ತಮಿಳು ನಟ ಪ್ರದೀಪ್ ರಂಗನಾಥನ್
- ತಮಿಳು ನಟ ಪ್ರದೀಪ್ ರಂಗನಾಥನ್ ಅಭಿನಯದ 'LIK' ಚಿತ್ರಕ್ಕೆ ಕಡೆಗೂ ಫಿಕ್ಸ್ ಆಯ್ತು ರಿಲೀಸ್ ಡೇಟ್
- ಪದೇ ಪದೇ ಮುಂದೋಗುತ್ತಿದ್ದ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ನಿಗದಿ
- ಹೀರೋ ಮೆಟಿರಿಯಲ್ ಅಲ್ಲದ ನಟನಿಂದಲೇ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳು
ಚೆನ್ನೈ: ತಮಿಳಿನ ಸೂಪರ್ಹಿಟ್ 'ಲವ್ ಟುಡೇ', ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಭರ್ಜರಿ ಯಶಸ್ಸು ಕಂಡಿರುವ ನಟ ಪ್ರದೀಪ್ ರಂಗನಾಥನ್ (Pradeep Ranganathan), ಇದೀಗ ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಲಗ್ಗೆಯಿಡಲು ತುದಿಗಾಲಿನಲ್ಲಿದ್ದಾರೆ. ಈ ಚಿತ್ರದ ಮೇಲೆ ಸದ್ಯ ಅವರ ಯುವ ಅಭಿಮಾನಿಗಳ ಬಳಗ ಹಾಗೂ ತಮಿಳು ಸಿನಿಪ್ರಿಯರು ಸಖತ್ ಥ್ರಿಲ್ ಆಗಿದ್ದಾರೆ. ಯಾಕಂತ ಕಾತರ ಎಂಬ ಪ್ರಶ್ನೆಗೆ 'ಲವ್' ಅನ್ನೋದೇ ಉತ್ತರ.
18,17,18...
ವಿಘ್ನೇಶ್ ಶಿವನ್ ನಿರ್ದೇಶನದ ಹಾಗೂ ಪ್ರದೀಪ್ ಮತ್ತು ನಟಿ ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸೈ-ಫೈ, ಕಾಮಿಡಿ ಜಾನರ್ ಬಹುನಿರೀಕ್ಷಿತ 'ಲವ್ ಇನ್ಶೂರೆನ್ಸ್ ಕಂಪನಿ' ಚಿತ್ರವು ಇದೇ ಏಪ್ರಿಲ್ 03ಕ್ಕೆ ತೆರೆಕಾಣಲು ಸಿದ್ಧವಾಗಿದೆ. ಇದು ಅಂತಿಮ ದಿನಾಂಕವಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ. ಇದಕ್ಕೂ ಮೊದಲು, 2025ರಲ್ಲೇ ತೆರೆಗೆ ಬರಬೇಕಿದ್ದ ಪ್ರದೀಪ್ ಸಿನಿಮಾ, ಆರಂಭದಲ್ಲಿ ಸೆ.18ರಂದು ರಿಲೀಸ್ಗೆ ಫಿಕ್ಸ್ ಆಗಿತ್ತು. ಆನಂತರ ಅ.17 ಮತ್ತು ಕೊನೆಯದಾಗಿ ಡಿ.18ಕ್ಕೆ ಮುಂದೂಡಿಕೆಯಾಯಿತು. ಆದರೆ, ಆ ದಿನಕ್ಕೂ ಸಿನಿಮಾ ಬಿಡುಗಡೆಯಾಗಲಿಲ್ಲ. ನಂತರದಲ್ಲಿ, ಫೆ.12ಕ್ಕೆ ಎನ್ನಲಾಯಿತು. ಆದರೀಗ, ಏ.03ರಂದು ಖಚಿತ ಎಂದು ಸ್ಪಷ್ಟಪಡಿಸಿದೆ ಚಿತ್ರತಂಡ.
LIK?
ವಿಘ್ನೇಶ್ ಶಿವನ್ ನಿರ್ದೇಶಿಸಿರುವ ಹಾಗೂ ನಿರ್ಮಾಣ ಮಾಡಿರುವ 'ಲವ್ ಇನ್ಶೂರೆನ್ಸ್ ಕಂಪನಿ' ಚಿತ್ರದಲ್ಲಿ ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವನ್ ಮತ್ತು ನಟಿ ನಯನತಾರಾ ಬಂಡವಾಳ ಹೂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿರುವುದು ವಿಶೇಷ. ಈ ಚಿತ್ರವೂ ಲವ್ ಜಾನರ್ ಆಗಿದ್ದು, ಪ್ರದೀಪ್ ಚಿತ್ರಗಳಲ್ಲಿ ಲವ್ ಕಂಟೆಂಟ್ ಇಲ್ಲದಿರಲು ಸಾಧ್ಯವೇ ಇಲ್ವಾ? ಎನ್ನುವಂತಾಗಿದೆ.
'ಹೀರೋ ಮೆಟಿರಿಯಲ್' ಅಲ್ಲದ ನಟ
ಸಾಧಾರಣ ಮೈಕಟ್ಟು, ಸಿಂಪಲ್ ಲುಕ್ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್, ಇದೀಗ ತಮ್ಮ ಅಭಿಮಾನಿಗಳ ಬಳಗ ಮಾತ್ರವಲ್ಲದೇ ಅವಕಾಶಗಳು ಹಾಗೂ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದು ಗಮನಾರ್ಹ. 2022ರಲ್ಲಿ, ಪ್ರದೀಪ್ 'ಲವ್ ಟುಡೇ' ಎಂಬ ಚಿತ್ರದ ಮುಖೇನ ಕಾಲಿವುಡ್ಗೆ ಪಾದಾರ್ಪಣೆ ಮಾಡಿದ ಅವರು, 'ಡ್ರ್ಯಾಗನ್' ಚಿತ್ರದಲ್ಲಿ ಅಪಾರ ಯಶಸ್ಸು ಕಂಡರು. ಇದಾದ ಬಳಿಕ ತೆರೆಕಂಡ 'ಡ್ಯೂಡ್'ನಲ್ಲಿ ಅಂತಹ ಗೆಲುವು ಕಾಣಲಿಲ್ಲ. ಆದರೆ, ಅವರ ನಟನೆಗೆ ಎಂದಿನಂತೆ ಪ್ರಶಂಸೆಗಳು ವ್ಯಕ್ತವಾಯಿತು.
'ಲವ್' ಸಿನಿಮಾಗಳಿಂದಲೇ ಪ್ರದೀಪ್ಗೆ ಭರ್ಜರಿ ಯಶಸ್ಸು
'ಲವ್ ಟುಡೇ', 'ಡ್ರ್ಯಾಗನ್' ಮತ್ತು 'ಡ್ಯೂಡ್' ಈಗಿನ ಕಾಲಘಟ್ಟದ ಯುವಜನತೆಯ ಪ್ರೇಮಕಥೆಗಳು ಮತ್ತು ಮನಸ್ಥಿತಿಗಳ ಮೇಲೆ ಹೆಚ್ಚು ಫೋಕಸ್ ಮಾಡಲಾದ ಚಿತ್ರಗಳು. ಈ ಮೂರರಲ್ಲೂ ಲವ್ಸ್ಟೋರಿ, ಕಾಮಿಡಿ ಮತ್ತು ಒಂದೊಳ್ಳೆ ಸಂದೇಶಗಳಿವೆ. ಇದು ಸಿನಿಮಾ ನೋಡಲು ಬರುವ ಪ್ರೇಕ್ಷಕನನ್ನು ಕಥೆಗೆ ಹೊಂದಿಕೊಳ್ಳುವಂತೆ ಮಾಡಿವೆ ಮತ್ತು ಭರಪೂರ ಮನರಂಜನೆಯನ್ನು ನೀಡಿವೆ. ಈ ಚಿತ್ರಗಳೇ ಇಂದು ಪ್ರದೀಪ್ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, 'ಲವ್ ಇನ್ಶೂರೆನ್ಸ್ ಕಂಪನಿ' ಮೇಲೂ ಅದೇ ಭರವಸೆ, ನಿರೀಕ್ಷೆಗಳು ಮೂಡುವಂತೆ ಮಾಡಿದೆ. ಡ್ಯೂಡ್ ಫ್ಲಾಪ್ ಆಗಿದ್ದು, 'ಎಲ್ಐಕೆ' ಹೇಗೆ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).