ತಮಿಳು ನಟ ಪ್ರದೀಪ್ ರಂಗನಾಥನ್  
ಕಾಲಿವುಡ್

8 ಸಿನಿಮಾ, 25 ಕೋಟಿ ರೂ. ಸಂಭಾವನೆ! 'ತಲೈವಾ' ಫ್ಯಾನ್​ಗೆ ಸಖತ್​ ಡಿಮಾಂಡ್; ಮುಂದಿನ 2 ವರ್ಷ ಲಾಕ್​ | Pradeep Ranganathan

ಪ್ರಮುಖ ಮುಖ್ಯಾಂಶಗಳು

  • ಯುವನಟ ಪ್ರದೀಪ್ ರಂಗನಾಥನ್​ಗೆ ಹೆಚ್ಚಿದ ಡಿಮಾಂಡ್​
  • ಲವ್​ ಜಾನರ್​ ಬಿಟ್ಟು ಹೋಗದ ಪ್ರದೀಪ್​ರಿಂದ ಮತ್ತೊಂದು ಬಹುನಿರೀಕ್ಷಿತ ಚಿತ್ರ
  • ರಜಿನಿಕಾಂತ್ ಅಪ್ಪಟ ಅಭಿಮಾನಿಗೆ ಕಾಲಿವುಡ್​ನಲ್ಲಿ ಸಖತ್ ಬೇಡಿಕೆ
ಚೆನ್ನೈ: ತಮಿಳಿನ ಸೂಪರ್​ಹಿಟ್ 'ಲವ್​ ಟುಡೇ',​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಭರ್ಜರಿ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಇದೀಗ ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಈ ಚಿತ್ರದ ಮೇಲೆ ಸದ್ಯ ಅವರ ಯುವ ಅಭಿಮಾನಿಗಳ ಬಳಗ ಹಾಗೂ ತಮಿಳು ಸಿನಿಪ್ರಿಯರು ಸಖತ್ ಥ್ರಿಲ್​ ಆಗಿದ್ದಾರೆ. ಯಾಕಂತ ಕಾತರ ಎಂಬ ಪ್ರಶ್ನೆಗೆ 'ಲವ್​' ಅನ್ನೋದೇ ಉತ್ತರ.

ಪದೇ ಪದೇ ರಿಲೀಸ್​ ಮುಂದೂಡಿಕೆ

ಪ್ರದೀಪ್​ ನಟನೆಯ ಬಹುನಿರೀಕ್ಷಿತ 'ಲವ್​ ಇನ್ಶೂರೆನ್ಸ್ ಕಂಪನಿ' ಚಿತ್ರವು ತೆರೆಕಾಣಲು ಸಿದ್ಧವಾಗಿದೆ. ಈ ಹಿಂದೆ ಫೆ.12ಕ್ಕೆ ಸಿನಿಮಾ ಬಹುತೇಕ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ ಎಂದು ಸಿನಿ ವರದಿಗಳು ತಿಳಿಸಿತ್ತು. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ. ಈಗ ಅಧಿಕೃತ ರಿಲೀಸ್ ದಿನಾಂಕ ಯಾವಾಗ ಎಂಬ ಪ್ರಶ್ನೆ ಸದ್ಯ ಕಾಲಿವುಡ್​ನಲ್ಲಿ ತೀರ ಚರ್ಚೆಯಾಗುತ್ತಿದೆ.

'ಹೀರೋ ಮೆಟಿರಿಯಲ್​' ಅಲ್ಲದ ನಟ

ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಇದೀಗ ತಮ್ಮ ಅಭಿಮಾನಿಗಳ ಬಳಗ ಮಾತ್ರವಲ್ಲದೇ ಅವಕಾಶಗಳು ಹಾಗೂ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದೇ ಗಮನಾರ್ಹ. 2022ರಲ್ಲಿ, 'ಲವ್ ಟುಡೇ' ಎಂಬ ಚಿತ್ರದ ಮುಖೇನ ಕಾಲಿವುಡ್​ಗೆ ಪಾದಾರ್ಪಣೆ ಮಾಡಿದ ಅವರು, 'ಡ್ರ್ಯಾಗನ್​' ಚಿತ್ರದಲ್ಲಿ ಅಪಾರ ಯಶಸ್ಸು ಕಂಡರು. ಇದಾದ ಬಳಿಕ ತೆರೆಕಂಡ 'ಡ್ಯೂಡ್'​ನಲ್ಲಿ ಅಂತಹ ಗೆಲುವು ಕಾಣಲಿಲ್ಲ. ಆದರೆ, ಅವರ ನಟನೆಗೆ ಎಂದಿನಂತೆ ಪ್ರಶಂಸೆಗಳು ವ್ಯಕ್ತವಾಯಿತು. ​

'ತಲೈವಾ' ಅಪ್ಪಟ ಅಭಿಮಾನಿ

ಸಿನಿಪ್ರಿಯರ ನಾಡಿ ಮಿಡಿತ ಹಿಡಿದಿರುವ ಪ್ರದೀಪ್​, ತಮ್ಮ ಅಗಾಧ ಪ್ರತಿಭೆಯಿಂದಾಗಿ ಇಂದು ನೋಡುಗರನ್ನು ಮನರಂಜಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕಥೆಯಿಂದ ಆ ಚಿತ್ರ ಫ್ಲಾಪ್​ ಆದರೂ, ತಮ್ಮ ನಟನೆಯಿಂದ ಮಾತ್ರ ಥಿಯೇಟರ್​ಗೆ ಬಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಗೂ ಮೆಚ್ಚುಗೆ ಪಡೆಯುವಲ್ಲಿ ಪ್ರದೀಪ್​ ಹಿಂದೆ ಉಳಿದಿಲ್ಲ. ಇದಕ್ಕೆ ಅವರು ನಟಿಸಿರುವ ಸಿನಿಮಾಗಳೇ ಸಾಕ್ಷಿ. ಯುವ ನಟನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜೂನಿಯರ್ ರಜಿನಿಕಾಂತ್​ ಈಗ ದೊಡ್ಡ ಸೆಲೆಬ್ರಿಟಿಯಾಗಿ ಬೆಳೆದು ನಿಂತಿದ್ದಾರೆ.

ರಜಿನಿ ಸ್ವ್ಯಾಗ್​

ಪ್ರಸ್ತುತ, ಸ್ಟಾರ್​ ನಟನಾಗಿ ಕಾಲಿವುಡ್​ನಲ್ಲಿ ಮಿಂಚುತ್ತಿರುವ ಪ್ರದೀಪ್,​ಬಿಗ್ ಬ್ಯಾನರ್​ನ ಸಂಸ್ಥೆಗಳಿಂದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅನೇಕ ನಿರ್ಮಾಪಕರು ಪ್ರದೀಪ್​ ಜೊತೆಗೆ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ. ತಮಿಳಿನ ಸೂಪರ್​ಸ್ಟಾರ್ ರಜಿನಿಕಾಂತ್ ಅವರ ಅಪ್ಪಟ ಅಭಿಮಾನಿ ಆಗಿರುವ ಪ್ರದೀಪ್, ತಮ್ಮ ಸಿನಿಮಾಗಳಲ್ಲಿ ಅವರಂತೆಯೇ ಆ್ಯಕ್ಷನ್​ ಮಾಡೋದು, ಅನುಕರಣೆಯೊಂದಿಗೆ ಡೈಲಾಗ್ ಹೊಡೆಯುತ್ತಾರೆ. ಇದು ಯುವ ಅಭಿಮಾನಿಗಳನ್ನು ಹೆಚ್ಚು ಸೆಳೆಯುತ್ತಿದೆ.

ಸಂಭಾವನೆ ಏರಿಕೆ, ಹೆಚ್ಚಿದ ಡಿಮಾಂಡ್

ಪ್ರಸ್ತುತ 8 ಸಿನಿಮಾಗಳು ಪ್ರದೀಪ್ ಕೈಯಲ್ಲಿವೆ ಎಂಬ ಸಂಗತಿ ಕಾಲಿವುಡ್​ ಚಿತ್ರರಂಗಕ್ಕೆ ಆಶ್ಚರ್ಯ ತಂದಿದೆ. ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಪ್ರದೀಪ್ ರಂಗನಾಥನ್​ ಸಂಭಾವನೆ ಕೂಡ ಕ್ರಮೇಣವಾಗಿ ಏರಿಕೆಯಾಗಿದೆ. ಆರಂಭದಲ್ಲಿ 5ರಿಂದ 6 ಕೋಟಿ ಪಡೆಯುತ್ತಿದ್ದ ಪ್ರದೀಪ್, ಈಗ ತಮ್ಮ ಪ್ರತಿ ಚಿತ್ರಕ್ಕೂ 25 ಕೋಟಿ ರೂ.ವರೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ತಮಿಳು ಸಿನಿ ವರದಿಗಳು ತಿಳಿಸಿವೆ. ಮುಂದಿನ ಎರಡು ವರ್ಷಕ್ಕೆ ಪ್ರದೀಪ್​ ತಮ್ಮ ಚಿತ್ರಗಳಲ್ಲಿ ಫುಲ್​ ಬಿಜಿಯಾಗಲಿದ್ದು, ಕೇವಲ ನಟನೆಗೆ ಮಾತ್ರ ಸೀಮಿತವಾಗ್ತಾರಾ ಅಥವಾ ಹಿರಿಯ ನಟರಿಗೆ ಆ್ಯಕ್ಷನ್-ಕಟ್​ ಹೇಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.