್ಯಾತ ನಟಿಯ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು. ಆದರೆ, ಆ ಲವ್ ಯಶಸ್ಸು ಕಾಣದೇ ಫೇಲ್ಯೂರ್ ಆಯಿತು. ರಜಿನಿಯ ಹೃದಯ ಕದ್ದ ಆ ಚೆಲುವೆ ಯಾರೆಂದರೆ, ಶ್ರೀದೇವಿ.
ವಿವರಣೆಗೆ ಬರುವುದಾದರೆ, ಶ್ರೀದೇವಿ ಅವರು ಬಾಲ ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಇದಾದ ಬಳಿಕ ಸ್ಟಾರ್ ನಾಯಕಿಯಾಗಿ ಹೊರಹೊಮ್ಮಿದರು. ರಜಿನಿಕಾಂತ್ ಜತೆ ಶ್ರೀದೇವಿ ಅವರು 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ ಜತೆ ನಟಿಸುತ್ತಾ ಅವರ ಪ್ರೀತಿಯ ಬಲೆಯಲ್ಲಿ ರಜಿನಿ ಬಿದ್ದಿದ್ದರಂತೆ. ಶ್ರೀದೇವಿ ಕುಟುಂಬದ ಜತೆಯು ರಜಿನಿ ಒಳ್ಳೆಯ ಸಂಬಂಧ ಹೊಂದಿದ್ದರು. ಶ್ರೀದೇವಿಗೆ ಪ್ರೇಮ ನಿವೇದನೆ ಮಾಡಿ, ತಮ್ಮ ಪಾಲಕರಿಂದ ಹೆಣ್ಣು ಕೇಳಿಸಲು ಸಹ ರೆಡಿಯಾಗಿದ್ದರಂತೆ.
ಶ್ರೀದೇವಿ ಅವರ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ರಜಿನಿ ಮುಂದಾದಾಗ ಇದ್ದಕ್ಕಿದ್ದಂತೆ ಶ್ರೀದೇವಿ ಮನೆಯಲ್ಲಿ ಕರೆಂಟ್ ಹೋಯಿತಂತೆ. ಬಳಿಕ ಪ್ರೀತಿ ಹೇಳಿಕೊಳ್ಳಲು ಇದು ಒಳ್ಳೆಯ ಸಂದರ್ಭವಲ್ಲ ಅಂದುಕೊಂಡು ಅಲ್ಲಿಂದ ವಾಪಸ್ ಬಂದರಂತೆ. ಆಮೇಲೆ ಕಾರಣಾಂತರಗಳಿಂದ ಅದು ನೆರವೇರಲೇ ಇಲ್ಲ. ಈ ಸಂಗತಿಯನ್ನು ಖ್ಯಾತ ನಿರ್ದೇಶಕ ಬಾಲಚಂದರ್ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು, (ಏಜೆನ್ಸೀಸ್).